ಪುತ್ತೂರು: ಕೆದಂಬಾಡಿಯಲ್ಲಿ ಆರಂಭಿಸಲುದ್ದೇಶಿಸಿದ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮತ್ತೆ ಗ್ರಹಣ..!!

ಪುತ್ತೂರು ಕಡಬ ಮತ್ತು ಸುಳ್ಯ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳ ನಿರ್ವಹಣೆ ಸಮಸ್ಯೆಗೊಂದು ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳೋಡಿ ಎಂಬಲ್ಲಿ ಆರಂಭಿಸಲುದ್ದೇಶಿಸಿರುವ 5 ಟನ್ ಸಾಮರ್ಥ್ಯದ ಸಮಗ್ರ ಒಣ ತ್ಯಾಜ್ಯ ನಿರ್ವಹಣಾ ಘಟಕ (ಎಂಆರ್‍ಎಫ್) ಬಹುತೇಕ ಕಾಮಗಾರಿ 6 ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದರೂ, ಕೊನೆ ಹಂತದ ವ್ಯವಸ್ಥೆಗೆ ಗ್ರಹಣ ಆವರಿಸಿದೆ.

ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ವಿಲೇವಾರಿ ಮಾಡುವುದು ಕಷ್ಟದಾಯಕ ಕೆಲಸ.ಈ ಹಿನ್ನಲೆಯಲ್ಲಿ ಪುತ್ತೂರು,ಕಡಬ ಮತ್ತು ಸುಳ್ಯ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದಲ್ಲಿ ಒಣ ಕಸವನ್ನು ಮರುಬಳಕೆಗೆ ಯೋಗ್ಯವಾದ ರೀತಿಯಲ್ಲಿ ಸನ್ನದ್ಧಗೊಳಿಸುವ ಎಂಆರ್‍ಎಫ್ ಘಟಕವನ್ನು ಬೊಳೋಡಿಯಲ್ಲಿ ನಿರ್ಮಾಣ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿತ್ತು.

ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿ 5 ಟನ್ ಸಾಮರ್ಥ್ಯದ ಎಂಆರ್‍ಎಫ್ ಘಟಕ ನಿರ್ಮಾಣ ಕಾರ್ಯವನ್ನು 2022ರ ನವೆಂಬರ್ 18ರಂದು ಕಾಮಗಾರಿಗೆ ಶಿಲಾನ್ಯಾಸ ನಡೆಸುವ ಮೂಲಕ ಆರಂಭಿಸಲಾಗಿತ್ತು. ಕಾಮಗಾರಿ ಆರಂಭಿಸಿದ 6 ತಿಂಗಳೊಳಗಾಗಿಯೇ ಶೇ 80ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದವು.ಆದರೆ ಆ ಬಳಿಕ ರಾಜ್ಯದಲ್ಲಿ ನಡೆದ ಸರ್ಕಾರದ ಬದಲಾವಣೆ ಮತ್ತು ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣದಿಂದಾಗಿ ಮುಂದುವರಿದ ಕಾಮಗಾರಿಗೆ ಬ್ರೇಕ್ ಬಿದ್ದಿದೆ.

ರೂ. 1.95 ಕೋಟಿ ವೆಚ್ಚದ ಎಂಆರ್‍ಎಫ್ ಘಟಕ ನಿರ್ಮಾಣಕ್ಕಾಗಿ ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿ 1 ಎಕರೆ ಜಾಗವನ್ನು ಕೆದಂಬಾಡಿ ಗ್ರಾಮ ಪಂಚಾಯಿತಿ ನೀಡಿದೆ. ಜಿಲ್ಲಾ ಪಂಚಾಯಿತಿ ಹಾಗೂ ಪುತ್ತೂರು,ಕಡಬ ಮತ್ತು ಸುಳ್ಯ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಜನಸಂಖ್ಯಾ ಆಧಾರದಲ್ಲಿ 15ನೇ ಹಣಕಾಸು ಯೋಜನೆಯಡಿ ನೈರ್ಮಲ್ಯಕ್ಕೆ ಸಂಬಂಧಿಸಿ ಅನುದಾನ ಕ್ರೂಢೀಕರಿಸಿಕೊಂಡು ಎಂಆರ್‍ಎಫ್ ಘಟಕದ ಅನುಷ್ಠಾನ ಕಾರ್ಯ ಆರಂಭಿಸಲಾಗಿತ್ತು. ಶಿಲಾನ್ಯಾಸ ನಡೆದ ಬಳಿಕ ಶೀಘ್ರಗತಿಯಲ್ಲಿ ಘಟಕ ನಿರ್ಮಾಣದ ಬಹುತೇಕ ಕಾರ್ಯವೂ ನಡೆದಿದೆ. ವಿಧಾನಸಭಾ ಚುನಾವಣೆಗೆ ಮುನ್ನವೇ ಘಟಕ ಉದ್ಘಾಟನೆ ಮಾಡುವ ಉದ್ದೇಶವಿಟ್ಟುಕೊಂಡು ಕೆಲಸ ನಿರ್ವಹಿಸಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.

ಬೋಳೋಡಿಯಲ್ಲಿ ನಿರ್ಮಾಣವಾಗುತ್ತಿರುವ ಎಂಆರ್‍ಎಫ್ ಘಟಕ ದ.ಕ.ಜಿಲ್ಲೆಯ ಗ್ರಾಮಾಂತರ ಪ್ರದೇಶದ ಮೊದಲನೆ ಘಟಕವಾಗಿದ್ದು, ಪುತ್ತೂರು,ಸುಳ್ಯ,ಕಡಬ ವ್ಯಾಪ್ತಿಗೆ ಸಂಬಂಧಿಸಿ ಈ ಘಟಕ ಮಂಜೂರಾಗಿದೆ.ಸ್ವಚ್ಚತೆಗೆ ಸಂಬಂಧಿಸಿದ ಎಂಆರ್‍ಎಫ್ ಕಾಮಗಾರಿ ಆಧ್ಯತೆಯ ಮೇಲೆ ನಡೆಯಬೇಕಿತ್ತು. ಈ ಘಟಕ ಆರಂಭಗೊಂಡಿದ್ದರೆ ಪುತ್ತೂರು,ಸುಳ್ಯ ಮತ್ತು ಕಡಬ ತಾಲೂಕಿನ ತ್ಯಾಜ್ಯ ಸಮಸ್ಯೆಗೆ ಮುಕ್ತಿ ಸಿಗುತ್ತಿತ್ತು. ತನಿಖೆಯ ನೆಪದಲ್ಲಿ ಆಧ್ಯತೆಯ ಕಾಮಗಾರಿಗೆ ತಡೆಯಾಗಿರುವುದು, ಕಾಮಗಾರಿ ಮತ್ತು ಯಂತ್ರೋಪಕರಣದಗಳ ಖರೀದಿಗೆ ಸಂಬಂಧಿಸಿದ ಪ್ರಕ್ರಿಯೆಗಳು ವಿಳಂಬವಾಗುತ್ತಿರುವುದು ಬೇಸರದ ಸಂಗತಿ ಎನ್ನುವುದು ಕೆದಂಬಾಡಿ ಮತ್ತು ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಮಂದಿ ಬಿಜೆಪಿ ಬೆಂಬಲಿತ ಸದಸ್ಯರ ಅಸಮಾಧಾನ.

ಬೋಳೋಡಿಯಲ್ಲಿ ಎಂಆರ್‍ಎಫ್ ಘಟಕ ನಿರ್ಮಾಣ ಕಾಮಗಾರಿ ಆರಂಭಿಸಿ ಒಂದು ವರ್ಷವಾಯಿತು. ಆರಂಭದಲ್ಲಿ ವೇಗ ಗತಿಯಲ್ಲಿ ಕಾಮಗಾರಿ ನಡೆದು 6 ತಿಂಗಳಲ್ಲೇ ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು.ಆದರೆ ಸರ್ಕಾರ ಬದಲಾವಣೆಯ ಸಂದರ್ಭದಲ್ಲಿ ಕೆಲವೊಂದು ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಕಾಮಗಾರಿ ಬಾಕಿಯಾಗಿದೆ. ಯಂತ್ರೋಪಕರಣಗಳ ಖರೀದಿ ಟೆಂಟರ್ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಉದ್ಘಾಟನೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ-

ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ನಮ್ಮ ಪಂಚಾಯಿತಿಯ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದೆ. ಯಾವಾಗ ಎಂಆರ್‍ಎಫ್ ಘಟಕ ಕಾರ್ಯಾರಂಭವಾಗುತ್ತದೆ ಎಂದು ಕಾಯುತಿದ್ದೇವೆ. ನಮ್ಮ ಪಂಚಾಯಿತಿಯಿಂದಲೂ ಈ ಘಟಕಕ್ಕೆ ಅನುದಾನ ನೀಡಲಾಗಿದೆ. ಪುತ್ತೂರು,ಕಡಬ ಮತ್ತು ಸುಳ್ಯ ಭಾಗದ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರವಾಗಬೇಕಾದರೆ ಘಟಕ ಕಾರ್ಯಾರಂಭವಾಗಬೇಕು.ಸಂಬಂಧಪಟ್ಟವರು ಕೂಡಲೇ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎನ್ನುವುದು ನಮ್ಮ ಆಗ್ರಹ.

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು.ಆದರೆ ಸರ್ಕಾರ ಬದಲಾವಣೆಯಾದ ಹಿನ್ನಲೆಯಲ್ಲಿ ಕೆಲವೊಂದು ಆಡಳಿತಾತ್ಮಕ ಸಮಸ್ಯೆಯಿಂದಾಗಿ ಮುಂದುವರಿದ ಕಾಮಗಾರಿ ಸ್ಥಗಿತಗೊಂಡಿದೆ.ಮಾತ್ರವಲ್ಲದೆ ಕಸ ನಿರ್ವಹಣೆಯ ಯಂತ್ರೋಪಕರಣಗಳ ಖರೀದಿ ವ್ಯವಸ್ಥೆಯೂ ಬಾಕಿಯಾಗಿ ಉಳಿದಿದೆ.ಕಾಮಗಾರಿ ನಡೆಸಿರುವ ಹಣ ಪಾವತಿಯಾಗದ ಹಿನ್ನಲೆಯಲ್ಲಿ ಗುತ್ತಿಗೆದಾರರು ಘಟಕಕ್ಕೆ ಬೀಗ ಹಾಕಿ ತೆರಳಿದ್ದು, ಇದರಿಂದಾಗಿ ಉದ್ಘಾಟನೆಗಾಗಿ ಕಾಯುತ್ತಿದ್ದ ಎಂಆರ್‍ಎಫ್ ಘಟಕ ಗ್ರಹಣಾವಸ್ಥೆಯಲ್ಲಿ ಉಳಿದು ಕೊಂಡಿದೆ.

Related Posts

Leave a Reply

Your email address will not be published.