ಪುತ್ತೂರು : ಮಧುಮೇಹ ನಿಯಂತ್ರಣಕ್ಕಾಗಿ ಔಷಧಿಯ ಹಣ್ಣುಗಳ ಬೆಳೆ – ಪ್ರಫುಲ್ಲಾ ರೈ ಅವರ ಟಾರೇಸ್ ತೋಟವಿದು

ಸಾಕಷ್ಟು ಕೃಷಿ ಜಾಗವಿದ್ದರೂ ಕೃಷಿಯಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುವವರೇ ಹೆಚ್ಚು. ಆದರೆ ನಗರದ ಮಧ್ಯದಲ್ಲೇ ಇರುವ ಮಹಿಳೆ ಕೃಷಿ ಭೂಮಿ ಇಲ್ಲದಿದ್ದರೂ ತನ್ನ ಮನೆಯ ಟಾರೇಸ್ ನಲ್ಲಿ ಉತ್ತಮ ಕೃಷಿ ಬೆಳೆಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಮಧುಮೇಹ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಔಷಧಿಯಂತೆ ಕೆಲಸ ಮಾಡುವ ಹಣ್ಣುಗಳ ಗಿಡಗಳ ಬೆಳೆಗೇ ಈಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ನೆಲದಲ್ಲೇ ಬೆಳೆಯಲು ಹರ ಸಾಹಸ ಪಡಬೇಕಾದ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಬೆಳೆಯುವ ಈಕೆಯ ಟಾರೇಸ್ ಕೃಷಿಯನೊಮ್ಮೆ ನೋಡಲೇಬೇಕಿದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದ ಮಧ್ಯಭಾಗದಲ್ಲಿರುವ ಕಲ್ಲಿಮಾರು ನಿವಾಸಿ ಪ್ರಫುಲ್ಲಾ ರೈ ಅವರ ಟಾರೇಸ್ ತೋಟವಿದು. ಇರುವ ಎಂಟು ಸೆಂಟ್ಸ್ ಜಾಗದಲ್ಲಿ ಸಣ್ಣದೊಂದು ಮನೆಯ ಒಡತಿಯಾಗಿರುವ ಇವರು ತನ್ನ ಬಿಡುವಿನ ವೇಳೆಯನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಇವರಿಗೆ ಪ್ರತ್ಯೇಕವಾದ ಕೃಷಿ ಭೂಮಿ ಇಲ್ಲದ ಕಾರಣ ಇವರ ಮನೆಯ ಟಾರೇಸ್ ಇವರ ಕೃಷಿ ಭೂಮಿಯಾಗಿ ಮಾರ್ಪಟ್ಟಿದೆ. ತರಕಾರಿ, ಹಣ್ಣ, ಹೂವು ಹೀಗೆ ಎಲ್ಲಾ ತರಹದ ಕೃಷಿ ಇವರ ಟಾರೇಸ್ ನಲ್ಲಿ ಬೆಳೆಯಲಾಗುತ್ತಿದೆ.

ಹಲವು ವರ್ಷಗಳ ಹಿಂದೆ ತನ್ನ ಮನೆಯ ಖರ್ಚಿಗಾಗಿ ತರಕಾರಿ ಗಿಡಗಳನ್ನು ಟಾರೇಸ್ ಮೇಲೆ ಬೆಳೆಸಲು ಆರಂಭಿಸಿದ ಪ್ರಫುಲ್ಲಾ ರೈ ಇದೀಗ ಹಣ್ಣಿನ ಗಿಡಗಳನ್ನು ಬೆಳೆಸುವ ಮೂಲಕ ಸುದ್ಧಿಯಲ್ಲಿದ್ದಾರೆ. ಅದರಲ್ಲೂ ಮಧುಮೇಹಿಗಳು ಹೆಚ್ಚಾಗಿ ಸೇವಿಸಬೇಕಾದಂತಹ ಹಲವು ವಿಧದ ಹಣ್ಣುಗಳು ಇವರ ತೋಟದಲ್ಲಿ ಫಲ ಬಿಡುತ್ತಿದೆ. ಅಲ್ಲದೆ ವಿದೇಶೀ ಹಣ್ಣುಗಳನ್ನು ಭರಪೂರವಾಗಿ ಬೆಳೆಯುತ್ತಿರುವ ಇವರ ಟಾರೇಸ್ ನಲ್ಲಿ ಡ್ರ್ಯಾಗನ್ ಫ್ರುಟ್ ನ ಸಣ್ಣ ತೋಟವೇ ಇದೆ.

ಸುಮಾರು ಐವತ್ತಕ್ಕೂ ಮಿಕ್ಕಿದ ಡ್ರ್ಯಾಗನ್ ಫ್ರುಟ್ ಗಿಡಗಳನ್ನು ಟಾರೇಸ್ ಸುತ್ತಲೂ ಬೆಳೆಸುತ್ತಿರುವ ಫ್ರಫುಲ್ ರೈ ಮನೆಗೆ ಬಂದ ಅತಿಥಿಗಳಿಗೆಲ್ಲಾ ಈ ಹಣ್ಣುಗಳನ್ನೇ ನೀಡಿ ಅತಿಥ್ಯ ಮಾಡುತ್ತಾರೆ. ಡ್ರ್ಯಾಗನ್ ಫ್ರುಟ್ ಜೊತೆಗೆ ಜೊಬೇಟಿಕಾ, ಪೀನಟ್ ಬಟರ್ ಫ್ರುಟ್, ಕುಮ್ಕ್ವಟ್ ,ಸಂತುಲ್, ಮುಸುಂಬಿ, ಕಿತ್ತಳೆ, ದ್ರಾಕ್ಷಿ, ಪೇರಳೆ, ಚಿಕ್ಕು, ಮಾವು, ಹಲಸು, ರಾಮ್ ಫಲ, ಸೀತಾಫಲ ,ಲಕ್ಷ್ಮಣ ಫಲ, ಹನುಮ ಫಲ, ಬುಗುರಿ ಹಣ್ಣು ನೆಲ್ಲಿಕಾಯಿ, ನಿಂಬೆ,ಗಜನಿಂಬೆ,ಪನ್ನೇರಳೆ, ಅಂಜೂರ, ಎಗ್ ಫ್ರುಟ್, ಮ್ಯಾಜಿಕ್ ಫ್ರುಟ್, ಜಂಬೂ ನೇರಳೆ, ದಾಳಿಂಬೆ, ಅಂಬಟೆ,
ಪುನರ್ಪುಳಿ ( ಬಿರಿಂಡಾ) ,ರಂಬುಟಾನ್,ಲೀಚಿ ಹೀಗೆ ನೂರಕ್ಕೂ ಮಿಕ್ಕಿದ ವೆರೈಟಿ ಟಾರೆಸ್ ನಲ್ಲಿದೆ. ಮಾತ್ರವಲ್ಲದೆ ವಿವಿಧ ಪ್ರಕಾರದ ತರಕಾರಿ ಹಾಗೂ ಹೂದೋಟ ಇವರ ಟಾರೇಸ್ ನಲ್ಲಿದ್ದು, ಕೃಷಿಯ ಮೇಲಿನ ಆಸಕ್ತಿ ಈ ರೀತಿಯ ಹವ್ಯಾಸಕ್ಕೆ ಕಾರಣವಾಯಿತು ಎನ್ನುತ್ತಾರೆ ಪುತ್ತೂರಿನ ಪ್ರಫುಲ್ಲಾ ರೈ.

ಕೃಷಿ ಭೂಮಿಯಿದ್ದರೂ ಕೃಷಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುತ್ತಿರುವ ಈ ದಿನಗಳಲ್ಲಿ ಭೂಮಿ ಇಲ್ಲದಿದ್ದರೂ ತನ್ನ ಮನೆ ಟಾರೇಸನ್ನೇ ಕೃಷಿಭೂಮಿಯನ್ನಾಗಿ ರೂಪಿಸಿಕೊಂಡಿರುವ ಪ್ರಫುಲ್ಲಾ ರೈ ಕೃಷಿಯಿಂದ ಹಿಂದೆ ಸರಿಯುವವರಿಗೆ ಆದರ್ಶಪ್ರಾಯರಾಗಿದ್ದಾರೆ. ತನಗೆ ಬೇಕಾದ ಹಣ್ಣು, ತರಕಾರಿಯನ್ನು ತಾನೇ ಬೆಳೆಯುವ ಪ್ರಫುಲ್ಲಾ ರೈ ಆಹಾರದಲ್ಲಿ ಆತ್ಮನಿರ್ಭರತೆ ಹೊಂದಿದ್ದಾರೆ.

Related Posts

Leave a Reply

Your email address will not be published.