ಪಡುಬಿದ್ರಿ: ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಪ್ರಕ್ರಿಯೆ ಅವಲೋಕನ ಸಭೆ

ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಪ್ರಕ್ರಿಯೆಗಳ ಸಂಬಂಧವಾಗಿ ಪಡುಬಿದ್ರಿಯ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರದಂದು ಅವಲೋಕನ ಸಭೆಯು ನಡೆಯಿತು. ಮುಂದಿನ ಮಳೆಗಾಲದೊಳಗೆ ಪಡುಬಿದ್ರಿಯ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಆಗಬೇಕಿದ್ದು, ಈ ಮಹತ್ಕಾರ್ಯಕ್ಕೆ ಗ್ರಾಮಸ್ಥರ ಸಹಭಾಗಿತ್ವ ಮತ್ತು ದೇಣಿಗೆಯೊಂದಿಗಿನ ಸಹಕಾರದಿಂದ ದೇವಾಲಯದ ಪುನರ್ ನಿರ್ಮಾಣ ಆಗಬೇಕಿದೆ’ ಸಕಲ ಅಡೆತಡೆಗಳ ಮೀರಿ ಮುನ್ನಡೆದಿದ್ದೇವೆ. ವೆಂಕಟರಮಣನ ಅನುಗ್ರಹವೂ ಇದ್ದು ಭೂಮಿಪೂಜೆಯ ಬಳಿಕ ಕೆಲಸ ಕಾರ್ಯಗಳು ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹೇಳಿದರು.

ಕಾಪು ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ‘ಮುಂಬೈಯಲ್ಲಿ ನಡೆದ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಂಬಂಧ ಪಟ್ಟ ಕಾರ್ಯಕ್ರಮದಲ್ಲಿ ತಾನೂ ಭಾಗವಹಿಸಿದ್ದೇನೆ ಹಾಗೂ ಧನಸಹಾಯಕ್ಕಾಗಿ ಸಹಕರಿಸುವೆ.ಇದು ಜೀವಿತಾವಧಿಯ ಧರ್ಮ ಸಾಧನೆಯಾಗಿದ್ದು,ಈ ಕೈಂಕರ್ಯದಲ್ಲಿ ಸಹಕಾರ ನೀಡುವ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ ಮತ್ತು ಸರ್ಕಾರದಿಂದ ದೊರೆಯುವ ಸಹಾಯಕ್ಕೂ ಪ್ರಯತ್ನಿಸೋಣ’ ಎಂದರು.ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲಉಪಾಧ್ಯಾಯ ಜೊತೆ ಕಾರ್ಯದರ್ಶಿ ನವೀನ್‌ಚಂದ್ರ ಜೆ. ಶೆಟ್ಟಿ, ಕಾಮಗಾರಿಯ ಖರ್ಚುವೆಚ್ಚಗಳ ಮಾಹಿತಿ ನೀಡಿದರು.
ದೇಗುಲದ ಅನುವಂಶಿಕ ಮೊಕ್ತೇಸರ ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ದೇವಸ್ಥಾನದ ಅರ್ಚಕ ಗುರುರಾಜ ಭಟ್, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ, ಗುತ್ತಿಗೆದಾರ ಸುಜಯ್ ಶೆಟ್ಟಿ ಕಾರ್ಕಳ, ಎಂಜಿನಿಯರ್ ವಿಷ್ಣುಮೂರ್ತಿ ಭಟ್ ಎಲ್ಲೂರು, ದಾರು ಶಿಲ್ಪದ ಜವಾಬ್ದಾರಿ ವಹಿಸಿರುವ ಸುಹಾಸ್ ಹೆಗ್ಡೆ ನಂದಳಿಕೆ ಉಪಸ್ಥಿತರಿದ್ದರು.ಸಮಿತಿಯ ಕಾರ್ಯದರ್ಶಿ ವೈ. ಸುಕುಮಾರ್ ಸ್ವಾಗತಿಸಿದರು. ಅನುವಂಶಿಕ ಮೊಕೇಸರ ಭವಾನಿ ಶಂಕರ ಹೆಗ್ಡೆ ಪ್ರಾಸ್ತಾವಿಸಿದರು. ಶ್ರೀಧರ ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ವಂದಿಸಿದರು.
