ಮೂಡುಬಿದಿರೆ : ಕನ್ನಡ ಭಾಷಾ ಬೋಧಕರಿಗೆ ಕಾರ್ಯಾಗಾರ

ಶಿಕ್ಷಕರಿಗೆ ಕನ್ನಡ ಸಾಹಿತ್ಯ ಚರಿತ್ರೆ, ಭಾರತದ ಎಲ್ಲ ಮತಧರ್ಮಗಳು, ಸಾಹಿತ್ಯ, ಸಂಗೀತಾದಿ ಸಾಂಸ್ಕೃತಿಕ ಪರಿಚಯ ಒಂದಿಷ್ಟು ಇರಬೇಕಾಗಿದೆ; ಶರೀರ ಭಾಷೆಯನ್ನೂ ಬೋಧನೆಯ ಮಾಧ್ಯಮವಾಗಿ ಬಳಸುವ, ನೋಟ್ಸ್ ಕೊಡದೆ ಸ್ವಂತಿಕೆ ಬೆಳೆಸುವ, ಪಾಠ ಬಿಟ್ಟು ಅನ್ಯ ಲೇಖನಗಳ ಕಾಪಿ ಬರೆಸುವ, ಉಚ್ಚಾರ ಹೇಳಿಕೊಡುವ, ಪಾಠವನ್ನು ವಿಷಯದ ದೃಷ್ಟಿಗಿಂತಲೂ ಭಾಷೆಯ ದೃಷ್ಟಿಯಿಂದ ನೋಡುವ , ಕಲಿಸುವ ಸಾಮರ್ಥ್ಯವನ್ನು ಹೊಂದಿರಬೇಕಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಹೇಳಿದರು.

ಅವರು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲೂಕು ಘಟಕ ಮತ್ತು ವನಜಾಕ್ಷಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮೂಡುಬಿದಿರೆ ಕನ್ನಡ ಭವನದಲ್ಲಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರಿಗಾಗಿ ಏರ್ಪಡಿಸಲಾಗಿದ್ದ `ಕನ್ನಡ ಭಾಷಾ ಬೋಧನೆ ‘ ಕುರಿತಾದ ಒಂದು ದಿನದ ಕಾರ್ಯಾಗಾರದಲ್ಲಿ ಕನ್ನಡ ಬೋಧಕರಿಗೆ ಇರಬೇಕಾದ ಪೂರ್ವಜ್ಞಾನದ ಕುರಿತು ಮಾತನಾಡಿದ ಅವರು, ಬೋಧನೆಯ ಪರಿಣಾಮವಾಗಿ ವಿದ್ಯಾರ್ಥಿ ಬರೇ ಓದುವುದಲ್ಲ, ಕಲಿಯುವಂತಾಗಬೇಕಾಗಿದೆ ಎಂದರು.

moodabidre

ನಿವೃತ್ತ ಪ್ರಾಂಶುಪಾಲ ಡಾ. ಪಾದೆಕಲ್ಲು ವಿಷ್ಣು ಭಟ್ ಅವರು ಕನ್ನಡ ಬೋಧನೆಯಲ್ಲಿ ಭಾಷಾ ಶುದ್ಧಿ’ ಕುರಿತು ವಿಷಯ ಮಂಡಿಸಿ ಆನುಭವ ಭಾಷೆಗಿಂತ ಮಿಗಿಲು. ಭಾಷೆ ನಮ್ಮೆಲ್ಲ ಅನುಭವಗಳನ್ನು ವ್ಯಕ್ತಪಡಿಸಲಾಗದ ಮಿತಿಯನ್ನು ಹೊಂದಿದೆ. ಈ ತಿಳಿವಳಿಕೆಯೊಂದಿಗೆ, ಭಾಷಾ ಶಕ್ತಿಯನ್ನು ಚೆನ್ನಾಗಿ ಬಳಸಿದಾಗ ಭಾಷೆಯ ಮೌಲ್ಯ ವೃದ್ಧಿಸುವುದು ಎಂದು ನುಡಿದರು.

ಆಳ್ವಾಸ್ ಪ.ಪೂ. ಕಾಲೇಜಿನ ಉಪನ್ಯಾಸಕ ರಾಮಪ್ರಸಾದ ಕಾಂಚೋಡು ಅವರು ಆರನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಪಠ್ಯಗಳ ಆಯ್ದ ಪದ್ಯಗಳ ವಾಚನ ಗಾಯನ ನಡೆಸಿಕೊಟ್ಟರು.

ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಅವರು ತರಗತಿಯಲ್ಲಿ ರಂಗಚಟುವಟಿಕೆ ಕುರಿತು ಮಾತನಾಡಿ, ಮಕ್ಕಳೊಂದಿಗೆ ಆತ್ಮೀಯವಾಗಿದ್ದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಆಂಗಿಕ ಅಭಿನಯ, ಸ್ಪಷ್ಟ ಮಾತು, ಸ್ವರದ ಏರಿಳಿತ ಇವುಗಳ ಮೂಲಕ ಪರಿಣಾಮಕಾರಿ ಬೋಧನೆ ಮಾಡಲು ಸಾಧ್ಯ ಎಂದು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.

ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಕಾರ್ಯಾಗಾರಕ್ಕೆ ಆಗಮಿಸಿ, ಪ್ರದೇಶ, ಸಮುದಾಯಗಳಿಗೆ ಅನುಗುಣವಾಗಿ ಬದಲಾಗುತ್ತ ಹೋಗುವ ಕನ್ನಡದಷ್ಟು ಶ್ರೀಮಂತ, ಸಶಕ್ತ ಭಾಷೆ ಇನ್ನೊಂದಿರಲಾರದು ಎಂದು ಹೇಳಿದರು.

ಕ.ಸಾ.ಪ. ತಾಲೂಕು ಘಟಕಾಧ್ಯಕ್ಷ ವೇಣುಗೋಪಾಲ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿ ಡಾ. ಬಿ. ರಾಜಶ್ರೀ, ಜೀವನ್‍ರಾಂ ಸುಳ್ಯ, ಪುತ್ತಿಗೆ ಮನೆ ಧನಂಜಯ, ಹೋಬಳಿ ಅಧ್ಯಕ್ಷ ರಾಮಕೃಷ್ಣ ಶಿರೂರು, ಘಟಕದ ಸದಸ್ಯರಾದ ವಿಜಯಲಕ್ಷ್ಮೀ ಮಾರ್ಲ, ಕೋಶಾಧಿಕಾರಿ ಅಂಡಾರು ಗುಣಪಾಲ ಹೆಗ್ಡೆ, ಕಾರ್ಯದರ್ಶಿ ಸದಾನಂದ ನಾರಾವಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.