ಬಣ್ಣವು ತೋರುವ ಧರ್ಮಸೆರೆ


ಎಲೆ ಭಾನುವಾರ ದಾಟಿದ್ದೇವೆ, ಬಣ್ಣದ ಅಲೆಯ ಹೋಳಿ ಗಮನಿಸುತ್ತಿದ್ದೇವೆ. ಪಾಮ್ ಸಂಡೇ ಎಂಬುದು ಕ್ರಿಶ್ಚಿಯನರ ಆಚರಣೆಗಳಲ್ಲಿ ಒಂದು. ಪಾಮ್ ಎಂದರೆ ತಾಳೆ. ನಮ್ಮ ತೆಂಗು ಕಂಗಿನ ಸಮೇತ ಜಗತ್ತಿನಲ್ಲಿ 2,600 ಜಾತಿಯ ತಾಳೆ ಜಾತಿಯ ಮರಗಳು ಇವೆ. ಅತಿ ದೊಡ್ಡ ಕಾಯಿಯ ಡಬಲ್ ಕೋಕನಟ್ ಎಂಬುದು ಸಿಶೆಲಸ್ ದ್ವೀಪದಲ್ಲಿ ಮಾತ್ರ ಬೆಳೆಯುತ್ತದೆ. ಇದನ್ನು ಅದರ ಆಕಾರದಿಂದಾಗಿ ಲವ್ ಇಲ್ಲವೇ ಪ್ರೇಮದ ತೆಂಗು ಎನ್ನುತ್ತಾರೆ. ಪ್ರೇಮದ ತೆಂಗು ಎಂದ ಮೇಲೆ ಅದು ನೇರವಾಗಿ ಕಾಮನ ಹಬ್ಬದ ಹೋಳಿಗೆ ಸಂಬಂಧಿಸಿದೆ.


ತಾಳೆ ಮರಗಳಲ್ಲಿ ಉಪಯುಕ್ತವಾದವುಗಳು ಎಣ್ಣೆ ತಾಳೆ ಇತ್ಯಾದಿ ಇವೆ. ಹೆಚ್ಚಿನವು ಅಲಂಕಾರಿಕ. ಬಟಾಣಿ ಗಾತ್ರದ ಫಲದವುಗಳೂ ಇವೆ. ಈ ತಾಳೆ ಜಾತಿಯವು ಉಷ್ಣವಲಯ ಮತ್ತು ಸಮಶೀತೋಷ್ಣ ವಲಯದ ಬೆಳೆ ಆಗಿವೆ. ನಮಗೆಲ್ಲ ತೆಂಗು ಕಲ್ಪವೃಕ್ಷ. ತುಳುನಾಡಿನ ಕ್ರಿಶ್ಚಿಯನರಿಗೂ ತೆಂಗಿನ ಮರ ಬಹು ಮುಖ್ಯ. ಹಾಗಾಗಿ ಅವರು ಪಾಮ್ ಸಂಡೇ ದಿನದಂದು ತೆಂಗಿನ ಮರದ ಎಲೆ ಒಯ್ಯುತ್ತಾರೆ. ತೆಂಗಿನ ಎಲೆಯನ್ನು ತೆಂಗಿನ ಗರಿ ಎಂದೂ ಹೇಳಲಾಗುತ್ತದೆ. ಹಾಗಾಗಿ ಪಾಮ್ ಸಂಡೇಯನ್ನು ಗರಿಗಳ ಭಾನುವಾರ ಎನ್ನುವರು. ಆದರೆ ಗರಿಗಳು ಎಂದ ಕೂಡಲೆ ಮೊದಲು ನೆನಪಾಗುವುದು ಹಕ್ಕಿಗಳು. ಆದ್ದರಿಂದ ಪಾಮ್ ಸಂಡೆಯನ್ನು ತಾಳೆ ಎಲೆಗಳ ಸಂಡೇ ಎನ್ನಬಹುದು.


ತಾಳೆ ಎಲೆಯನ್ನು ಪ್ರಾರ್ಥನಾಲಯಕ್ಕೆ ಒಯ್ಯುವಾಗ ಅದನ್ನು ಶಿಲುಬೆಯ ಆಕಾರದಲ್ಲಿ ಮಡಚಿ ಕೊಂಡೊಯ್ಯುವುದೂ ರೂಢಿಯಲ್ಲಿ ಬಂದಿದೆ. ಕ್ರಿಶ್ಚಿಯನರ ಹಬ್ಬಗಳಲ್ಲಿ ಒಂದು ಈಸ್ಟರ್. ಅದಕ್ಕೆ ಮೊದಲಿನ ಭಾನುವಾರವನ್ನು ಪಾಮ್ ಸಂಡೇ ಎಂದು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ತಾಳೆ ಎಲೆಗಳ ವಿತರಣೆ ಮತ್ತು ತಾಳೆ ಒಲಿಯನ್ನು ಶಿಲುಬೆಗೆ, ಕ್ರಿಸ್ತ ಮೂರ್ತಿಗೆ ಕಟ್ಟುವುದೂ ಇರುತ್ತದೆ. ಆಗಿನ ಕಾಲದಲ್ಲಿ ಸ್ಥಳೀಯರು ಬಳಸುತ್ತಿನ ಕತ್ತೆಯ ಮೇಲೆ ಸವಾರಿ ಮಾಡುತ್ತ ಯೇಸು ಕ್ರಿಸ್ತರು ಜೆರೂಸಲೇಮ್ ಪ್ರವೇಶಿಸಿದ್ದನ್ನು ನೆನಪಿಸುವ ದಿನ ಪಾಮ್ ಸಂಡೇ. ಇಲ್ಲಿ ತಾಳೆ ಎನ್ನುವುದು ದೇಶದಿಂದ ದೇಶಕ್ಕೆ ಬದಲಾಗುತ್ತದೆ.


ಅಲ್ಲೆಲ್ಲ ವಿಲ್ಲೋ ಮರ, ಬಾಕ್ಸ್‍ಮರ, ಯೂ ಮರದ ಎಲೆಗಳನ್ನು ಬಳಸುತ್ತಿದ್ದುದು ಚರಿತ್ರೆಯಿಂದ ಕಂಡು ಬರುತ್ತದೆ. ಜೆರೂಸಲೇಮಿಗೆ ಯೇಸು ಕ್ರಿಸ್ತರ ಸ್ವಾಗತ ಕೂಡ ಹಾಗೆಯೆ ನಡೆದಿತ್ತು. ಜೀಸಸನು ಶಿಲುಬೆ ಏರುವುದಕ್ಕೆ ಮೊದಲು ಪರಮೋತ್ಸಾಹದಿಂದ ಜೆರೂಸಲೇಮ್ ಪ್ರವೇಶಿಸಿದ್ದಕ್ಕೆ ಈ ಆಚರಣೆ ನಡೆಯುತ್ತದೆ. ಅಲ್ಲೆಲ್ಲ ಎಲೆಗಳನ್ನು ಸ್ವಾಗತಕ್ಕೆ, ಸನ್ಮಾನಕ್ಕೂ ಬಳಸಲಾಗುತ್ತಿತ್ತು. ಎಲೆಗಳು ಜೀವಂತಿಕೆಯ, ಲೋಕದ ಬದುಕಿನ ಹಸಿರಿನ ಸಂಕೇತವಾಗಿದೆ. ಹಸಿರು ನಮ್ಮ ಆಹಾರಕ್ಕೆ ಮುನ್ನುಡಿ. ಆದರೆ ಹಸಿರು ಸಸ್ಯಗಳು ನೀಡುವ ಫಲಗಳು ಮಾತ್ರ ಬಹು ಬಣ್ಣದವುಗಳಾಗಿರುತ್ತವೆ. ಆ ಬಹು ಬಣ್ಣಗಳು ಹೋಳಿ ಹಬ್ಬದಲ್ಲಿ ಆಡುವುದಾಗಿದೆ. ಹೋಳಿ ಭಾರತದಲ್ಲಿ ಬಡಗಣ ಭಾರತದವರು ಆಚರಿಸುವ ಹಬ್ಬವಾಗಿದೆ.

ಈ ಹೋಳಿ ಹಬ್ಬದ ಹಾಡುಗಳು ಭಾರತದ ಎಲ್ಲ ಭಾಷೆಯ ಸಿನಿಮಾಗಳಲ್ಲೂ ಬಂದಿವೆ. ಹಿಂದಿ ಭಾಷೆಯ ಚಿತ್ರಗಳಲ್ಲಿ ಎಷ್ಟು ಬಂದಿವೆ ಎಂದು ಅಲ್ಲಿಯವರಿಗೇ ಲೆಕ್ಕ ಇದ್ದಂತಿಲ್ಲ. ಕನ್ನಡ ಭಾಷೆಯ ಸಿನಿಮಾಗಳಲ್ಲೂ ಬಂದಿವೆ. ವರನಟ ರಾಜಕುಮಾರ್ ನಟಿಸಿದ್ದ ವೀರಕೇಸರಿ ಎಂಬ ಕಪ್ಪು ಬಿಳುಪು ಚಿತ್ರದಲ್ಲಿ ಒಂದು ಹೋಳಿ ಗುಂಪು ಕುಣಿತದ ದೃಶ್ಯವಿದೆ. ಆ ಚಿತ್ರದ ಕೊನೆಯ ಎರಡು ರೀಲುಗಳು ಬಣ್ಣದಲ್ಲಿ ತಯಾರಾಗಿದ್ದವು. ಹೋಳಿ ಹಬ್ಬದ ದೃಶ್ಯವನ್ನು ಬಣ್ಣದಲ್ಲಿ ಮಾಡದೆ ಕೊನೆಯ ಎರಡು ರೀಲುಗಳನ್ನು ಬಣ್ಣದಲ್ಲಿ ಮಾಡಿದ್ದರು. ಎಲ್ಲ ಮುಖ್ಯ ನಟರು ತೋರಲಿ ಎಂಬುದಕ್ಕೆ ಹಾಗೆ ಮಾಡಿರಬಹುದು. ಆದರೆ ಹೋಳಿ ಹಾಡು ಬಣ್ಣದಲ್ಲಿ ಇರಲಿಲ್ಲವಾದ್ದರಿಂದ ಅದು ಹೋಳಿಯ ಮಹತ್ವವನ್ನು ಎತ್ತಿ ತೋರಿಸುವುದಿಲ್ಲ.
ಹಿಂದಿ ಸಿನಿಮಾಗಳಲ್ಲೂ ಕಪ್ಪು ಬಿಳುಪು ಸಿನಿಮಾ ಕಾಲಗಳಲ್ಲೂ ಹೋಳಿ ಆಡಿರೇ ಹಾಡಿನ ಕುಣಿತಗಳು ಬಂದಿವೆ. ಆದರೆ ಬಣ್ಣಗಳೆಲ್ಲ ಕಪ್ಪು, ಕಂದು, ಬಿಳಿಯಲ್ಲಿ ಕಂಡಿವೆ. ಹೋಳಿ ಹಬ್ಬವು ವಸಂತ ಕಾಲದಲ್ಲಿ ಬರುತ್ತದೆ. ವಸಂತ ಕಾಲದಲ್ಲಿ ಬಹು ಬಣ್ಣದ ಹೂವುಗಳು, ಹಣ್ಣುಗಳು, ಫಲಗಳು ಲೋಕದ ಜನರಿಗೆ ಸಿಗುವ ಕಾಲವಾಗಿದೆ. ಹಾಗಾಗಿ ಸುಗ್ಗಿಗೆ ಮೊದಲಿನ ವಸಂತ ಕಾಲದ ಹಬ್ಬವಾಗಿ ಅದು ಬಹು ಹಿಂದೆ ಆಚರಣೆಗೊಂಡಿರಬಹುದು. ಆದರೆ ಅದು ಕಾಮ ದಹನ, ಕಾಮನ ಹಬ್ಬ ಎಂದಿತ್ಯಾದಿ ಪುರಾಣ ಕತೆಗಳೊಂದಿಗೆ ತಳುಕು ಹಾಕಿಕೊಂಡಿದೆ.


ಹೂ ಹಣ್ಣಿನ ಕಾಲವು ಒಲವಿನ ಜನರಿಗೆ ಹೇಳಿ ಮಾಡಿಸಿದ ಕಾಲ ಸರಿ. ಪುರಾಣದ ರತಿ ಮನ್ಮಥರ ಕುಣಿತದಿಂದ ಶಿವನಿಗೂ ಪಾರ್ವತಿಗೂ ಮದುವೆ ಮಾಡಿಸುವ ಪುರಾಣ ಕತೆಯು ಇದಕ್ಕೆ ಸೇರಿಕೊಂಡಿದೆ. ಶಿವನು ಕಾಮನನ್ನು ಸುಡುವುದು ಶಿವಯೋಗಿ ತತ್ವವಾಗಿದೆ. ಅದು ಕಾಮ ಎಂಬ ವ್ಯಕ್ತಿಯೊಬ್ಬನ ಬಗೆಗೆ ಎಂದು ತಿಳಿದುಕೊಳ್ಳುವುದು ಪುರಾಣ ದಾರಿ. ಎಲ್ಲೆಲ್ಲಿಂದಲೋ ಕಟ್ಟಿಗೆ, ಪುರಲೆ, ಬೆರಣಿ ಕದ್ದು ಕಾಮನನ್ನು ಸುಟ್ಟು ಕುಣಿಯುವರನ್ನು ಈಗಲೂ ಭಾರತದ ಎಲ್ಲ ಕಡೆ ಕಾಣಬಹುದು. ಹಾಗೆಯೇ ಪರಸ್ಪರ ಬಣ್ಣ ಎರಚಾಡುತ್ತ ಹೊರಡುವ ಕುಣಿಯುವ ಆಚರಣೆಯನ್ನೂ ಭಾರತದ ಎಲ್ಲ ಕಡೆ ಇಂದಿಗೂ ಕಾಣುವುದು ಸಾಧ್ಯ.


ಇವೆರಡಕ್ಕೂ ಪುರಾಣದ ಆಚೆಗೆ ತಾಳೆ ಆಗುವುದಿಲ್ಲ. ಎರಡೂ ವಿಭಿನ್ನ ಆಚರಣೆಗಳಿದ್ದು ಒಂದು ಶೋಕದ ಮತ್ತೊಂದು ಸಂತೋಷದ ಸೂಚಕವಾಗಿದೆ. ಅಳು ನಗು ಎನ್ನುವುದು ಬದುಕಿನ ಎರಡು ಮಗ್ಗುಲುಗಳು. ಕಾಮನನ್ನು ಬೆಂಕಿಗೆ ಸುಟ್ಟ ಮೇಲೆ ಮದುವೆಯಾಗುವುದು, ಮಗು ಆಗುವುದು ಸಂತೋಷಕ್ಕೆ ದಾರಿ ನಿಜ. ಆದರೆ ಕಾಮನನ್ನು ಕೊಂದ ಮೇಲೆ ಕಾಮನೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಪುರಾಣ ಮತ್ತು ನಂಬಿಕೆ ಆದ್ದರಿಂದ ಅದನ್ನು ಹೆಚ್ಚು ಪ್ರಶ್ನಿಸುವಂತೆ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಾರ್ಮಿಕ ಸ್ವಾತಂತ್ರ್ಯದ ಒಂದು ತಡಮೆ ಇದೆ. ಆದರೂ ಬಣ್ಣದ ಹಬ್ಬವು ಎಲ್ಲರ ಬಣ್ಣವನ್ನು ಬಡಿದೆಬ್ಬಿಸುತ್ತದೆ ಎಂದು ಹೇಳಲಿಕ್ಕಾಗದು. ಇಲ್ಲಿನ ಬಡವರ, ದದ್ದುಳಿಯಲ್ಪಟ್ಟವರ ಕಾಮನೆಯೇ ಬೇರೆ.

ಬೇಕಾದ್ದೆಲ್ಲ ಸಿಗದ, ಬಯಸಿದ್ದೆಲ್ಲ ಬಾರದ ಲೋಕದಲ್ಲಿ ಅವರು ಬೇಯುವವರು. ಹಬ್ಬ ಬಂದಾಗ ಅವರ ಬದುಕು ಹಬ್ಬದ ವೆಚ್ಚಕ್ಕೆ ಹಣ ಹೊಂದಿಸುವುದರಲ್ಲಿ ಬಾಡುತ್ತದೆ. ಆದರೂ ಸಾಲ ಮಾಡಿ ಹಬ್ಬ ಮಾಡುವವರಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಮುಂದೊಂದು ದಿನ ಸಾಲ ಅವರ ಬದುಕಿನ ಬಣ್ಣಗೆಡಿಸುತ್ತದೆ. ಕಪ್ಪು ಬಿಳುಪು ಮತ್ತು ಬಣ್ಣದ ಚಲನಚಿತ್ರಗಳ ವ್ಯತ್ಯಾಸವು ಅವರ ಬದುಕಿನಲ್ಲಿ ಹಿಮ್ಮುಖ ಚಲನೆ ಕಾಣುತ್ತದೆ. ಈಜಿಪ್ತ್ ಅರಸರು ಬಿಳಿಯನ್ನು ಸಾವು ಬಣ್ಣವೆಂದೂ ಕೆಂಪು ಮತ್ತು ಹಳದಿ ರಾಜ ಬಣ್ಣವೆಂದೂ ಬಳಸುತ್ತಿದ್ದರು.


ಬಣ್ಣವನ್ನೇ ಗುರುತಿಸದ ಪ್ರಾಣಿ ಕಣ್ಣುಗಳು ಲೋಕದಲ್ಲಿ ಇವೆ. ಹಾಗಾಗಿ ಬಣ್ಣ ಕಾಣುವ ನಾವೆ ಬಣ್ಣಿಸಬಹುದಾದವರು. ಬೆಕ್ಕು ನಾಯಿಗಳು, ಬೂದು ಮತ್ತು ಹಳದಿ ಬಣ್ಣದ ಹೊರತು ಬೇರೆ ಬಣ್ಣ ಕಾಣವು. ಕೆಲವರಿಗೆ ಮೈ ಬಣ್ಣ ಕಾಣುವುದರಲ್ಲೇ ಆಸಕ್ತಿ. ಅದು ಕಾಮನೆಯೂ ಇರಬಹುದು; ಜಾತೀಯ ಭಾವನೆಯದೂ ಆಗಿರಬಹುದು.

ಬರಹ: ಪೇರೂರು ಜಾರು( ಹಿರಿಯ ಸಂಪಾದಕರು)

Related Posts

Leave a Reply

Your email address will not be published.