ವಿಶ್ವ ವಿಕಿರಣ ಶಾಸ್ತ್ರದಿನ – ನವೆಂಬರ್ 8
ಪ್ರತೀ ವರ್ಷ ನವೆಂಬರ್ 8 ರಂದು ವಿಶ್ವದಾದ್ಯಂತ “ವಿಶ್ವ ರೇಡಿಯೋಲಜಿ ದಿನ” ಎಂದು ಆಚರಿಸಿ ವಿಕರಣ ಶಾಸ್ತ್ರದಿಂದ ವೈದ್ಯಕೀಯ ರಂಗಕ್ಕೆ ಉಂಟಾಗುವ ಸಹಾಯಗಳನ್ನು ಸ್ಮರಿಸಲಾಗುತ್ತದೆ. ಈ ಆಚರಣೆ 2012 ನವೆಂಬರ್ 8 ರಂದು ಆರಂಭಿಸಲಾಯಿತು. ಸುಮಾರು 200 ರಾಷ್ಟ್ರಗಳಲ್ಲಿ ಈ ಆಚರಣೆ ಮಾಡಲಾಗುತ್ತಿದೆ. 1895ನೇ ನವೆಂಬರ್ 8ರಂದು ವಿಲಿಯಮ್ ಕೊನ್ರಾಡ್ ರೊಂಟ್‍ಜೆನ್ ಎಂಬ ವಿಜ್ಞಾನಿ ಕ್ಷ-ಕಿರಣಗಳನ್ನು ಪತ್ತೆ ಹಚ್ಚಿದನು. ಕ್ಯಾಥೋಡ್ ಕಿರಣಗಳ ಬಗ್ಗೆ ಸಂಶೋಧನೆ ನಡೆಸುವಾಗ ಆಕಸ್ಮಿಕವಾಗಿ ಕ್ಷ-ಕಿರಣಗಳನ್ನು ಆತ ಪತ್ತೆ ಹಚ್ಚಿದ್ದ ಈ ಸಂಶೋಧನೆ ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಕ್ರಾಂತಿಕಾರಿ ಬೆಳವಣಿಗೆಗೆ ನಾಂದಿ ಹಾಡಿತು.
ಇವತ್ತಿನ ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಚಿಕಿತ್ಸೆಗಳ ನಿರ್ಧಾರ ಮಾಡುವಾಗ ಮತ್ತು ರೋಗ ಪತ್ತೆ ಹಚ್ಚುವಲ್ಲಿ ಈ ಕ್ಷ-ಕಿರಣಗಳು ಮಹತ್ತರವಾದ ಪಾತ್ರ ವಹಿಸುತ್ತಿದೆ. ಅದು ಸಾಮನ್ಯ ಏಕ್ಸರೇ ಇರಬಹುದು ಅಥವಾ ಅದರ ಮುಂದುವರಿದ ಆವಿಷ್ಕಾರದಿಂದ ಹುಟ್ಟಿಕೊಂಡ ಸಿಟಿಸ್ಕ್ಯಾನ್, ಎಂ.ಆರ್.ಐ ಸ್ಕ್ಯಾನ್‍ಗಳು ಆಗಿರಬಹುದು. ಅಥವಾ ಪೆಟ್‍ಸ್ಕ್ಯಾನ್ ಆಗಿರಬಹುದು. ಇವೆಲ್ಲವೂ ಇಂದಿನ ವೈದ್ಯಕೀಯ ಸೇವೆಯಲ್ಲಿ ಅವಿಭಾಜ್ಯ ಅಂಗಗಳಾಗಿ ಬೆಳೆದುನಿಂತಿದೆ. ಪ್ರತೀ ವರ್ಷ ಬೇರೆ ಬೇರೆ ಘೋಷ ವಾಕ್ಯಗಳನ್ನು ಇಟ್ಟುಕೊಂಡು ಈ ಆಚರಣೆ ಮಾಡಲಾಗುತ್ತಿದೆ. 2017ರಲ್ಲಿ ತುರ್ತು ಇಮೇಜಿಂಗ್ 2018ರಲ್ಲಿ ಹೃದಯ ಸಂಬಂಧಿ ಇಮೇಜಿಂಗ್ ಮತ್ತು 2019ರಲ್ಲಿ ಸ್ಪೋಟ್ರ್ಸ್ ಇಮೇಜಿಂಗ್ ಎಂಬ ತಿರುಳನ್ನು ಇಟ್ಟುಕೊಂಡು ಈ ಆಚರಣೆ ಮಾಡಲಾಗಿತ್ತು.
ಆರಂಭದ ದಿನಗಳಲ್ಲಿ ಕ್ಷ-ಕಿರಣ ಅಥವಾ ಏಕ್ಸರೇಗಳನ್ನು ಬರೀ ಎಲುಬು ತುಂಡಾದಾಗ ಅಥವಾ ಎಲುಬಿಗೆ ಸಂಬಂಧಿಸಿದ ರೋಗಗಳನ್ನು ಪತ್ತೆ ಹಚ್ಚಲು ಬಳಸುತ್ತಿದ್ದರು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಆದ ಅದ್ಬುತವಾದ ಆವಿಷ್ಕಾರಗಳಿಂದಾಗಿ ಈಗ ನರಗಳು, ರಕ್ತನಾಳಗಳು, ಸ್ನಾಯುಗಳು, ಮೆದುಳು, ಹೃದಯ, ಕಿಡ್ನಿ, ಲಿವರ್, ಹೀಗೆ ಎಲ್ಲಾ ಅಂಗಗಳ ಪರಿಪೂರ್ಣ ರಚನೆ, ರಚನೆಯಲ್ಲಿನ ವ್ಯತ್ಯಾಸ, ರೋಗದ ಸ್ಥಿತಿ ಮತ್ತು ಅವುಗಳ ಕಾರ್ಯವೈಖರಿ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ. ವೈದ್ಯಕೀಯ ಶಾಸ್ತ್ರದಲ್ಲಿ ಈ ವಿಕಿರಣ ಶಾಸ್ತ್ರವನ್ನು “ಮೂರನೇ ಕಣ್ಣು” ಎಂದು ಕರೆಯಲಾಗುತ್ತದೆ. ಬರಿಗಣ್ಣಿಗೆ ಕಾಣದಿದ್ದರೂ ದೇಹದ ಯಾವುದೇ ಭಾಗದಲ್ಲಿ ತೊಂದರೆ ಇದ್ದರೂ ಅದನ್ನು ಸ್ಕ್ಯಾನ್ ಪರೀಕ್ಷೆ ಮುಖಾಂತರ ಪತ್ತೆ ಹಚ್ಚಲು ಈ ವಿಕರಣ ಶಾಸ್ತ್ರದ ಇಮೇಜಿಂಗ್‍ನಿಂದ ಸಾದ್ಯವಾಗಿದೆ. ಬ್ರಹ್ಮ ಬರೆದ ಹಣಬರೆಹ ಬದಲಿಸಲು ಸಾಧ್ಯವಿಲ್ಲದಿದ್ದರೂ, ಬ್ರಹ್ಮ ಸ್ಥಾಪಿಸಿದ ಅಂಗಾಂಗಗಳ ಬಗ್ಗೆ ಪರಿಪೂರ್ಣ ಮಾಹಿತಿ ಪಡೆಯಲು ಇವತ್ತು ವಿಕಿರಣ ಶಾಸ್ತ್ರ ವೈದ್ಯರಿಗೆ ಹೊಸ ಹೊಸ ಇಮೇಜಿಂಗ್ ಕ್ರಮಗಳಿಂದಾಗಿ ಸಾದ್ಯವಾಗಿದೆ.
ಎಲುಬಿನ ರಚನೆ
ನಮ್ಮ ದೇಹದ ಮೂಳೆಗಳು ಬಹಳ ಶಕ್ತಿಶಾಲಿಯಾದ ಅಂಗವಾಗಿದೆ. ದೇಹದ ಚಲನೆಗೆ ಬೇಕಾದ ಭದ್ರತೆಯನ್ನು ನೀಡುವುದು ಈ ಎಲುಬುಗಳೇ ಆಗಿರುತ್ತದೆ. ಈ ಎಲುಬುಗಳು ಸಾಮಾನ್ಯವಾಗಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಕೋಲ್ಯಾಜನ್ ಮುಂತಾದವುಗಳಿಂದ ಮಾಡಲ್ಪಟ್ಟಿದೆ. ಸಣ್ಣ ಮಕ್ಕಳಲ್ಲಿ ಎಲುಬು ಬಹಳ ಮೃದುವಾಗಿರುತ್ತದೆ ಮತ್ತು ಕೊಲ್ಯಾಜನ್ ಅಂಶ ಜಾಸ್ತಿ ಇರುತ್ತದೆ. ಮತ್ತು ಬಹಳ ಬೇಗ ಮುರಿಯುದಿಲ್ಲ. ಎಲುಬು ಬೆಂಡಾಗುತ್ತದೆಯೇ (ಬಾಗುವುದು) ಹೊರತು ತುಂಡಾಗುವ ಸಾಧ್ಯತೆ ಕಡಮೆ ಇರುತ್ತದೆ. ವಯಸ್ಸಾದಂತೆಲ್ಲಾ ಎಲುಬಿನ ಸಾಂದ್ರತೆ ಹೆಚ್ಚುತ್ತಲೇ ಹೋಗುತ್ತದೆ. ಸುಮಾರು 30ರಿಂದ 35 ವರ್ಷದ ಹೊತ್ತಿಗೆ ಎಲುಬಿನ ಸಾಂದ್ರತೆ ಒಂದು ಮಿತಿಯನ್ನು ತಲುಪಿ, ಗರಿಷ್ಠ ಸಾಂದ್ರತೆ ಹೊಂದುತ್ತದೆ. ದೇಹದಲ್ಲಿನ ರಸದೂತಗಳು ಪ್ರಮುಖವಾಗಿ ಈ ಎಲುಬಿನ ಸಾಂದ್ರತೆಯನ್ನು ನಿಯಂತ್ರಿಸುತ್ತದೆ.
ಇದರ ಜೊತೆಗೆ ನಾವು ತಿನ್ನುವ ಆಹಾರ, ನಮ್ಮ ಆಹಾರದಲ್ಲಿನ ಕ್ಯಾಲ್ಸಿಯಂ ಪ್ರಮಾಣ, ನಮ್ಮ ಜೀವನಶೈಲಿ, ನಾವು ಸೇವಿಸುವ ಔಷಧಿ ಇವೆಲ್ಲವೂ ಎಲುಬಿನ ಸಾಂದ್ರತೆ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ. ಇದರ ಜೊತೆಗೆ ಅನುವಂಶೀಯ ಕಾರಣಗಳು, ದೈಹಿಕ ವ್ಯಾಯಾಮದ ಕೊರತೆ, ವಿಟಮಿನ್ ಡಿ ಕೊರತೆ, ಧೂಮಪಾನ, ಮದ್ಯಪಾನ, ಅತಿಯಾದ ಸ್ಥಿರಾಯ್ಡು ಸೇವನೆ, ಮಹಿಳೆಯರಲ್ಲಿ ಋುತು ಚಕ್ರ ಹತೋಟಿಯಲ್ಲಿಡುವ ಔಷಧಿಗಳ ಅತಿಯಾದ ಸೇವನೆ, ಗರ್ಭ ನಿರೋಧಕ ಔಷಧಿಗಳ ಅನಗತ್ಯ ಸೇವನೆ ಇವೆಲ್ಲವೂ ದೇಹದಲ್ಲಿ ಎಲುಬಿನ ಸಾಂದ್ರತೆಯನ್ನು ಕಡಮೆ ಮಾಡಿ ಎಲುಬನ್ನು ಹೆಚ್ಚು ಟೊಳ್ಳು ಮಾಡಿ ಟೊಳ್ಳು ಮೂಳೆ ರೋಗಕ್ಕೆ ನಾಂದಿ ಹಾಡುತ್ತದೆ. 40 ವರ್ಷದ ಬಳಿಕ ಎಲುಬಿನ ಸಾಂದ್ರತೆ ಕುಸಿಯುತ್ತಲೇ ಬರುತ್ತದೆ. ಪುರುಷರಲ್ಲಿ ವರ್ಷಕ್ಕೆ 0.5 ಶೇಕಡಾದಷ್ಟು ಕುಸಿಯುತ್ತದೆ ಮತ್ತು ಮಹಿಳೆಯರಲ್ಲಿ ಋುತುಬಂಧದ ಬಳಿಕ ವರ್ಷಕ್ಕೆ 5 ಶೇಕಡಾದಷ್ಟು ಎಲುಬಿನ ಸಾಂದ್ರತೆ ಕುಸಿಯುತ್ತದೆ. ಋುತು ಬಂಧದ ಬಳಿಕ 50 ವರ್ಷದ ದಾಟಿದ ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ಈ ಟೊಳ್ಳು ಮೂಳೆ ರೋಗಕ್ಕೆ ತುತ್ತಾಗುತ್ತಾರೆ ಎಂದು ವಿಶ್ವ ಸಂಸ್ಥೆಯ ವರದಿಯಲ್ಲಿ ತಿಳಿಸಿದೆ.
ಏನಿದು ಡೆಕ್ಸಾ ಸ್ಕ್ಯಾನಿಂಗ್?
ಎಲುಬಿನ ಸಾಂದ್ರತೆಯನ್ನು ಪತ್ತೆ ಹಚ್ಚುವ ಪ್ರಕ್ರಿಯೆಗೆ ಡೆಕ್ಸಾ ಸ್ಕ್ಯಾನಿಂಗ್ ಎನ್ನುತ್ತಾರೆ. ಆಂಗ್ಲಭಾಷೆಯಲ್ಲಿ DEXA(Dual XRay Absoptometry) ಸ್ಕ್ಯಾನಿಂಗ್ ಎಂದು ಕರೆಯುತ್ತಾರೆ. ಇದೊಂದು ಬಹಳ ಸುಲಭವಾದ ಮತ್ತು ನಿಖರವಾದ ಪರೀಕ್ಷೆಯಾಗಿದ್ದು, ಇದರ ಮುಖಾಂತರ ಎಲುಬಿನ ಸಾಂದ್ರತೆಯನ್ನು ಪತ್ತೆ ಹಚ್ಚುತ್ತಾರೆ. ಕೇವಲ 10ರಿಂದ 15 ನಿಮಿಷಗಳಲ್ಲಿ ಈ ಪರೀಕ್ಷೆ ಮುಗಿದು ಹೋಗುತ್ತದೆ. ನೋವಿಲ್ಲದ ಪರೀಕ್ಷೆ ಇದಾಗಿದ್ದು ಕ್ಷ-ಕಿರಣಕ್ಕೆ ಬಳಸುವ ರೇಡಿಯೇಷನ್ ಡೋಸ್ ಕೂಡಾ ಬಹಳ ಕನಿಷ್ಠ ಪ್ರಮಾಣದಲ್ಲಿರುತ್ತದೆ. ಯಾವ ವ್ಯಕ್ತಿ ಮೂಳೆ ಮುರಿತಕ್ಕೆ ತುತ್ತಾಗುವ ಸಾಧ್ಯತೆ ಇದೆ, ಎಂಬುದನ್ನು ಬಹಳ ನಿಖರವಾಗಿ ಪತ್ತೆ ಹಚ್ಚಲಾಗುತ್ತದೆ.
ಯಾರು ಈ ಪರೀಕ್ಷೆ ಮಾಡಿಸಬೇಕು?
- ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ 35ರ ವಯಸ್ಸಿನಲ್ಲಿ ಒಮ್ಮೆ ಡೆಕ್ಸಾ ಸ್ಕ್ಯಾನಿಂಗ್ ಮಾಡಿಸಬೇಕು. ಆ ಮೂಲಕ ಎಲುಬಿನ ಸಾಂದ್ರತೆ ತಿಳಿದಲ್ಲಿ, ಮುಂದೆ ಉಂಟಾಗುವ ಮೂಳೆ ಸವೆತದ ಪ್ರಮಾಣವನ್ನು ಈ ಸ್ಕ್ಯಾನ್‍ಗೆ ಹೋಲಿಸಿ ತಾಳೆ ಹಾಕಲು ಅನುಕೂಲವಾಗುತ್ತದೆ.
- ಮಹಿಳೆಯರು ಋುತುಬಂಧದ ಬಳಿಕ, 50 ವರ್ಷದ ಬಳಿಕ ಪ್ರತಿ 2 ವರ್ಷದಲ್ಲಿ ಒಮ್ಮೆ ಈ ಸ್ಕ್ಯಾನ್ ಮಾಡಿಸುವುದು ಉತ್ತಮ.
- ಅತಿಯಾದ ಮದ್ಯಪಾನಿಗಳು ಮತ್ತು ಧೂಮಪಾನಿಗಳು 50 ವರ್ಷವಾದ ಬಳಿಕ ಕಡ್ಡಾಯವಾಗಿ ಮಾಡಿಸಬೇಕು.
- ಕುಟುಂಬದಲ್ಲಿ ತಂದೆ ತಾಯಂದಿರು ಟೊಳ್ಳು ಮೂಳೆ ರೋಗದಿಂದ ಬಳಲಿದ್ದಲ್ಲಿ, ಮಕ್ಕಳಿಗೂ ಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ 50 ವಯಸ್ಸಿನ ಬಳಿಕ ಎಲ್ಲರೂ ಮಾಡಿಸಬಹುದು.
- ಅತಿಯಾದ ಸ್ಥಿರಾಯ್ಡು ಸೇವನೆ, ದೀರ್ಘಾಕಾಲಿಕ ನೋವು ನಿವಾರಕ ಔಷಧಿ ಸೇವನೆ ಸ್ಥಿರಾಯ್ಡು ಸೇವನೆ ಮತ್ತು ಗರ್ಭ ನಿರೋಧಕ ಔಷಧಿ ಬಳಸುವವರು ಕಡ್ಡಾಯವಾಗಿ ಈ ಡೆಕ್ಸಾ ಸ್ಕ್ಯಾನ್ ಮಾಡಿಸಬೇಕು.
- ಮಹಿಳೆಯರಲ್ಲಿ 45ರ ಮೊದಲು ಋುತುಬಂಧವಾಗಿದ್ದಲ್ಲಿ ಮತ್ತು 45 ವರ್ಷದ ಮೊದಲು ಗರ್ಭಕೋಶ ತೆಗೆಸಿಕೊಂಡಿದ್ದಲ್ಲಿ ಡೆಕ್ಸಾ ಸ್ಕ್ಯಾನ್ ಮಾಡಿಸಬೇಕು. ಇಂತಹಾ ಮಹಿಳೆಯರಲ್ಲಿ ರಸದೂತಗಳ ವೈಫರೀತ್ಯ ಅತಿಯಾಗಿರುತ್ತದೆ.
ಹೇಗೆ ಮಾಡುತ್ತಾರೆ :
ರೋಗಿಯ ಎತ್ತರ, ತೂಕ ಮತ್ತು ವಯಸ್ಸನ್ನು ಗುರುತಿಸಿಗೊಂಡು ವ್ಯಕ್ತಿಯ ಸ್ಕಾನ್ ಮಾಡಲಾಗುತ್ತದೆ. ಈ ಇತರ ಅಖಿ ಸ್ಕ್ಯಾನ್‍ಗಳಂತೆ ಈ ಸ್ಕ್ಯಾನ್ ಮಾಡುವಾಗ ದೇಹದ ಬಟ್ಟೆ ತೆಗೆಯುದಿಲ್ಲ. ಕುತ್ತಿಗೆ ಮತ್ತು ಬೆನ್ನಿನ ಭಾಗದ ಎಲುಬು ಹಾಗೂ ಸೊಂಟದ ಎಲುಬಿನ ಸಾಂದ್ರತೆಯನ್ನು ನಿಖರವಾಗಿ ಅಳೆಯುತ್ತದೆ. ಗರ್ಭಿಣಿಯರಲ್ಲಿ ಈ ಡೆಕ್ಸಾ ಸ್ಕ್ಯಾನ್ ಮಾಡುವುದಿಲ್ಲ. ಅದೇ ರೀತಿ ಹಿಂದೆ ಎಲುಬಿನ ಮುರಿತವಾಗಿ ಎಲುಬಿನಲ್ಲಿ ಲೋಹದ ಸ್ಕ್ರೂ ಮತ್ತು ಪ್ಲೇಟ್ ಇದ್ದಲ್ಲಿ ಈ ಸ್ಕ್ಯಾನ್ ಫಲಿತಾಂಶ ಸರಿಯಾಗಿ ಬರುವುದಿಲ್ಲ. ಎಲುಬಿನ ಸಾಂದ್ರತೆಯನ್ನು ಖಿ-ಸ್ಟೋರ್‍ನಲ್ಲಿ ಮಾಪನ ಮಾಡುತ್ತಾರೆ. ಮೈನಸ್ ಒಂದಕ್ಕಿಂತ ಜಾಸ್ತಿ ಇದ್ದಲ್ಲಿ ಉತ್ತಮ. ಎಲುಬಿನ ಸಾಂದ್ರತೆ ಮೈನಸ್ ಒಂದರಿಂದ ಮೈನಸ್ 2.5 ಇದ್ದಲ್ಲಿ ಎಲುಬಿನ ಸಾಂದ್ರತೆ ಕಡಮೆ ಎಂದು ತೀರ್ಮಾನಿಸುತ್ತಾರೆ. ಮೈನಸ್ 2.5ಕ್ಕಿಂತಲೂ ಕಡಮೆ ನಿಮ್ಮ ಖಿ ಸ್ಟೋರ್ ಇದ್ದಲ್ಲಿ ನೀವು ಮೂಳೆರಂದ್ರತೆ ರೋಗದಿಂದ ಬಳುತ್ತಿದ್ದೀರಿ ಎಂದು ತಿರ್ಮಾನಿಸಲಾಗುತ್ತದೆ.
ಕೊನೆ ಮಾತು :
ಅಸ್ಥಿರಂದ್ರತೆ, ಮೂಳೆರಂದ್ರತೆ, ನಿಶ್ವಬ್ಧರೋಗ, ಟೊಳ್ಳು ಮೂಳೆ ರೋಗ ಎಂದು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತವೆ. ಈ ರೋಗವನ್ನು ಆಂಗ್ಲಭಾಷೆಯಲ್ಲಿ ಆಸ್ಟಿಯೋ ಪೋರೋಸಿಸ್‍ನ್ ಎಂದೂ ಕರೆಯುತ್ತಾರೆ. ಮಹಿಳೆಯರಲ್ಲಿ ಎಲುಬಿನ ಸಾಂದ್ರತೆ ಪುರುಷರಿಗಿಂತ ಕಡಮೆ ಇರುತ್ತದೆ. ಮಹಿಳೆಯರಲ್ಲಿ ಈಸ್ಟ್ರೊಜನ್ ರಸದೂತವು ಮೂಳೆಯ ಸಾಂದ್ರತೆಯನ್ನು ಗರಿಷ್ಠ ಮಟ್ಟದಲ್ಲಿ ಇಡಲು ಸಹಕರಿಸುತ್ತದೆ. ಆದರೆ ಋುತುಬಂಧದ ಬಳಿಕ, ಈ ಈಸ್ಟ್ರೊಜನ್ ರಸದೂತದ ಪ್ರಮಾಣ ವೇಗವಾಗಿ ಕುಸಿಯುತ್ತದೆ ಮತ್ತು ಈ ಕಾರಣದಿಂದಲೇ ಮೂಳೆಯ ಸಾಂದ್ರತೆಯೂ ವೇಗವಾಗಿ ಕುಸಿಯುತ್ತದೆ. ಈ ಕಾರಣದಿಂದಲೇ ಮಹಿಳೆಯರು ಪುರುಷರಿಗಿಂತ ಜಾಸ್ತಿ ವೇಗವಾಗಿ ಟೊಳ್ಳು ಮೂಳೆ ರೋಗಕ್ಕೆ ತುತ್ತಾಗುತ್ತಾರೆ. ಋುತುಬಂಧದ ಬಳಿಕ ಎಲ್ಲಾ ಮಹಿಳೆಯರೂ ಕಡ್ಡಾಯವಾಗಿ ಈ ಡೆಕ್ಸಾ ಸ್ಕ್ಯಾನ್ ಮಾಡಿಸತಕ್ಕದ್ದು. ಈ ಮೂಳೆರಂದ್ರತೆ ರೋಗ ಒಂದು ನಿಶ್ಯಬ್ಧವಾದ ವ್ಯಾದಿಯಾಗಿದ್ದು, ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದೆ ತನ್ನಿಂತಾನೇ ಮೂಳೆಗಳು ಮುರಿತಕ್ಕೊಳಗಾಗುತ್ತದೆ. ಬೆನ್ನಮೂಳೆ ಮುಂಗೈ ಮೂಳೆ ಸೊಂಟದ ಮೂಳೆಗಳು ಹೆಚ್ಚಾಗಿ ಮುರಿತಕ್ಕೆ ಒಳಗಾಗುತ್ತದೆ. ಸಾಕಷ್ಟು ಮುಂಜಾಗರೂಕತೆ ವಹಿಸಿ ಸೂಕ್ತವಾದ ಆಹಾರ, ನಿರಂತರ ದೈಹಿಕ ವ್ಯಾಯಾಮ, ಸಾಕಷ್ಟು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸೇವಿಸಿ, ಧೂಮಪಾನ ಮತ್ತು ಮದ್ಯಪಾನ ರಹಿತ ಜೀವನ ಶೈಲಿ ಅಳವಡಿಸಿಕೊಂಡಲ್ಲಿ ಈ ಟೊಳ್ಳು ಮೂಳೆ ರೋಗವನ್ನು ಆರಂಭದಲ್ಲಿಯೇ ನಿವಾಳಿಸಿ ಹಾಕಬಹುದು ಮತ್ತು ಅದರಲ್ಲಿಯೇ ಮನುಕುಲದ ಒಳಿತು ಅಡಗಿದೆ.
ದಂತ ಕ್ಷ- ಕಿರಣ
ದಂತ ಕ್ಷ-ಕಿರಣ ಎನ್ನುವುದು ಹಲ್ಲಿಗೆ ಸಂಬಂಧಿಸಿದ ರೋಗಗಳನ್ನು ಪತ್ತೆ ಹಚ್ಚುವ ಒಂದು ಪರೀಕ್ಷೆಯಾಗಿದ್ದು, ಹಲವಾರು ಸಂದರ್ಭಗಳಲ್ಲಿ ದಂತ ವೈದ್ಯರ ಬರಿಗಣ್ಣಿಗೆ ಕಾಣದ ರೋಗಗಳನ್ನು ಮತ್ತು ಹಲ್ಲಿನ ಸಂಕೀರ್ಣತೆಯನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ. ಇದೊಂದು ಅತ್ಯಂತ ಸುಲಭವಾಗಿ ಮಾಡಬಹುದಾದ ಪರೀಕ್ಷೆಯಾಗಿದ್ದು ಹತ್ತು ನಿಮಿಷಗಳಲ್ಲಿ ಹಲ್ಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ. ಆಂಗ್ಲ ಭಾಷೆಯಲ್ಲಿ ಡೆಂಟಲ್ ಎಕ್ಸರೇ ಎನ್ನಲಾಗುತ್ತದೆ. ದಂತ ಸಂಬಂಧಿ ಎಕ್ಸ್‍ರೇಗಳನ್ನು ಬಾಯಿ ಒಳಗೆ ತೆಗೆಯುವ ಏಕ್ಸ್‍ರೇ ಮತ್ತು ಬಾಯಿ ಹೊರಭಾಗದಲ್ಲಿ ತೆಗೆಯುವ ಏಕ್ಸ್‍ರೇ ಎಂದು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಬಾಯಿಯ ಒಳಭಾಗದಲ್ಲಿ ಕ್ಷ-ಕಿರಣದ ಫಿಲ್ಮ್‍ನ್ನು ಇಟ್ಟಲ್ಲಿ ಅಂತಹಾ ದಂತ ಕ್ಷ-ಕಿರಣವನ್ನು ಬಾಯಿಯ ಒಳಭಾಗದ ದಂತ ಕ್ಷ-ಕಿರಣ ಎನ್ನಲಾಗುತ್ತದೆ. ಅಂತೆಯೇ ಬಾಯಿ ಹೊರಭಾಗದಲ್ಲಿ ಕ್ಷ-ಕಿರಣ ಫಿಲ್ಮ್‍ನ್ನು ಇಟ್ಟಾಗ ಅದನ್ನು ಬಾಯಿಯ ಹೊರಭಾಗದ ದಂತ ಕ್ಷಕಿರಣ ಎನ್ನಲಾಗುತ್ತದೆ. ಜನರಿಗೆ ದಂತ ಕ್ಷ-ಕಿರಣದಿಂದ ಹೊರಸೂಸುವ ವಿಕಿರಣ ಕ್ಯಾನ್ಸರ್‍ಗೆ ಕಾರಣವಾಗುತ್ತದೆ ಎಂಬ ತಪ್ಪುಕಲ್ಪನೆ ಇದೆ. ದಂತ ಕ್ಷ-ಕಿರಣದ ಪರೀಕ್ಷೆಯ ಸಮಯದಲ್ಲಿ ಹೊರಸೂಸುವ ವಿಕಿರಣ ಅತೀ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ರೋಗಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಈ ಕಾರಣದಿಂದ ರೋಗಿಗಳು ಯಾವುದೇ ಭಯ ಅಥವಾ ಸಂಶಯಗಳಿಲ್ಲದೆ ದಂತ ವೈದ್ಯರು ಸೂಚಿಸಿದಲ್ಲಿ ದಂತ ಕ್ಷಕಿರಣ ಪರೀಕ್ಷೆ ನಿರ್ಭೀತಿಯಿಂದ ಮಾಡಿಸಿಕೊಳ್ಳಬಹುದು.
ಎಲ್ಲಿ ದಂತ ಕ್ಷಕಿರಣ ಬಳಸುತ್ತಾರೆ?
1) ಹಲ್ಲಿಗೆ ದಂತ ಕ್ಷಯ ಉಂಟಾದಾಗ ಅದರ ತೀವ್ರತೆಯನ್ನು ತಿಳಿಯಲು ದಂತ ಕ್ಷ-ಕಿರಣ ಬಳಸುತ್ತಾರೆ. ಹಲ್ಲಿನ ಬದಿಗಳಲ್ಲಿ ಎರಡು ಹಲ್ಲುಗಳ ಸಂದಿಗಳಲ್ಲಿ ದಂತ ಕ್ಷಯ ಉಂಟಾದಾಗ ದಂತ ವೈದ್ಯರ ಬರಿಗಣ್ಣಿಗೆ ಗೋಚರಿಸದೇ ಇರಬಹುದು. ಅಂತಹಾ ಸಂದರ್ಭಗಳಲ್ಲಿ ‘ಬೈಟ್‍ವಿಂಗ್ ಏಕ್ಸ್‍ರೇ’ ಎಂಬ ವಿಧಾನಗಳ ಮುಖಾಂತರ ದಂತ ಕ್ಷಯವನ್ನು ಪತ್ತೆ ಹಚ್ಚಲಾಗುತ್ತದೆ.
2) ಬೇರುನಾಳ ಚಿಕಿತ್ಸೆ ಮಾಡುವಾಗ (ರೂಟ್ ಕೆನಾಲ್ ಥೆರಪಿ) ಹಲ್ಲಿನ ರಚನೆ, ಗಾತ್ರ, ಬೇರುಗಳ ಸಂಖ್ಯೆ ಹಾಗೂ ಉದ್ದ, ಬೇರಿನ ಮೇಲ್ಭಾಗದಲ್ಲಿನ ಮತ್ತು ಸುತ್ತಲಿನ ಎಲುಬಿನ ಸಾಂದ್ರತೆಯನ್ನು ತಿಳಿಯಲು ದಂತ ಕ್ಷಕಿರಣ ಪರೀಕ್ಷೆ ಮಾಡಲಾಗುತ್ತದೆ.
3) ಹಲ್ಲು ಅಲುಗಾಡುತ್ತಿದ್ದಲ್ಲಿ, ಹಲ್ಲಿನ ಸುತ್ತಲಿನ ದಂತಾದಾರ ಎಲುಬಿನ ರಚನೆ, ಗಾತ್ರ, ಸಾಂದ್ರತೆ ಮತ್ತು ಎತ್ತರವನ್ನು ತಿಳಿಯಲು ದಂತ ಕ್ಷ-ಕಿರಣ ಪರೀಕ್ಷೆ ಮಾಡುತ್ತಾರೆ.
4) ಬುದ್ಧಿಶಕ್ತಿ ಹಲ್ಲು ಅಥವಾ ಮೂರನೇ ದವಡೆ ಹಲ್ಲು ಹೊರಬಾರದೆ, ಎಲುಬಿನಲ್ಲಿ ಹುದುಗಿಕೊಂಡಿದ್ದಲ್ಲಿ ಹಲ್ಲಿನ ಗಾತ್ರ, ರಚನೆ, ಬೇರಿನ ಉದ್ದ, ಸಂಖ್ಯೆ ಮತ್ತು ಆಕಾರವನ್ನು ತಿಳಿಯಲು ದಂತ ಕ್ಷಕಿರಣ ಮಾಡಲಾಗುತ್ತದೆ. ಅದೇ ರೀತಿ ಹಲ್ಲಿನ ಬೇರಿಗೂ ಮತ್ತು ದವಡೆಯ ಒಳಗಿರುವ ದಂತದ ನರಗಳಿಗೂ ಇರುವ ಸಾಮೀಪ್ಯ ಮತ್ತು ಸಂಬಂಧವನ್ನು ತಿಳಿಯಲು ದಂತ ಕ್ಷ-ಕಿರಣ ಸಹಾಯ ಮಾಡುತ್ತದೆ. ಇಲ್ಲವಾದಲ್ಲಿ ಹಲ್ಲು ಕೀಳುವ ಸಮಯದಲ್ಲಿ ದಂತದ ನರಗಳಿಗೆ ಹಾನಿಯಾಗಿ ಮುಂದೆ ಬಹಳ ತೊಂದರೆ ಉಂಟಾಗಬಹುದು.
5) ಹಲ್ಲಿಗೆ ಏಟು ಬಿದ್ದಾಗ, ಹಲ್ಲು ಮುರಿದು ಹೋದಾಗ ಹಲ್ಲಿಗೂ, ಹಲ್ಲಿನ ಬೇರಿಗೂ ಉಂಟಾದ ಏಟಿನ ತೀವ್ರತೆಯನ್ನು ತಿಳಿಯಲು ದಂತ ಕ್ಷಕಿರಣ ಪರೀಕ್ಷೆ ಮಾಡಲಾಗುತ್ತದೆ.
6) ಕೆಲವೊಮ್ಮೆ ನಿಗದಿತ ಸಮಯಕ್ಕೆ ಹಲ್ಲು ಮೂಡದೇ ಇದ್ದಾಗ, ದವಡೆಯಲ್ಲಿ ಹಲ್ಲು ಹುಟ್ಟಿದೆಯೋ ಇಲ್ಲವೋ ಎಂಬುದನ್ನು ಖಾತರಿಗೊಳಿಸಲು ದಂತ ಕ್ಷ-ಕಿರಣ ಅತೀ ಅವಶ್ಯಕ.
7) ಹಲ್ಲು ಕೀಳುವ ಸಂದರ್ಭದಲ್ಲಿ ಸಾಮಾನ್ಯವಾದ ಎಳೆತಕ್ಕೆ ಹಲ್ಲು ಮಿಸುಕಾಡದಿದ್ದಾಗ, ಹಲ್ಲು ಮತ್ತು ಎಲುಬಿನ ನಡುವೆ ಏನಾದರೂ ಜೋಡುವಿಕೆ ಉಂಟಾಗಿದೆಯೋ ಎಂಬುದನ್ನು ಪತ್ತೆ ಹಚ್ಚಲು ದಂತ ಕ್ಷ-ಕಿರಣ ಬಳಸುತ್ತಾರೆ.
8) ಮುಖಕ್ಕೆ ಏಟು ಬಿದ್ದಾಗ ದವಡೆ ಮುರಿತ ಉಂಟಾಗಿದೆಯೋ ಎಂಬುದನ್ನು ಪತ್ತೆ ಹಚ್ಚಲು ಕ್ಷ-ಕಿರಣ ಬಳಸುತ್ತಾರೆ.
9) ಹಲ್ಲು ಕೀಳುವ ಸಂದರ್ಭದಲ್ಲಿ ಹಲ್ಲಿನ ಬೇರು ಮುರಿದಾಗ ಉಳಿದ ಮುರಿದ ಹಲ್ಲಿನ ಭಾಗವನ್ನು ತೆಗೆಯುವ ಮೊದಲು ದಂತ ಕ್ಷ-ಕಿರಣ ಪರೀಕ್ಷೆ ಮಾಡಿದಲ್ಲಿ ಹಲ್ಲು ತೆಗೆಯಲು ಸುಲಭವಾಗುತ್ತದೆ.
10) ದವಡೆ ಒಳಗೆ ಯಾವುದಾದರೂ ಕ್ಯಾನ್ಸರ್ ಅಥವಾ ಇನ್ನಾವುದೇ ರೋಗದ ಕುರುಹು ಕಾಣಿಸಿದಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಏಕ್ಸ್‍ರೇ ಬಳಸಲಾಗುತ್ತದೆ.
11) ಹಲ್ಲಿನ ಸೋಂಕು ತಗುಲಿ ಮುಖ ಊದಿಕೊಂಡಿದ್ದಲ್ಲಿ ಹಲ್ಲಿನ ಬೇರಿನ ಸುತ್ತ ಕೀವು ತುಂಬಿರುವುದನ್ನು ಪತ್ತೆ ಹಚ್ಚಲು ದಂತ ಕ್ಷ-ಕಿರಣ ಬಳಸುತ್ತಾರೆ.
12) ದಂತ ಇಪ್ಲಾಂಟ್ ಚಿಕಿತ್ಸೆ ಸಮಯದಲ್ಲಿ ಎಲುಬಿನ ರಚನೆ, ಸಾಂದ್ರತೆ ತಿಳಿಯಲು ದಂತ ಕ್ಷ-ಕಿರಣ ಬಳಸುತ್ತಾರೆ.
ಕೊನೆ ಮಾತು:
ದಂತ ಕ್ಷ-ಕಿರಣ ಎನ್ನುವುದು ಅತ್ಯಂತ ಸುರಕ್ಷಿತವಾದ ಪರೀಕ್ಷೆಯಾಗಿದ್ದು, ನಿರ್ಭೀತಿಯಿಂದ ದಂತ ವೈದ್ಯರ ಸಲಹೆಯಂತೆ ಅಗತ್ಯವಿದ್ದಾಗ ಮಾಡಿಸಿಕೊಳ್ಳಬಹುದು. ಗರ್ಭಿಣಿ ಸ್ತ್ರೀಯರಲ್ಲಿ ಲೆಡ್(ಸೀಸ) ಏಪ್ರನ್ ಬಳಸಿ ಭ್ರೂಣದಲ್ಲಿರುವ ಮಗುವಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಅದೇ ರೀತಿ ಥೆರಾಯಿಡ್ ಗ್ರಂಥಿಗೆ ಹಾನಿಯಾಗದಂತೆ ‘ಥೆರಾಯಿಡ್ ಕಾಲರ್’ ಬಳಸಲಾಗುತ್ತದೆ. ಅತೀ ಕಡಿಮೆ ವಿಕಿರಣ ಸೂಸುವ ಕಾರಣದಿಂದ, ದಂತ ಕ್ಷ-ಕಿರಣದಿಂದಾಗಿ ಕ್ಯಾನ್ಸರ್ ಬರುವ ಸಾಧ್ಯತೆ ಅತ್ಯಂತ ವಿರಳವಾಗಿರುತ್ತದೆ. ದಂತ ಕ್ಷ-ಕಿರಣದ ನೆರವಿನಿಂದಾಗಿ ದಂತ ವೈದ್ಯರಿಗೆ ದಂತ ಚಿಕಿತ್ಸೆ ನೀಡಲು ಮತ್ತು ಚಿಕಿತ್ಸೆಯನ್ನು ನಿರ್ಧರಿಸಲು ಸಹಕಾರಿಯಾಗಿರುವುದಂತೂ ಸತ್ಯವಾದ ಮಾತು. ಬರಿಗಣ್ಣಿಗೆ ಗೋಚರಿಸಿದ ದಂತ ಕ್ಷಯವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ಸಾಧ್ಯವಿರುತ್ತದೆ ಮತ್ತು ಮುಂದೆ ಬರುವ ತೊಂದರೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ಡಾ|| ಮುರಲೀ ಮೋಹನ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು
98451 35787