ಬಂಟ್ವಾಳ: ನೆಚ್ಚಿನ ಶಿಕ್ಷಕಿಗೆ ನಿವೃತ್ತಿ ಸಂದರ್ಭ ಬಂಗಾರದ ಮಾಲೆ ನೀಡಿದ ಹಳೆ ವಿದ್ಯಾರ್ಥಿಗಳು

ಬಂಟ್ವಾಳ: ಕಳೆದ 3 ದಶಕಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿಗೆ ಅವರ ನಿವೃತ್ತಿ ವೇಳೆ ಹಳೆ ವಿದ್ಯಾರ್ಥಿಗಳೆಲ್ಲಾ ಸೇರಿ ಸುಮಾರು 2 ಲಕ್ಷ ಹತ್ತು ಸಾವಿರ ರೂ. ವೌಲ್ಯದ 33 ಗ್ರಾಂನ ಬಂಗಾರದ ಮಾಲೆ ಉಡುಗೊರೆಯಾಗಿ ನೀಡಿದ ಅಪರೂಪದ ಘಟನೆ ಪಾಣೆ ಮಂಗಳೂರಿನ ಅಕ್ಕರಂಗಡಿಯ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಜಯಲಕ್ಷ್ಮೀ ಆರ್. ಭಟ್ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 28 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು, 2020ರಲ್ಲಿ ನಿವೃತ್ತಿಯಾಗಿದ್ದರು. ಬಳಿಕ ಶಿಕ್ಷಕರ ಕೊರತೆಯ ಹಿನ್ನೆಲೆಯಲ್ಲಿ ಅದೇ ಶಾಲೆಯಲ್ಲಿ ಯಾವುದೇ ವೇತನ ಪಡೆಯದೇ ಸೇವೆಯನ್ನು ಮುಂದುವರಿಸಿದ್ದರು. ಒಟ್ಟು 31 ವರ್ಷಗಳ ಕಾಲ ದಾರುಲ್ ಇಸ್ಲಾಂ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಜಯಲಕ್ಷ್ಮೀ ಆರ್. ಭಟ್ ವಿದ್ಯಾರ್ಥಿಗಳ ಪಾಲಿಗೆ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿದ್ದರು. ಈ ಅವಧಿಯಲ್ಲಿ ಸುಮಾರು 2000ದಷ್ಟು ವಿದ್ಯಾರ್ಥಿಗಳಿಗೆ ಅವರು ಮಾರ್ಗದರ್ಶಕರಾಗಿದ್ದರು.

ಈ ಹಿನ್ನೆಲೆಯಲ್ಲಿ ತಮ್ಮ ನೆಚ್ಚಿನ ಶಿಕ್ಷಕರಿಗೆ ಉಡುಗೊರೆಯೊಂದನ್ನು ನೀಡಲು ಹಳೆ ವಿದ್ಯಾರ್ಥಿಗಳು ಯೋಜನೆ ರೂಪಿಸಿದ್ದರು. ಈ ಕುರಿತಾಗಿ ವಾಟ್ಸಪ್ ಗ್ರೂಪ್‌ನಲ್ಲಿ ಚರ್ಚೆ ನಡೆಸಿ ಕೊನೆಗೆ ಬಂಗಾರದ ಮಾಲೆಯೊಂದನ್ನು ಉಡುಗೊರೆಯಾಗಿ ನೀಡುವ ನಿರ್ಧಾರಕ್ಕೆ ಬಂದಿದ್ದರು. ಈ ನಿಟ್ಟಿನಲ್ಲಿ ಹಣ ಹೊಂದಿಸಿದ ಹಳೆ ವಿದ್ಯಾರ್ಥಿಗಳು ಸುಮಾರು 2 ಲಕ್ಷದ 10 ಸಾವಿರ ರೂ. ವೌಲ್ಯದ 33 ಗ್ರಾಂನ ಬಂಗಾರದ ಮಾಲೆಯನ್ನು ಖರೀದಿಸಿದ್ದರು. ಬಂಗಾರದ ಮಾಲೆ ಉಡುಗೊರೆ ವಿಚಾರವನ್ನು ಅತ್ಯಂತ ಗೌಪ್ಯವಾಗಿರಿಸಿದ್ದ ಹಳೆ ವಿದ್ಯಾರ್ಥಿಗಳ ತಂಡ, ಬುಧವಾರ ನಡೆದ ಶಾಲಾ ವಾರ್ಷಿಕೋತ್ಸವದಂದು ಶಿಕ್ಷಕಿಗೆ ಸನ್ಮಾನ ನಡೆಸುವ ವೇಳೆ ಆಶ್ಚರ್ಯಕರ ರೀತಿಯಲ್ಲಿ ಬಂಗಾರದ ಮಾಲೆಯನ್ನು ಉಡುಗೊರೆಯಾಗಿ ನೀಡಿದ್ದರು.
ಅನಿರೀಕ್ಷತ ಉಡುಗೊರೆಯಿಂದ ಶಿಕ್ಷಕಿಯ ಕಣ್ಣುಗಳು ತೇವಗೊಂಡಿತ್ತು.

Related Posts

Leave a Reply

Your email address will not be published.