ಮೂಡುಬಿದಿರೆ: ಕರಿಂಜೆ ಘನತ್ಯಾಜ್ಯ ಘಟಕ ಅಸಮರ್ಪಕ ನಿರ್ವಹಣೆ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕರಿಂಜೆ ಮಾರಿಂಜಗುಡ್ಡೆಯಲ್ಲಿರುವ ಘನತ್ಯಾಜ್ಯ ಘಟಕವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸಮರ್ಪಕವಾಗಿ ನಿರ್ವಹಣೆಯಾಗುತ್ತಿದ್ದು ಇದರಿಂದಾಗಿ ಪರಿಸರದ ನಿವಾಸಿಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆಂದು ಪುರಸಭೆ ಸದಸ್ಯರು ಮತ್ತು ಸಾರ್ವಜನಿಕರು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ದೂರು ನೀಡಿದ್ದಾರೆ.

ತಾಲೂಕು ಆಡಳಿತ ಸೌಧದಲ್ಲಿ ಡಿಸಿಯವರಿಂದ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ದೂರು ನೀಡಿ ಈ ಬಗ್ಗೆ ಚರ್ಚೆ ನಡೆಸಿದರು.ಈ ಹಿಂದೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಉತ್ತಮ ರೀತಿಯಲ್ಲಿ ನಿರ್ವಹಣೆ ನಡೆಯುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಪುರಸಭೆ ತ್ಯಾಜ್ಯ ನಿರ್ವಹಣೆಯ ಪರಿಸರ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವ ಆಸಕ್ತಿ ತೋರುತ್ತಿಲ್ಲ.

ಅವರು ಕಚೇರಿಯಲ್ಲೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಸುರೇಶ್ ಪ್ರಭು, ಪುರಂದರ ದೇವಾಡಿಗ, ಸುರೇಶ್ ಕೋಟ್ಯಾನ್, ಪಿ.ಕೆ ಥೋಮಸ್, ಕೊರಗಪ್ಪ ಜಿಲ್ಲಾಧಿಕಾರಿಗೆ ದೂರು ನೀಡಿದರು. ನಂತರ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಯೋಜನಾ ನಿರ್ದೇಶಕ ಅಭಿಷೇಕ್ ಅವರು ತ್ಯಾಜ್ಯ ನಿರ್ವಹಣಾ ಘಟಕಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಮೂಡುಬಿದಿರೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಮೂಡುಬಿದಿರೆ ಮನವಿ ಸಲ್ಲಿಸಿತು.

ಮೂಡುಬಿದಿರೆಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಬೇಕು ಹಾಗೂ ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಧ್ಯೆ ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಭಾರತೀಯ ರೈತ ಸೇನೆ ಮನವಿ ಸಲ್ಲಿಸಿತು. ಇಂದಿರಾ ಕ್ಯಾಂಟೀನ್ ತೆರೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ್‍ಗೆ ಸೂಚಿಸಿದರು. ಸಹಾಯಕ ಕಮಿಷನರ್ ಹರ್ಷವರ್ಧನ್, ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್, ಪುರಸಭೆ ಮುಖ್ಯಾಧಿಕಾರಿ ಶಿವ ನಾಯ್ಕ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.