ಪಡುಬಿದ್ರಿಯ ಕಾಡಿಪಟ್ಣ ಪ್ರದೇಶದಲ್ಲಿ ತೀವೃಗೊಂಡ ಕಡಲ್ಕೊರೆತ

ಬೀಸಿದ ಭಾರೀ ಗಾಳಿ ಮಳೆಗೆ ಪಡುಬಿದ್ರಿ ಬೀಚ್ ಪಕ್ಕದ ಕಾಡಿಪಟ್ಣ ಶಂಕರ ಎಮ್.ಅಮೀನ್ ಮನೆ ಬಳಿ ಸುಮಾರು 50 ಮೀ. ಭಾಗದಲ್ಲಿ ಕಡಲ್ಕೊರೆತವುಂಟಾಗಿದ್ದು, ಸೊತ್ತು ಇನ್ನಷ್ಟು ಕಡಲು ಪಾಲಾಗುವ ಸಾಧ್ಯತೆ ಇದೆ.

ಕಡಲಿ ತಡಿಗೆ ಅಪ್ಪಳಿಸುತ್ತಿರುವ ಅಬ್ಬರದ ತೆರೆಗಳಿಗೆ ಈಗಾಗಲೇ 4 ತೆಂಗಿನ ಮರಗಳು, ಪಡುಬಿದ್ರಿ ಬೀಚ್ ಅಭಿವೃದ್ಧಿ ಕಾಮಗಾರಿಯ ಭಾಗವಾಗಿರುವ ಒಂದು ಬೃಹತ್ ವಿದ್ಯುತ್ ಕಂಬವು ನೆಲಕಚ್ಚಿದೆ. ಇಲ್ಲಿನ ಅಭಿವೃದ್ಧಿ ಕಾಮಗಾರಿಯ ವೇಳೆ ಹಾಸಲಾಗಿದ್ದ ಹಾಲೋ ಬ್ಲಾಕ್ಸ್ ಅಂಗಳದ ಭಾಗ, ಹಲವು ತೆಂಗಿನ ಮರಗಳು ಹಾಗೂ ಕಾಡಿಪಟ್ಣ ಕೈರಂಪಣಿ ಫಂಡ್‍ಗೆ ಸೇರಿರುವ ಗೋಡೌನ್ ಕಡಲ ಒಡಲು ಸೇರುವ ಸಾಧ್ಯತೆ ಇದೆ.

ಅಪಾಯದ ಮುನ್ನುಸೂಚನೆ ದೊರೆಯುತ್ತಿದಂತೆ ಗೋಡೌನ್ ಒಳಗಡೆ ಇದ್ದ ಬೆಲೆಬಾಳುವ ದೋಣಿ ಹಾಗೂ ಇತರೆ ಪರಿಕರಗಳನ್ನು ಫಂಡಿನ ಸದಸ್ಯರು ತೆರವುಗೊಳಿಸಿದ್ದಾರೆ. ಕಳೆದ ಬಾರಿ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಮುತುವರ್ಜಿಯಲ್ಲಿ ಪಡುಬಿದ್ರಿ ಮುಖ್ಯ ಬೀಚ್ ಹಾಗೂ ಕಾಡಿಪಟ್ಣಗಳಲ್ಲಿ ನಿರ್ಮಿಸಲಾದ ತಡೆಗೋಡೆಯ ಕಾಮಗಾರಿಯ ನಡುವೆ ಖಾಸಗಿ ವ್ಯಕ್ತಿಯೋರ್ವರ ಮನವಿಯಂತೆ ಸಮುದ್ರ ತೀರ ಪ್ರವೇಶಕ್ಕಾಗಿ ಕೈಬಿಡಲಾಗಿದ್ದ ಸುಮಾರು 50 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲೇ ಈ ಕೊರೆತ ಕಾಣಿಸಿಕೊಂಡಿದೆ.

ಈಗಾಗಲೇ ಕಳೆದ 2-3ವರ್ಷಗಳಿಂದೀಚೆಗೆ ನಡೆಸಲಾಗಿರುವ ತಡೆಗೋಡೆ ಕಾಮಗಾರಿಗಳ ಹಣವೂ ಸರಕಾರದ ವತಿಯಿಂದ ಗುತ್ತಿಗೆದಾರನಿಗೆ ಪಾವತಿಯಾಗಿ ಎಂಬ ಆರೋಪವೂ ಕೇಳಿ ಬರುತ್ತಿದೆ. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಬಜೆಟ್ ಅಧಿವೇಶನಲ್ಲಿ ಭಾಗಿಗಳಾಗಿದ್ದು ಬೆಂಗಳೂರಿನಲ್ಲಿದ್ದು, ಪಡುಬಿದ್ರಿ ಗ್ರಾ.ಪಂ. ಗ್ರಾಮ ಲೆಕ್ಕಾಧಿಕಾರಿ ಮಥಾಯಿ ಪಿ. ಎಂ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದಾರೆ. ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಅವರು ತಾವೇ ಸ್ವತಹಾ ಪರಿಶೀಲಿಸಿ, ಗ್ರಾಮ ಲೆಕ್ಕಾಧಿಕಾರಿಗಳ ವರದಿಯ ಮೇರೆಗೆ ಬಂದರು ಹಾಗೂ ಮೀನುಗಾರಿಕಾ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ ಈ ಪ್ರದೇಶದಲ್ಲಿ ತುರ್ತು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

Related Posts

Leave a Reply

Your email address will not be published.