ಅಯ್ಯಪ್ಪ‌… ಮಹಿಳೆಯೆಂದರೆ ನಿನಗ್ಯಾಕೆ ಮೈಲಿಗೆಯಪ್ಪ…??

ಮಂಗಳೂರು: ಶಬರಿಮಲೆ ಯಾತ್ರೆಯ ಗೌಜಿ. ಎಲ್ಲೆಲ್ಲಿಂದಲೋ ಶಬರಿಮಾಲೆಗೆ ಆಗಮಿಸುತ್ತಿರುವ ಅಪಾರ ಸಂಖ್ಯೆಯ ಭಕ್ತರು. ಊರೂರಲ್ಲಿ, ಮಂದಿರ, ಗುಡಿ, ಬೀರಿಗಳಲ್ಲಿ ಭಜನೆ, ದೀಪೋತ್ಸವ, ಇರುಮುಡಿ ಕಟ್ಟುವಿಕೆ ಇತ್ಯಾದಿ ಇತ್ಯಾದಿ. ಅಂತೂ ಎಲ್ಲೆಲ್ಲೂ ಅಯ್ಯಪ್ಪ ವೃತದಾರಿಗಳು…ಇವೆಲ್ಲವೂ ಕಣ್ಣಿಗೆ ಈಗ ನಿತ್ಯ ಕಾಣುವ ದೃಶ್ಯಗಳಾದರೆ ಅಯ್ಯಪ್ಪ ಮಾಲಾಧಾರಣೆಯ ಹಿಂದೆ ಮಹಿಳೆಯರನ್ನು ಮೈಲಿಗೆಯ ನೆಪದಲ್ಲಿ ತೆರೆಮರೆಗೆ ಸರಿಸುವ ವ್ಯವಸ್ಥೆಯೊಂದು ಅಂದಿನಿಂದ ಇಂದಿನವರೆಗೂ ಸದ್ದಿಲ್ಲದೆ ನಡೆಯುತ್ತಿದೆ.

ನಮ್ಮ ತಾಯಿ, ಹೆಂಡತಿ, ಸಹೋದರಿಯರು, ಮಕ್ಕಳು…ಹೀಗೆ ಹೆಂಗಳೆಯರೆಲ್ಲರೂ “ಮುಟ್ಟು” ಆಗುತ್ತಾರೆ ಎಂಬ ಕಾರಣಕ್ಕಾಗಿ ಅಯ್ಯಪ್ಪ ಮಾಲಾಧಾರಿಗಳಲ್ಲಿ ಮಾತಾಡುವಂತಿಲ್ಲ, ನೋಡುವಂತಿಲ್ಲ, ಅಡಿಗೆ ಮಾಡಿ ಹಾಕುವಂತಿಲ್ಲ, ಕೆಲವರಿಗೆ ಮಹಿಳೆಯರ ನೆರಳೂ ಬೀಳಬಾರದು, ಮಹಿಳೆಯರಿದ್ದರೆ ವೃತಧಾರಿಗಳು ಒಳಹೋಗಬಾರದು..ಇತ್ಯಾದಿ ಇತ್ಯಾದಿ ಅಲಿಖಿತ ನಿಯಮಗಳು, ಅರ್ಥಾತ್ ಅಸಂಬದ್ಧ ನಿಯಮಗಳು, ಅಮಾನವೀಯ ಆಚರಣೆಗಳು. ಈ ಎಲ್ಲಾ ಕಟ್ಟುಪಾಡುಗಳು ಯಾವ ಗ್ರಂಥದಲ್ಲಿದೆಯೋ, ಯಾವ ತಲೆಗೆಟ್ಟ ಗುರುಸ್ವಾಮಿ ಇವೆಲ್ಲವನ್ನೂ ಶಿಷ್ಯರಿಗೆ ಭೋಧಿಸಿದನೋ ಗೊತ್ತಿಲ್ಲ. ಅಂತೂ ಅಂದಿನಿಂದ ಇಂದಿನವರೆಗೂ ಸಣ್ಣಪುಟ್ಟ ಮಾರ್ಪಾಡು ಹೊರತುಪಡಿಸಿದರೆ ಈ ಎಲ್ಲಾ ಕೆಟ್ಟ ಕಟ್ಟುಪಾಡುಗಳನ್ನು ಸಂಪೂರ್ಣವಾಗಿ ನಿಷೇಧಿಸುವಲ್ಲಿ ಯಾರೊಬ್ಬರೂ ಪ್ರಶ್ನಿಸಿಲ್ಲ, ಆ ಪ್ರಯತ್ನವನ್ನೂ ಮಾಡದಿರುವುದು ದುರಂತವೇ ಸರಿ.

ಅಂತೂ ಒಂಬತ್ತು ತಿಂಗಳು ಹೊತ್ತು ಈ ಭೂಮಿಯ ಬೆಳಕು ತೋರಿದ ಹೆತ್ತಮ್ಮ, ತನ್ನ ಜೀವನದುದ್ದಕ್ಕೂ ಕಷ್ಟ ಸುಖಗಳಲ್ಲಿ ಸಹಭಾಗಿಯಾಗುವ ಹೆಂಡತಿ, ತನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಸಹೋದರಿಯರು, ತನ್ನಿಂದಲೇ ಜನ್ಮ ಪಡೆದ ಮಕ್ಕಳು…ಹೀಗೆ ಸಂಬಂಧಿಕರ್ಯಾರು ಅಲ್ಲ, ಬದಲಾಗಿ ಮಹಿಳೆಯರೇ ಎನ್ನೋಣ. ಅವರು ಸೂತಕವೇ? ಅಶುಭವೇ? ಮೈಲಿಗೆಯೇ? ನಮ್ಮ 48 ದಿನಗಳ ವೃತ. ನಮ್ಮ ಮನೆಯ ತಾಯಂದಿರು ನಾವು ಸುಖವಾಗಿರಲೆಂದು ಅದೆಷ್ಟು ವೃತ ಮಾಡಿರಬಹುದು? ಕ್ಷೇಮವಾಗಿ ಯಾತ್ರೆ ಮುಗಿಸಿ ಬರಲೆಂದು ಅದೆಷ್ಟು ಹರಕೆ ಹೊತ್ತಿರಬಹುದು?

ಭಕ್ತಿಯಿಂದಲೂ, ಭಯದಿಂದಲೂ ಕೆಲವು ದುರ್ಗುಣಗಳನ್ನು ಕೈಬಿಡಬೇಕು, ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕೆಂಬ ಸದುದ್ಧೇಶದಿಂದ ಮಾಲಾಧಾರಣೆ ಮಾಡುವ ನಾವು ಮಡಿ ಮೈಲಿಗೆಯ ನೆಪದಲ್ಲಿ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಯಿಂದ, ಕುಟುಂಬದಿಂದ ಹೊರಗಿಡುವುದೇಕೆ? ಹಾಗೆಂದು ಹಿಂದಿನಿಂದಲೂ ಹಾಗೇ ಇತ್ತು. ಎನ್ನುವ ವಾದವೇನೋ ಸರಿ. ಈಗ ವಿದ್ಯಾವಂತ, ಬುದ್ದಿವಂತರೆನಿಸಿಕೊಂಡವರು ಮಡಿ ಮೈಲಿಗೆಯ ಮೂಢನಂಬಿಕೆಯನ್ನು ಇನ್ನೂ ಕಟ್ಟಿಕೊಂಡರೆ ಮಾತೃಸಮಾಜಕ್ಕೆ ಮಾಡುವ ಘೋರ ಅನ್ಯಾಯವಲ್ಲವೇ???.

ಅಷ್ಟಕ್ಕೂ ಅಯ್ಯಪ್ಪ ಸ್ವಾಮಿಗೆ ಮಹಿಳೆಯರೆಂದರೆ ಅಲರ್ಜಿ, ಅಪವಿತ್ರ, ಅಸಹ್ಯ ಎಂಬ ಕಟ್ಟುಕತೆಯನ್ನು ಕಟ್ಟಿದವರ್ಯಾರು? ಮನೆಯಲ್ಲಿ ಸ್ತ್ರೀಯರಿದ್ದಾರೆ ಎನ್ನುವ ಕಾರಣಕ್ಕಾಗಿ ಊಟ, ತಿಂಡಿ ಮಾಡದ ಅಯ್ಯಪ್ಪ ವೃತದಾರಿಗಳು ಹೋಟೆಲ್ಲಿನಲ್ಲೋ, ದೇವಸ್ಥಾನದಲ್ಲೋ ಮಾಡುತ್ತಾರಲ್ಲ? ಅಲ್ಲಿ ಪುರುಷರೇ ಮಾಡಿದ್ದಾರೆನ್ನುವುದು ಯಾವ ಗ್ಯಾರಂಟಿ? ಮಹಿಳೆಯರೇ ಮಾಡಿದ್ದರೂ ಅವರು “ಮುಟ್ಟು ಆಗಿಲ್ಲ, ಎನ್ನುವುದು ಯಾವ ಗ್ಯಾರಂಟಿ?

ಅಷ್ಟಕ್ಕೂ ಈ ಮುಟ್ಟು, ಹುಟ್ಟು, ಸಾವುಗಳನ್ನು ಸೂತಕ, ಮೈಲಿಗೆ, ಅಪವಿತ್ರ, ಅಶುದ್ಧ ಎಂದು ಬೊಟ್ಟು ಮಾಡಿದ, ಆ ನೆಪದಲ್ಲಿ ನಮ್ಮದೇ ಮನೆ ಮಾತೆಯರನ್ನು ಅದೆಷ್ಟೋ ಶುಭ ಕಾರ್ಯಗಳಿಂದ ದೂರವಿರಿಸಿದ ಹಿಂದಿರುವ ಮೂಲ ಕಾರಣಗಳೇನು? ಅದರ ಹಿಂದಿರುವ ವೈಜ್ಞಾನಿಕ, ವೈಚಾರಿಕ ಅಂಶಗಳೇನು? ಇದನ್ನು ಈಗಲೂ ಅರ್ಥಮಾಡಿಕೊಳ್ಳಲು ನಾವು ಅಸಮರ್ಥರಾದರೆ ನಾವು ವಿದ್ಯಾವಂತರಾಗಿ, ವಿಚಾರವಂತರಾಗಿ, ಬುದ್ದಿವಂತರಾಗಿ ಏನು ಪ್ರಯೋಜನ??. ಪುರುಷರಾದ ನಮ್ಮಲ್ಲಿ ಕಿಂಚಿತ್ತಾದರೂ ಮಾತೃ ಹೃದಯ ಬೆಳೆದಿಲ್ಲವೆಂದರೆ ಇನ್ನೆಷ್ಟು ಕಾಲ ನಮ್ಮ ತಾಯಂದಿರು ನಮ್ಮನ್ನು ಕ್ಷಮಿಸಬೇಕು?

ನಿಜ…ಮುಟ್ಟಿನಿಂದಲೇ ನಮ್ಮೆಲ್ಲರ ಹುಟ್ಟು. ನನ್ನ ಹೆತ್ತಬ್ಬೆ ಮುಟ್ಟಾದ್ದರಿಂದ ನಾನು ಈ ಭೂಮಿಯಲ್ಲಿದ್ದೇನೆ. ನನ್ನ ಹೆಂಡತಿ ಮುಟ್ಟಾದ್ದರಿಂದ ನನ್ನ ಮಕ್ಕಳು ಈ ಭೂಮಿಯಲ್ಲಿದ್ದಾರೆ. ಇದೊಂದು ಪ್ರಕೃತಿ ಸಹಜ ಕ್ರಿಯೆ. ಇದು ಅಶುಭವಾದರೆ, ಅಪವಿತ್ರವಾದರೆ ನಾವೆಲ್ಲರೂ ಪವಿತ್ರರಾಗುವುದು ಹೇಗೆ??

ನಿಜಕ್ಕೂ ನಾವೆಲ್ಲರೂ ಮಾಲಾಧಾರಣೆ ಮಾಡುವ ಉದ್ಧೇಶವೇನು? ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮತ್ಸರ, ಮೋಹ, ಅಹಂಕಾರ ಮೊದಲಾದಿ ದುರ್ಗುಣಗಳಿಂದ ಮುಕ್ತರಾಗಬೇಕು. ಜೀವನವಿಡೀ ಮಾನವ ಸಹಜ ಗುಣಗಳಾದ ಪ್ರೀತಿ, ತಾಳ್ಮೆ, ಸಹನೆ, ಕ್ಷಮೆ, ಕರ್ತವ್ಯ ಪರತೆ, ನಿಸ್ವಾರ್ಥತೆ, ಪರೋಪಕಾರತೆ, ಪ್ರಾಮಾಣಿಕತೆ ಮೊದಲಾದವುಗಳನ್ನು ರೂಢಿಸಿಕೊಳ್ಳುತ್ತಾ ಮಾನವರಾಗಬೇಕು. ನಮ್ಮೊಳಗೂ ದೇವರನ್ನು ಕಾಣುತ್ತಾ ಇತರಲ್ಲಿಯೂ ದೇವರನ್ನು ಕಾಣಬೇಕು…ಎಲ್ಲರಲ್ಲೂ ಅಯ್ಯಪ್ಪನೇ ಕಾಣಬೇಕು. ಹಾಗೆಂದು ಎಲ್ಲರಲ್ಲೂ ದೇವರನ್ನೇ ಕಾಣುವ ನಾವು ದೇವಿ ಸ್ವರೂಪಿ ಮಾತೆಯರನ್ನು “ರಾಕ್ಷಸಿಯರಂತೆ” ಕಂಡರೆ ಅಯ್ಯಪ್ಪನಿಗೆ ತೃಪ್ತಿಯಾಗಬಹುದೇ? ನಮ್ಮ ವೃತಾಚರಣೆ ಸಾರ್ಥಕವಾಗಬಹುದೇ?

ನಮ್ಮಿಂದಾಗುವ ದೌರ್ಜನ್ಯ, ಶೋಷಣೆಯಿಂದ ನಮ್ಮ ಮನೆಯ ಹೆಂಗಳೆಯರು ಎಷ್ಟು ನೊಂದುಕೊಂಡಾರು? ಆದರೆ ಅವೆಲ್ಲವನ್ನೂ ಮರೆತು ನಾವು ಯಾತ್ರೆ ಹೊರಡುವಾಗ ಹೃದಯ ತುಂಬಿ ನಮಗೆ ಆಶೀರ್ವದಿಸುತ್ತಾರಲ್ಲ? ನಮಗಾಗಿ ನಾಲ್ಕು ಹನಿ ಕಣ್ಣೀರು ಸುರಿಸುತ್ತಾರಲ್ಲ? ಆ ಮಾತೃ ಹೃದಯಗಳಿಗೆ ಸಾವಿರ ಸಾವಿರ ಶರಣು.

✍🏿ಗೋಪಾಲ ಅಂಚನ್

Related Posts

Leave a Reply

Your email address will not be published.