ಪ್ರೊ. ನರೇಂದ್ರ ನಾಯಕ್ ಅವರಿಗೆ ಪೊಲೀಸ್ ಭದ್ರತೆ ಮುಂದುವರಿಸಲು ಆಗ್ರಹಿಸಿ ಮನವಿ
ಪ್ರೋ. ನರೇಂದ್ರ ನಾಯಕ್ ಅಖಿಲ ಭಾರತ ವಿಚಾರವಾದಿ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷರು. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರು. ಮೌಢ್ಯಾಚರಣೆಗಳನ್ನು ಬಯಲಿಗೆಳೆಯುವುದು, ವೈಜ್ಞಾನಿಕ ಮನೋಭಾವ ಮೂಡಿಸುವುದರಲ್ಲಿ ಕಳೆದ ಐದು ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸಂವಿಧಾನದ ಉದ್ದೇಶಗಳಾದ ವೈಜ್ಞಾನಿಕ ಮನೋಭಾವ, ಜಾತ್ಯಾತೀತ ತಿಳುವಳಿಕೆಗಳನ್ನು ಸಮಾಜದಲ್ಲಿ ಮೂಡಿಸುವ ಕಾರಣಕ್ಕೆ ಪ್ರತಿಗಾಮಿ ಶಕ್ತಿಗಳಿಂದ ಹಲವು ಬಾರಿ ದಾಳಿಗಳಿಗೆ ಗುರಿಯಾಗಿದ್ದಾರೆ.
ಸಮಾಜದಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಕಾರಣಕ್ಕೆ ಬಲಪಂಥೀಯ ಶಕ್ತಿಗಳಿಂದ ಕೊಲೆಗೀಡಾದ ನರೇಂದ್ರ ದಾಬೋಳ್ಕರ್, ಗೋವಿಂದ ಪನ್ಸಾರೆ ಪ್ರೊ. ನರೇಂದ್ರ ನಾಯಕ್ ರ ಸಹವರ್ತಿಗಳಾಗಿದ್ದರು. ರಾಜ್ಯದಲ್ಲಿ ಪ್ರೊ ಕಲ್ಬುರ್ಗಿ, ಗೌರಿ ಲಂಕೇಶ್ ಕೊಲೆಯ ನಂತರ ಪ್ರೊ. ನರೇಂದ್ರ ನಾಯಕ್ ಅವರ ಜೀವಕ್ಕೆ ಅಪಾಯ ಇರುವುದು ಸರಕಾರದ ಗಮನಕ್ಕೆ ಬಂದು ಅವರಿಗೆ ಸರಕಾರದ ವತಿಯಿಂದ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಈಗ ಏಕಾಏಕಿ ಭದ್ರತೆಯನ್ನು ಹಿಂಪಡೆದ ಸುದ್ದಿ ಕೇಳಿ ನಮಗೆಲ್ಲಾ ಆತಂಕ ಶುರುವಾಗಿದೆ. ಪ್ರೊ. ನರೇಂದ್ರ ನಾಯಕ್ ಈಗಲೂ ವೈಜ್ಞಾನಿಕ ಮನೋಭಾವ ಮೂಡಿಸುವ ತಮ್ಮ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಅದಲ್ಲದೆ ಸ್ಥಳೀಯವಾಗಿ ಹಲವು ಸ್ಥಾಪಿತ ಹಿತಾಸಕ್ತಿಗಳ ವಿರುದ್ದದ ಹೋರಾಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಆತನ ಅಸಹಾಯಕ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಆ ಕಾರಣಕ್ಕೂ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಈಗಂತೂ ಸಾಮಾಜಿಕವಾಗಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ನೀಡಿದ್ದ ಪೊಲೀಸ್ ಭದ್ರತೆ ವಾಪಾಸಾತಿ ಸರಿಯಾದ ನಿರ್ಧಾರ ಅಲ್ಲ. ಇದರಿಂದ ಅವರ ಪ್ರಾಣವನ್ನು ಅಪಾಯಕ್ಕೆ ಒಡ್ಡಿದಂತಾಗಿದೆ. ಹಣ ಪಾವತಿಸಿ ರಕ್ಷಣೆ ಪಡೆದುಕೊಳ್ಳುವುದು ಅವರಿಂದ ಸಾಧ್ಯವಿಲ್ಲ. ಸಮಾಜದ ಅಮೂಲ್ಯ ಆಸ್ತಿಯಾಗಿರುವ ಪ್ರೊ. ನರೇಂದ್ರ ನಾಯಕ್ ಅವರನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿ. ಈ ಎಲ್ಲಾ ಕಾರಣದಿಂದ ಪ್ರೋ. ನರೇಂದ್ರ ನಾಯಕ್ ಅವರಿಗೆ ಈ ಹಿಂದಿನಂತೆ ಪೊಲೀಸ್ ಭದ್ರತೆಯನ್ನು ಒದಗಿಸಬೇಕು ಎಂದು ಮಂಗಳೂರಿನ ನಾಗರಿಕ ಸಮಾಜದ ಪರವಾಗಿ ಒತ್ತಾಯಪಡಿಸಿದರು.
ನಿಯೋಗದಲ್ಲಿ ಡಿವೈಎಫ್ಐ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ, ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಎಂ, ದೇವದಾಸ್, ರಘು ಎಕ್ಕಾರ್ , ಸಿಪಿಐ ಎಂ ನ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐನ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ಡಿವೈಎಫ್ಐ ನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಸಾಮರಸ್ಯ ಬಳಗದ ಮಂಜುಳಾ ನಾಯಕ್, ವಿನಾಯಕ ಬಾಳಿಗ ಸಹೋದರಿ ಅನುರಾಧ ಬಾಳಿಗಾ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ, ಸಮರ್ಥ್ ಭಟ್, ಎಸ್ಎಫ್ಐನ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಶಾಹಿದ್ ಅಫ್ರೀದ್, ಪ್ರಮಿಳಾ ದೇವಾಡಿಗ, ಅಸುಂತ ಡಿಸೋಜ, ಎಐವೈಎಫ್ ನ ಸುರೇಶ್, ಪ್ರಥಮ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು