ಐತಿಹಾಸಿಕ ಚನ್ನಕೇಶವ ದೇವಾಲಯದಲ್ಲಿ ಭದ್ರತಾ ನಿರ್ಲಕ್ಷ
ಚನ್ನಕೇಶವ ದೇವಾಲಯದಲ್ಲಿ ಭದ್ರತಾ ನಿರ್ಲಕ್ಷ-ಕಾರ್ಯನಿರ್ವಹಿಸದ ಮೆಟಲ್ ಡಿಟೆಕ್ಟರ್ ಮತ್ತು ಸಿಸಿಟಿವಿ ಕ್ಯಾಮೆರಾಗಳು ಬೇಲೂರು, ನವೆಂಬರ್ 11 — ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಭದ್ರತಾ ಕ್ರಮಗಳ ನಿರ್ಲಕ್ಷ್ಯ ಆತಂಕ ಹುಟ್ಟಿಸಿದೆ. ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಅಳವಡಿಸಿರುವ ಮೆಟಲ್ ಡಿಟೆಕ್ಟರ್ ಕಳೆದ ಒಂದೂವರೆ ತಿಂಗಳಿನಿಂದ ಕಾರ್ಯನಿರ್ವಹಿಸದೇ ನಿಂತಿದ್ದು, ಪ್ರಮುಖ ಸಿಸಿಟಿವಿ ಕ್ಯಾಮೆರಾವೂ ಸಹ ವರ್ಕ್ ಆಗದೆ ಇರುವುದಾಗಿ ಮೂಲಗಳು ತಿಳಿಸಿವೆ.
ದೇಶ, ವಿದೇಶ ಹಾಗೂ ವಿವಿಧ ರಾಜ್ಯಗಳಿಂದ ಪ್ರತಿದಿನ ನೂರಾರು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುವ ಬೇಲೂರಿನ ಈ ದೇವಾಲಯದಲ್ಲಿ ಕೇವಲ ಮೂರು ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಲ್ಪಟ್ಟಿದ್ದು, ಅವುಗಳಲ್ಲಿ ಮುಖ್ಯದ್ವಾರದ ಕ್ಯಾಮೆರಾ ಕಾರ್ಯನಿರ್ವಹಿಸದ ಸ್ಥಿತಿಯಲ್ಲಿದೆ ಎಂಬುದು ವಿಪರ್ಯಾಸವಾಗಿದೆ.
ದೆಹಲಿಯ ಕೆಂಪುಕೋಟೆ ಬಳಿ ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣದ ಹಿನ್ನಲೆಯಲ್ಲಿ ದೇಶದ ಪ್ರಮುಖ ಐತಿಹಾಸಿಕ ಹಾಗೂ ಪುರಾತನ ದೇವಾಲಯಗಳ ಭದ್ರತೆ ಹೆಚ್ಚಿಸಬೇಕಾದ ಸಮಯದಲ್ಲೇ ಬೇಲೂರು ದೇವಾಲಯದಲ್ಲಿ ಇಂತಹ ನಿರ್ಲಕ್ಷ್ಯ ಉಂಟಾಗಿರುವುದು ಗಂಭೀರ ವಿಚಾರವಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯ ದ್ವಾರದ ಒಳಭಾಗದಲ್ಲಿ ಅಳವಡಿಸಲಾದ ಮೆಟಲ್ ಡಿಟೆಕ್ಟರ್ ಸುಮಾರು ಒಂದೂವರೆ ತಿಂಗಳಿನಿಂದ ಕೆಟ್ಟು ನಿಂತಿದ್ದು, ಪ್ರವಾಸಿಗರು ಯಾವುದೇ ತಪಾಸಣೆಯಿಲ್ಲದೆ ದೇವಾಲಯಕ್ಕೆ ಪ್ರವೇಶಿಸುತ್ತಿರುವುದು ಭದ್ರತಾ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ದೇವಾಲಯದಲ್ಲಿ ದಿನದಂದು ನಡೆಯುವ ಭಾರಿ ಭಕ್ತರ ಸಂಚಾರದ ನಡುವೆ ಸಿಸಿಟಿವಿ ಕ್ಯಾಮೆರಾ ಹಾಗೂ ಮೆಟಲ್ ಡಿಟೆಕ್ಟರ್ ಕಾರ್ಯನಿರ್ವಹಿಸದಿರುವುದು ಭದ್ರತಾ ಇಲಾಖೆಯ ನಿರ್ಲಕ್ಷ್ಯವನ್ನು ಬಯಲಿಗೆಳೆಯುತ್ತದೆ.
ಭಕ್ತರು ಹಾಗೂ ಸ್ಥಳೀಯರು ಶೀಘ್ರ ಕ್ರಮ ಕೈಗೊಂಡು ಮೆಟಲ್ ಡಿಟೆಕ್ಟರ್ ಮತ್ತು ಸಿಸಿಟಿವಿ ವ್ಯವಸ್ಥೆಯನ್ನು ಪುನಃ ಸಕ್ರಿಯಗೊಳಿಸಿ ದೇವಾಲಯದಲ್ಲಿ ಭದ್ರತಾ ವ್ಯವಸ್ಥೆ ಬಲಪಡಿಸುವಂತೆ ಆಡಳಿತವನ್ನು ಆಗ್ರಹಿಸಿದ್ದಾರೆ.


















