ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಸಿವಿಲ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ರಾಷ್ಟೀಯ ಮಟ್ಟದ ತಾಂತ್ರಿಕ ಸಮ್ಮೇಳನ”

ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ “ಸಿವಿಲ್ ಇಂಜಿನಿಯರಿಂಗ್ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಇತ್ತೀಚಿನ ಪ್ರವೃತ್ತಿಗಳು ಮತ್ತು ಪ್ರಗತಿಗಳು” ಹಾಗೂ “ಮೆಕ್ಯಾನಿಕಲ್ ಇಂಜಿನಿಯರಿಂಗ್, ರೊಬೊಟಿಕ್ಸ್ ಮತ್ತು ಆಟೊಮೇಷನ್ ತಂತ್ರಜ್ಞಾನದಲ್ಲಿ ಇತ್ತೀಚಿನ ಪ್ರಗತಿಗಳು” ವಿಷಯಗಳ ಕುರಿತು ಆಯೋಜಿಸಿದ್ದ ಎರಡು ದಿನಗಳ ರಾಷ್ಟೀಯ ಮಟ್ಟದ ತಾಂತ್ರಿಕ ಸಮ್ಮೇಳನ ಕಾರ್ಯಕ್ರಮವು ಮಂಗಳವಾರ ಬೆಳಿಗ್ಗೆ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. 

ಎಂ.ಐ.ಟಿ. ಮಣಿಪಾಲದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಸತ್ಯಶಂಕರ ಶರ್ಮಾ ಮತ್ತು  ಎಂ.ಐ.ಟಿ. ಮಣಿಪಾಲದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಪುರುಷೋತ್ತಮ್ ಜಿ. ಸರ್ವದೆ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹಉಪಕುಲಪತಿಗಳಾದ ಡಾ. ಜಿಲ್ಲೆಲ್ಲಾ ಸತ್ಯ ಸಾಯಿ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 

ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಡಾ. ಶ್ರೀಪ್ರಕಾಶ್ ಬಿ., ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಡಾ. ರಾಮಕೃಷ್ಣ ಹೆಗಡೆ, ಕಾರ್ಯಕ್ರಮದ ಮತ್ತೋರ್ವ ಸಂಚಾಲಕರಾದ ಡಾ. ಎಸ್. ವೆಂಕಟ್ ಪ್ರಸಾತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ ಡಾ. ಸತ್ಯಶಂಕರ ಶರ್ಮಾ ರವರು ಮಾತನಾಡಿ, ಜ್ಞಾನಾರ್ಜನೆ ಮತ್ತು ಜ್ಞಾನದ ಹಂಚಿಕೆಯಿಂದ ಸಮುದಾಯ ನಿರ್ಮಾಣ ಕೆಲಸ ಸಾಧ್ಯ ಎಂದು ಹೇಳಿದರು. ವಿಶ್ವವಿದ್ಯಾಲಯದ ಗುಣಮಟ್ಟವು ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಸಂಶೋಧನಾ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ, ಆದ್ದರಿಂದ ನ್ಯಾಕ್ ಮತ್ತು ಎನ್.ಬಿ.ಎ. ಮಾನ್ಯತೆ ಪ್ರಕ್ರಿಯೆಯಲ್ಲಿ ಸುಮಾರು ಶೇಕಡಾ 65% ರಷ್ಟು ಅಂಕಗಳನ್ನು ಸಂಶೋಧನಾ ಚಟುವಟಿಕೆಗಳ ಆಧಾರದ ಮೇಲೆ ನೀಡಲಾಗುತ್ತದೆ. ಪ್ರತಿಯೋರ್ವ ವಿದ್ಯಾರ್ಥಿಯ ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ಅಭಿವೃದ್ಧಿಗೆ ಸಂಶೋಧನೆಯು ಬಹಳ ಮುಖ್ಯವಾದ ಅಂಶವಾಗಿದೆ, ಆದ್ದರಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿಷಯದಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸುವುದರ ಮೂಲಕ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಆ ಮೂಲಕ, ಯುವಕರು ತಮ್ಮ ಶಕ್ತಿ ಯುಕ್ತಿ ಮತ್ತು ಸಾಮರ್ಥ್ಯಗಳಿಂದ ಅದ್ಭುತ ಕೆಲಸಗಳನ್ನು ಮಾಡಿ, ಸಮಾಜವನ್ನು ಸಮರ್ಥವಾಗಿ ಬದಲಾಯಿಸಲು ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಡಾ. ಪುರುಷೋತ್ತಮ್ ಜಿ. ಸರ್ವದೆ ಯವರು ಮಾತನಾಡಿ, ಕೋವಿಡ್ 19 ರ ಕಾರಣ ಸುಮಾರು ಎರಡೂವರೆ ವರ್ಷಗಳ ನಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದು ಬಹಳ ಸಂತಸದ ವಿಷಯ ಎಂದು ಹೇಳಿದರು. ಸುಸ್ಥಿರ ಅಭಿವೃದ್ಧಿಯ ಕುರಿತು ಆಯೋಜಿಸಿರುವ ಈ ರಾಷ್ಟ್ರೀಯ ತಾಂತ್ರಿಕ ಸಮ್ಮೇಳನವು ಬಹಳ ಅರ್ಥಪೂರ್ಣವಾಗಿದೆ. ಜಾಗತಿಕ ಮಟ್ಟದಲ್ಲಿ, ಇಂಗಾಲದ ಹೆಜ್ಜೆಗುರುತಿನಲ್ಲಿ, ಅಮೇರಿಕ ಮತ್ತು ಚೀನಾ ದೇಶಗಳ ನಂತರ ಭಾರತವು ಮೂರನೇ ಸ್ಥಾನದಲ್ಲಿದೆ, ಆದ್ದರಿಂದ ನಾವು ಸುಸ್ಥಿರ ನಿರ್ಮಾಣ ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಾಗಿದೆ. ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೀಕರಣ ಮತ್ತು ನಗರೀಕರಣದಿಂದಾಗಿ ಮಾಲಿನ್ಯವು ಹೆಚ್ಚುತ್ತಿದೆ. ಸಂಶೋಧನೆಯ ಮೂಲಕ ನಾವು ಪರಿಸರ ಮಾಲಿನ್ಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ನವೀನ ಮಾದರಿಯ ಸುಸ್ಥಿರ ನಿರ್ಮಾಣವು ಪ್ರಸ್ತುತ ಸಮಯದ ಅಗತ್ಯವಾಗಿದೆ ಎಂದು ಹೇಳಿದರು.

ಕಾಲೇಜಿನ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ ರವರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸಿವಿಲ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಹಲವಾರು ಸಂಶೋಧನೆಗಳು ಪ್ರಗತಿಯನ್ನು ಸಾಧಿಸಿವೆ ಎಂದು ಹೇಳಿದರು. ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಮೂಲಕ ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಲು ಸಾಧ್ಯವಿದೆ. ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಶೋಧನಾ ಪ್ರವೃತ್ತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದೇವೆ. ಶ್ರೀನಿವಾಸ್ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿದ್ದೇವೆ ಹಾಗೂ ನವೀನ ಹಾಗೂ ಅನುಭವದ ಕಲಿಕಾ ವಿಧಾನವನ್ನುಅಭ್ಯಾಸ ಮಾಡಲಾಗುತ್ತಿದೆ ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹಉಪಕುಲಪತಿಗಳಾದ ಡಾ. ಜಿಲ್ಲೆಲ್ಲಾ ಸತ್ಯ ಸಾಯಿ ಕುಮಾರ್ ರವರು ಮಾತನಾಡಿ, ಪ್ರತಿಯೊಬ್ಬರ ಜೀವನ ಮತ್ತು ಸಮಾಜದಲ್ಲಿ ತಂತ್ರಜ್ಞಾನವು ಅತೀ ಮುಖ್ಯ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು. ಇಂಜಿನಿಯರಿಂಗ್  ವಿದ್ಯಾರ್ಥಿಗಳು ಜೀವನದುದ್ದಕ್ಕೂ ಕಲಿಕೆಯನ್ನು ಅಳವಡಿಸಿಕೊಳ್ಳಬೇಕು, ಆ ಮೂಲಕ ಉತ್ತಮ ವೃತ್ತಿಪರರಾಗಿ ಅಥವಾ ಯಶಸ್ವಿ ಉದ್ಯಮಿಗಳಾಗಿ ಸಮಾಜಕ್ಕೆ ಮಾದರಿಯಾಗಬೇಕು. ಜಗತ್ತು ಮತ್ತು ತಂತ್ರಜ್ಞಾವು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಭವಿಷ್ಯದ ಆರ್ಥಿಕತೆಯು ಸುಸ್ಥಿರ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥದ ಡಾ. ಶ್ರೀಪ್ರಕಾಶ್ ಬಿ. ರವರು ಸ್ವಾಗತ ಭಾಷಣವನ್ನು ಮಾಡಿದರು. ಡಾ. ರಾಮಕೃಷ್ಣ ಹೆಗಡೆ ಮತ್ತು ಡಾ. ಎಸ್. ವೆಂಕಟ್ ಪ್ರಸಾತ್ ರವರು ಕ್ರಮವಾಗಿ ಸಿವಿಲ್ ಇಂಜಿನಿಯರಿಂಗ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಗಳು ಆಯೋಜಿಸುತ್ತಿರುವ ರಾಷ್ಟೀಯ ಮಟ್ಟದ ತಾಂತ್ರಿಕ ಸಮ್ಮೇಳನದ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಸಹಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಮುಖ್ಯ ಅತಿಥಿಗಳಾದ ಡಾ. ಸತ್ಯಶಂಕರ ಶರ್ಮಾ ಮತ್ತು ಡಾ. ಪುರುಷೋತ್ತಮ್ ಜಿ. ಸರ್ವದೆ ಯವರನ್ನು ಸಭೆಗೆ ಪರಿಚಯಿಸಿದರು. ಪ್ರೊ. ಪ್ರಸನ್ನ ಪಿ. ರಾವ್ ರವರು ವಂದನಾರ್ಪಣೆ ಸಲ್ಲಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ತಾನ್ಯಾ ಗಿರೀಶ್, ಕುಮಾರಿ ವಿಜೇತ ಮತ್ತು ರೋಷನ್ ನಾಯರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ವಿದ್ಯಾರ್ಥಿ ಶ್ರೀ ದಿನಕರ್ ರವರು ಸುಶ್ರಾವ್ಯ ಹಾಡಿನ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಿದರು.
ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಆಗಮಿಸಿದ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ಆಯೋಜಿಸಿದ್ದ ರಾಷ್ಟೀಯ ಮಟ್ಟದ ತಾಂತ್ರಿಕ ವಿಚಾರ ಸಮ್ಮೇಳನದಲ್ಲಿ ಸಿವಿಲ್ ಇಂಜಿನಿಯರಿಂಗ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯಗಳಿಗೆ ಸಂಬಂಧಿಸಿದ ಸುಮಾರು ನೂರ ಐದು ತಾಂತ್ರಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು.

Related Posts

Leave a Reply

Your email address will not be published.