ಮಾನವೀಯತೆ ಮಾನವನ ಮೊದಲ ಧರ್ಮವಾಗಬೇಕು – ಯಡಪಡಿತ್ತಾಯ

ಉಜಿರೆ: ಏನನ್ನಾದರು ಸಾಧಿಸುವ ಮೊದಲು ನಾವು ಮಾನವರಾಗಬೇಕು, ಮಾನವೀಯತೆಯೇ ಮನುಷ್ಯನ ಮೊದಲ ಧರ್ಮವಾಗಬೇಕು. ಸೋತವರ ಜೊತೆಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವ ಗುಣವನ್ನು ಹೊಂದಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ | ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಪದವಿ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.

ಶ್ರೀ. ಧ. ಮಂ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಎಸ್.ಡಿ.ಎಂ. ನೆನಪಿನಂಗಳ ಎಂಬ ಹೆಸರಿನಡಿಯಲ್ಲಿ ನಡೆದ, ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಜೊತೆಗೆ ನಿಲ್ಲುವಂತಹ ವ್ಯಕ್ತಿತ್ವವನ್ನ ನಾವು ಬೆಳೆಸಿಕೊಳ್ಳಬೇಕು, ಇತರರಿಗೆ ಸಹಾಯ ಹಸ್ತ ಚಾಚುವುದನ್ನು ರೂಢಿಸಿಕೊಳ್ಳಬೇಕೆಂದು ಕರೆನೀಡಿದರು.
ಮಾತು ಮುಂದುವರಿಸಿದ ಇವರು, ಕಲಿಕೆ ಜೀವನ ಪರ್ಯಂತ ಹರಿಯುವ ನೀರು, ಪತ್ರಿದಿನವು ಹೊಸದನ್ನು ಕಲಿಯುವ ಅವಕಾಶ ನಮ್ಮೆದುರಿರುತ್ತದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಧಿಕಾರಯುತ ಸ್ಥಾನದಲ್ಲಿ ನಾವಿದ್ದಾಗ ಅವಶ್ಯವಿರುವವರೊಂದಿಗೆ ನಿಲ್ಲುವುದನ್ನು ಕಲಿಯಬೇಕೆಂಬ ವಿದ್ಯೆಯನ್ನು ಎಸ್.ಡಿ.ಎಂ ಸಂಸ್ಥೆ ಹಾಗೂ ಧರ್ಮಸ್ಥಳ ಕಲಿಸಿಕೊಟ್ಟಿದ್ದು ನನ್ನ ಪಾಲಿಗೆ ಶಸ್ತ್ರ ಮತ್ತು ಶಾಸ್ತ್ರವಾಗಿದೆ.

ಆ ದಿನಗಳಲ್ಲಿ ಮನೆಯಲ್ಲಿದ್ದ ಬಡತನವು ನನ್ನ ಪಾಲಿನ ಆಸ್ತಿಯಾಗಿತ್ತು, ಕನ್ನಡ ಭಾಷೆಯಲ್ಲಿನ ವಿದ್ಯಾಭ್ಯಾಸ ಶಕ್ತಿಯಾಗಿತ್ತು, ಗ್ರಾಮೀಣ ಪ್ರದೇಶದ ವಾತಾವರಣ, ಹೈಸ್ಕೂಲ್, ಪದವಿ ಪೂರ್ವ, ಪದವಿಯಲ್ಲಿ ಕಲಿತ ಜೀವನ ಮೌಲ್ಯಗಳು ಹಾಗೂ ಸಂಸ್ಕಾರಗಳು ನನ್ನ ವ್ಯಕ್ತಿತ್ವ ನಿರ್ಮಾಣದ ಅಡಿಪಾಯಗಳು ಎಂದು ನೆನೆದರು.

sdm ujire

ಜೀವನದಲ್ಲಿ ಅಳವಡಿಸಿಕೊಂಡ ಹೊಸ ಹೊಸ ಬದಲಾವಣೆಯು ಒಳ್ಳೆಯದರೆಡೆಗೆ ಸಾಗಬೇಕು. ನಾವೆಂದು ಸಮಸ್ಯೆಯ ಭಾಗವಾಗದೆ ಪರಿಹಾರದ ಮಾರ್ಗವಾಗಬೇಕು. ದ್ವೇಷಭಾವನೆಯನ್ನು ಬೆಳೆಸಿಕೊಳ್ಳದೇ ಎಲ್ಲರನ್ನು ಬಂಧುಗಳಂತೆ ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಜಯಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಂದಿನ ದಾರಿ ಸುಗಮವಾಗಿರಲಿ ಹಿಂದೆ ನಡೆದುಬಂದ ದಾರಿಯನ್ನು ಮೆಲಕು ಹಾಕಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವು ಪ್ರಾರಂಭವಾಗಿದೆ ಎಂದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿತಾಂಬರ ಹೆರಾಜೆ ಪದವಿ ಕಾಲೇಜಿನ ಅರ್ಹ ವಿದ್ಯಾರ್ಥಿಯಾದ ದ್ವೀತೀಯ ಬಿ.ಎ. ವರುಣ್‍ಗೆ ಪ್ರೋತ್ಸಾಹ ಧನವನ್ನ ನೀಡಿ ಹಾರೈಸಿದರು.
ಕಾರ್ಯಕ್ರಮವನ್ನು ಪಿತಾಂಬರ ಹೆರಾಜೆ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ವಕೀಲರಾದ ವಿ. ಕೆ ಧನಂಜಯ್ ವಂದಿಸಿ, ಡಾ. ಬಿ.ಎ ಕುಮಾರ್ ಹೆಗ್ಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ಹಾಜರಿದ್ದರು.

Related Posts

Leave a Reply

Your email address will not be published.