ಪಿಂಗಾರ ಕಲಾವಿದೆರ್ ಬೆದ್ರ- ನೂತನ ನಾಟಕದ ಶೀರ್ಷಿಕೆ ಬಿಡುಗಡೆ
ಪಿಂಗಾರ ಕಲಾವಿದೆರ್ ಬೆದ್ರ ತಂಡದ ನೂತನ ನಾಟಕ `ಕದಂಬ’ ಇದರ ಶೀರ್ಷಿಕೆಯನ್ನು ಭಾನುವಾರ ಕೋಟೆ ಬಾಗಿಲು ಮಹಾಮ್ಮಾಯಿ ದೇವಸ್ಥಾನದ ಆವರಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ದೇವಳದ ಆಡಳಿತ ಮೋಕ್ತೇಸರ ನಾರಂಪ್ಪಾಡಿಗುತ್ತು ಸೇಸಪ್ಪ ಹೆಗ್ಡೆ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದರು.ತಂಡದ ಮುಖ್ಯಸ್ಥ ಮಣಿಕೋಟೆಬಾಗಿಲು ಪ್ರಾಸ್ತಾವಿಕವಾಗಿ ಮಾತನಾಡಿ, ಕದಂಬ ನಾಟಕವು ತುಳು ರಂಗಭೂಮಿಯಲ್ಲಿ ವಿಭಿನ್ನ ಪ್ರಯತ್ನವಾಗಿದ್ದು, ವಿನೂತನ ಶೈಲಿಯ ರಂಗ ವಿನ್ಯಾಸವನ್ನು ಹೊಂದಿದೆ. ಈ ನಾಟಕವು ಎಲ್ಲ ವಯೋಮಾನದ ಪ್ರೇಕ್ಷಕರನ್ನು ಸೆಳೆಯುವ ರೀತಿಯಲ್ಲಿದ್ದು, ಉತ್ತಮ ಸಂದೇಶವನ್ನು ನೀಡಲಿದೆ. ನಮ್ಮ ತಂಡದ ಹಿಂದಿನ ಏಳು ನಾಟಕಗಳಿಗೆ ಕಲಾಪ್ರೇಮಿಗಳು ಉತ್ತಮ ಪ್ರೋತ್ಸಾಹ ಲಭಿಸಿದೆ.
ಅದರಂತೆ ಈ ನಾಟಕಕ್ಕೂ ಪ್ರೋತ್ಸಾಹ ನೀಡುವಿರೆನ್ನುವ ಭರವಸೆಯಿದೆ.ಜೂನ್ 4ರಂದು ಶ್ರೀಕ್ಷೇತ್ರ ಶೃಂಗೇರಿಯಲ್ಲಿ ಮುಹೂರ್ತಗೊಂಡಿರುವ ಕದಂಬ ನಾಟಕ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.
ರಂಗ ಕಲಾವಿದ, ನಾಟಕಕಾರ ಇಂದು ಶೇಖರ್ ಎಂ., ಚಲನಚಿತ್ರ ನಟ ಸುರೇಶ್ ಅಂಚನ್, ಮಹಮ್ಮಾಯಿ ಸೇವಾ ಸಮಿತಿಯ ಅಧ್ಯಕ್ಷ ರಾಜೇಶ್ ಕೋಟೆಕಾರ್, ಗೌರವಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ತಂಡದ ಹಿರಿಯ ಕಲಾವಿದ ವಸಂತ ನಾರಾವಿ, ಮಣಿ ಕೋಟೆಬಾಗಿಲು ಅವರ ತಂದೆ ಹರಿಶ್ಚಂದ್ರ ಭಟ್ ಉಪಸ್ಥಿತರಿದ್ದರು.
ಕಲಾವಿದ ಗೌತಮ್ ವಗ್ಗ ಸ್ವಾಗತಿಸಿದರು. ಶಿವಂ ಪದವು ಕಾರ್ಯಕ್ರಮ ನಿರೂಪಿಸಿದರು.