ಪುತ್ತೂರು : ಮತದಾರರ ಗುರುತಿನ ಚೀಟಿ ಅನಧಿಕೃತ ವಿತರಣೆ ಆರೋಪ

ಪುತ್ತೂರು: ಮತದಾರನ ಗುರುತಿನ ಚೀಟಿಯನ್ನು ಅನಧಿಕೃತವಾಗಿ ವಿತರಣೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುತ್ತೂರಿನ ಜನಸೇವಾ ಕೇಂದ್ರವೊಂದರ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಅಂಗಡಿಗೆ ಬೀಗ ಹಾಕಿದ ಘಟನೆ ನಡೆದಿದೆ. ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದ ಹಳೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಜನಸೇವಾ ಕೇಂದ್ರದ ಮೇಲೆ ದಾಳಿ ಮಾಡಿದೆ. ತಹಸೀಲ್ದಾರ್ ನಿಸರ್ಗ ಪ್ರಿಯ ಮತ್ತು ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಪೆÇಲೀಸ್ ಬಂದೋಬಸ್ತ್ ನಲ್ಲಿ ತನಿಖೆ ನಡೆಸಲಾಯಿತು.

ಪುತ್ತೂರಿನ ವ್ಯಕ್ತಿಯೊಬ್ಬರ ಮತದಾರನ ಗುರುತಿನ ಚೀಟಿ ಕಳೆದುಹೋಗಿದ್ದು, ಅವರು ಜನ ಸೇವಾ ಕೇಂದ್ರಕ್ಕೆ ಬಂದು ವಿಷಯ ತಿಳಿಸಿದ್ದರು. ಓಟರ್ ಐಡಿ ಮತ್ತೆ ದೊರಕಿಸುವ ಸಂಬಂಧ ಆನ್ ಲೈನ್ ಅರ್ಜಿ ಪ್ರಕ್ರಿಯೆ ನಡೆಸಿ ಕೇಂದ್ರದಲ್ಲೇ ಗುರುತಿನ ಚೀಟಿ ಮುದ್ರಿಸಿ ಕೊಡಲಾಗಿದೆ ಎಂದು ಆಪಾದಿಸಲಾಗಿದೆ. ಗುರುತಿನ ಚೀಟಿಯ ಮೇಲೆ ಅನುಮಾನ ಬಂದ ಕಾರಣ ಅವರು ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ತೆರಳಿ ತೋರಿಸಿದರು ಎನ್ನಲಾಗಿದೆ. ಅಧಿಕಾರಿಗಳು ತಪಾಸಣೆ ನಡೆಸಿದಾಗ ಹೊರಗಿನ ಕೇಂದ್ರದಲ್ಲಿ ಓಟರ್ ಐಡಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ದಾಳಿ ಮಾಡಿ ತನಿಖೆ ಮಾಡಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಅಪರಾಧ ಮಾಡಿರುವುದು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ