ಪುತ್ತೂರು: ಲೈವ್ ವೀಡಿಯೋ ಮಾಡಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನ
ಲೈವ್ ವಿಡಿಯೋ ಮಾಡಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದ್ದು ಗಂಭೀರ ಸ್ಥಿತಿಯಲ್ಲಿ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರಿನ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸುವ ಮುನ್ನ ಯುವಕ ಬ್ಯಾರಿ ಭಾಷೆಯಲ್ಲಿ ವಿಡಿಯೋ ಮಾಡಿದ್ದು ಕೃತ್ಯಕ್ಕೆ ಕಾರಣ ಹೇಳಿ ನೇಣಿಗೆ ಶರಣಾಗುವುದಾಗಿ ಹೇಳಿದ್ದ.
“ನಾನು ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್. ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿದ್ದೆ. ಈಗ ಅಲ್ಲಿನ ಕುಟುಂಬದ ಹುಡುಗಿ ಜೊತೆಗೆ ಸಂಬಂಧ ಇದೆಯೆಂದು ಹೇಳಿ ಮನೆಗೆ ಕರೆದು ಹಲ್ಲೆ ನಡೆಸಿದ್ದಾರೆ. ನನಗೆ ಯಾವುದೇ ಹುಡುಗಿ ಜೊತೆಗೆ ಸಂಬಂಧ ಇಲ್ಲ. ನಾನು ಈಗ ಪುತ್ತೂರಿಗೆ ಹೋಗಿ ಸಾವಿಗೆ ಶರಣಾಗುತ್ತೇನೆ. ನನ್ನ ಸಾವಿಗೆ ಅದ್ರಾಮ ಮತ್ತು ಅವನ ಕುಟುಂಬಸ್ಥರೇ ಕಾರಣ ” ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
ಕುಟುಂಬದ ಹೆಣ್ಣಿನ ಜೊತೆಗೆ ಸಂಬಂಧ ಇದೆಯೆಂದು ಹೇಳಿ ಹಲ್ಲೆ ನಡೆಸಿದ್ದಾರೆ. ನನಗೆ ಯಾವುದೇ ಹುಡುಗಿಯ ಸಂಬಂಧ ಇಲ್ಲ, ಆಕೆಯ ಗಂಡನೇ ಈ ಕಾರಿನಲ್ಲಿದ್ದಾನೆ ಎಂದು ಹೇಳಿ ಜೊತೆಗಿದ್ದ ನಾಲ್ವರು ಯುವಕರನ್ನು ತೋರಿಸಿದ್ದಾನೆ. ನೇಣಿಗೆ ಶರಣಾಗುತ್ತೇನೆಂದು ಹೇಳಿ ವಿಡಿಯೋ ಸ್ಟಾಪ್ ಮಾಡಿದ್ದ. ಆನಂತರ ರಾತ್ರಿಯೇ ಪುತ್ತೂರಿನಲ್ಲಿ ನೇಣಿಗೇರಲು ಯತ್ನಿಸಿದ್ದು ಜೊತೆಗಿದ್ದವರು ರಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ಕರೆತಂದಿದ್ದಾರೆ.