ಚುನಾವಣಾ ಕಣದಿಂದ ದೂರ ಸರಿದ ರಮಾನಾಥ್ ರೈ

ಚುನಾವಣಾ ರಾಜಕೀಯದಿಂದ ನಿವೃತ್ತಗೊಳ್ಳುತ್ತಿದ್ದೇನೆ. ಪಕ್ಷದ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ರಮಾನಾಥ ರೈ ಘೋಷಿಸಿದ್ದಾರೆ.
ಅವರು ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವಿಗೆ ಶ್ರಮಿಸಿದ ರಾಜ್ಯದ ಜನತೆಗೆ ಹಾಗೂ ನನ್ನ ಕ್ಷೇತ್ರದಲ್ಲಿ ನನಗೆ ಮತ ಚಲಾಯಿಸಿದ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಿದ್ದರೂ ರಾಜ್ಯದಲ್ಲಿ ಪಕ್ಷ ಜಯ ಗಳಿಸಿರುವುದರಿಂದ ಪಕ್ಷದ ಬೆಂಬಲಿಗರು ಎದೆಗುಂದದೆ ಕಾರ್ಯನಿರ್ವಹಿಬೇಕು. ಮುಂಬರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ರಮಾನಾಥ ರೈ ಕರೆ ನೀಡಿದರು. ಬಂಟ್ವಾಳದಲ್ಲಿ ಕಳೆದ ಬಾರಿಗಿಂತ ಈ ಬಾರಿ ನನಗೆ ಹೆಚ್ಚು ಮತಗಳು ಬಿದ್ದಿವೆ, ಆದರೆ ಸೋಲಾಗಿದೆ. ಈ ಬಗ್ಗೆ ಅವಲೋಕನ ನಡೆಸುತ್ತೇವೆ ಎಂದು ರೈ ನುಡಿದರು.
ನಾನೆಂದೂ ಪಕ್ಷದ ಮಾತನ್ನು ಮೀರಿಲ್ಲ. ಇನ್ನು ಮುಂದೆಯೂ ಪಕ್ಷ ನೀಡುವ ಹೊಣೆಗಾರಿಕೆಯನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದವರು ತಿಳಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಆಯ್ಕೆ ಸಮಸ್ಯೆ ಇಲ್ಲ. ಶಾಸಕರು, ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಪಕ್ಷ ನೀಡಿದ ಗ್ಯಾರಂಟಿ ಯೋಜನೆಗಳನ್ನು ಶೀಘ್ರ ವಾಗಿ ಕಾಂಗ್ರೆಸ್ ಸರಕಾರ ಜಾರಿ ಮಾಡಲಿದೆ ಎಂದು ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಪದಾಧಿಕಾರಿಗಳಾದ ರಕ್ಷಿತ್ ಶಿವರಾಂ, ಶಶಿಧರ ಹೆಗ್ಡೆ, ಲ್ಯಾನ್ಸಿಲಾಟ್ ಪಿಂಟೋ, ಶಾಹುಲ್ ಹಮೀದ್, ಅಶ್ರಫ್ ಕೆ., ನವೀನ್ ಡಿಸೋಜ, ಸುದರ್ಶನ್, ಉಮೇಶ್ ದಂಡಕೇರಿ, ಸಲೀಂ, ಪೃಥ್ವಿರಾಜ್, ಚಿತ್ತರಂಜನ್ ಶೆಟ್ಟಿ, ಮುಸ್ತಫ, ಹೊನ್ನಯ್ಯ ಮೊದಲಾದವರು ಉಪಸ್ಥಿತರಿದ್ದರು.