ಎನ್ಎಸ್ಯುಐ ವತಿಯಿಂದ ಡಿ.1ರಿಂದ ಕ್ಯಾಂಪಸ್ ಗೇಟ್ ಮೀಟ್
ಮಂಗಳೂರು, ನ. 28: ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಅವರಿಗೆ ನೆರವು, ಸಹಕಾರ ನೀಡುವ ನಿಟ್ಟಿನಲ್ಲಿ ಎನ್ಎಸ್ಯುಐ ವತಿಯಿಂದ ಡಿ.1ರಿಂದ ಕ್ಯಾಂಪಸ್ ಗೇಟ್ ಮೀಟ್ ಆಯೋಜಿಸಲಾಗಿದೆ ಎಂದು ಎನ್ಎಸ್ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ತಿಳಿಸಿದ್ದಾರೆ.
ಕಾಲೇಜು ಕ್ಯಾಂಪಸ್ಗೆ ಭೇಟಿ ನೀಡುವ ಎನ್ಎಸ್ಯುಐ ಪ್ರತಿನಿಧಿಗಳು ವಿದ್ಯಾರ್ಥಿಗಳಿಗೆ ಫಾರಂ ನೀಡಿ ಅದರಲ್ಲಿ ಸಮಸ್ಯೆಗಳನ್ನು ಬರೆದು ತಿಳಿಸುವಂತೆ ಸೂಚಿಸಲಿದ್ದಾರೆ. ಬಳಿಕ ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟವನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.
ಹಿಂದೆಂದಿಗಿಂತಲೂ ಹೆಚ್ಚಾಗಿ ಪ್ರಸಕ್ತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ಪರೀಕ್ಷೆ ನಡೆದು ಒಂದು ವರ್ಷ ಕಳೆದರೂ ಫಲಿತಾಂಶ ಪ್ರಕಟವಾಗುತ್ತಿಲ್ಲ. ಎನ್ಇಪಿಯನ್ನು ರಾಜ್ಯದಲ್ಲಿ ಪ್ರಥಮವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಕುಲಪತಿ, ಉಪ ಕುಲಪತಿಗಳಿಗೆ ಸ್ಪಷ್ಟತೆ ಇಲ್ಲವಾಗಿದೆ. ಶಿಕ್ಷಣ ಸಚಿವರು ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ಕೀರ್ತಿ ಗಣೇಶ್ ದೂರಿದರು.
ಇತ್ತೀಚೆಗೆ ತಿಪಟೂರಿನಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಗಮನಕ್ಕೆ ತರುವ ನಿಟ್ಟಿನಲ್ಲಿ ಶಿಕ್ಷಣ ಸಚಿವರ ಮನೆಗೆ ಎನ್ಎಸ್ಯುಐ ಪ್ರತಿನಿಧಿಗಳು ತೆರಳಿದರೆ ಮನೆ ಸುಡಲು ಬಂದಿದ್ದಾರೆಂಬ ರೀತಿ ಸುಳ್ಳನ್ನು ಬಿಂಬಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಾಕ್ಸ್ ಕೇಳಿದರೆ ಸಾಕ್ಸ್ ಇದ್ದರೆ ಮಾತ್ರ ಕಲಿಯುವುದೇ ಎಂಬ ಹೇಳಿಕೆ ನೀಡುವ ಶಿಕ್ಷಣ ಸಚಿವರ ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಾರೆ. ಹಾಗಿದ್ದರೆ ವಿದೇಶದಲ್ಲಿ ಮಾತ್ರ ಶಿಕ್ಷಣ ಪಡೆಯಬಹುದೇ ಎಂದು ಶಿಕ್ಷಣ ಸಚಿವರನ್ನು ನಾವೂ ಕೇಳಬಹುದಲ್ಲವೇ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎನ್ಎಸ್ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಭರತ್ ಗೌಡ, ಸುಹಾನ್ ಆಳ್ವ, ಅನ್ವಿತ್ ಕಟೀಲ್, ಸುಪ್ರೀದ್ ಗೌಡ, ಪವನ್ ಸಾಲ್ಯಾನ್, ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.

















