ಸೋನಮ್ ವಾಂಗ್‍ಚುಕ್‍ರಿಗೆ ಕೆಂದ್ರದ ಬೆದರಿಕೆ

ಚುನಾವಣಾ ಆಶ್ವಾಸನೆಗಳನ್ನು ಮುರಿಯುವುದು ಅಪರಾಧವಲ್ಲ ಎನ್ನುವ ಸ್ಥಿತಿಯನ್ನು ಬಿಜೆಪಿ ತಂದಿಕ್ಕಿದೆ ಎಂದು ಲಡಾಖ್‍ನ ಪರಿಸರ ಹೋರಾಟಗಾರ ಸೋನಮ್ ವಾಂಗ್‍ಚುಕ್ ಹೇಳಿದ್ದಾರೆ. ಅದಕ್ಕಿಂತ ಮುಖ್ಯವಾದುದು ಏನೆಂದರೆ ಪ್ರಧಾನಿ ಮೋದಿಯವರ ನೆರವೇರದ ಚುನಾಚಣಾ ಆಶ್ವಾಸನೆಗಳನ್ನು ಜನರು ಆನಂದಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಾಗರಿಕರಿಗೆ ಉಚಿತ ಟ್ರಾಮ್ ಸಾರಿಗೆ ಸೇವೆ ಇದೆ. ಅದನ್ನು ಬಯ್ಯುವವರಾಗಲಿ, ದುರುಪಯೋಗ ಮಾಡುವವರಾಗಲಿ ಇಲ್ಲ.
ಕರ್ನಾಟಕದ ಬಸ್ಸುಗಳÀಲ್ಲಿ ಮಹಿಳೆಯರಿಗೆ ಉಚಿತ ಸವಾರಿ ಇದೆ. ಅದನ್ನು ಸಾಕಷ್ಟು ಮಂದಿ ಉಪಯೋಗಿಸುತ್ತಾರೆ. ಐದು ಶೇಕಡಾದಷ್ಟು ಮಂದಿ ದುರುಪಯೋಗಿಸುವುದೂ ಇದೆ. ಅವರು ಕಾರಣವಿಲ್ಲದೆಯೇ ಸವಾರಿ ಮಾಡುವವರು. ಬಸ್ಸು ಉಚಿತ ಸವಾರಿ ಮಾಡುವವರಲ್ಲಿ ಮೌನಿಗರೇ ಹೆಚ್ಚು. ಸ್ವಲ್ಪ ಜನ ಸಿದ್ದರಾಮಯ್ಯನವರನ್ನು ಹೊಗಳುತ್ತಾರೆ. ಆದರೆ ಈ ದುರುಪಯೋಗಿ ಮಹಿಳೆಯರ ವರಸೆಯೇ ಬೇರೆ. ಏನಿದು ಉಚಿತ ಬಸ್ ಟಿಕೆಟ್, ಮೋದಿಯವರು ನೋಡಿ ಎಷ್ಟು ಚೆನ್ನಾಗಿ ವಿಶೇಷ ವಿಮಾನದಲ್ಲಿ ಮತ್ತು ಹೆಲಿಕಾಪ್ಟರ್‍ನಲ್ಲಿ ಬರುತ್ತಾರೆ ಎಂದೆಲ್ಲ ಇವರ ಮಾತು. ಇವರಿಗೆ ಉಚಿತ ಹೆಲಿಕಾಪ್ಟರ್ ಸೇವೆ ಯಾರು ಒದಗಿಸಬೇಕು?
ಲಡಾಖ್ ಪ್ರದೇಶವನ್ನು ಜಮ್ಮು ಕಾಶ್ಮೀರದಿಂದ ಬೇರ್ಪಡಿಸಲಾಗಿದೆ. ಅದನ್ನು ಕೇಂದ್ರಾಡಳಿತ ಪ್ರದೇಶವೆಂದು ಹೇಳಲಾಗಿದೆ. ಆದರೆ ಅದು ಅಧಿಕೃತಗೊಂಡಿಲ್ಲ. ಲಡಾಖ್‍ನ ಬೋತಿ ಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದಕ್ಕೆ ಸೇರಿಸುವುದು. ಚೀನಾದಲ್ಲಿರುವ ಮಾನಸ ಸರೋವರಕ್ಕೆ ಲಡಾಖ್‍ನಿಂದ ಕೈಲಾಸ ಮಾನಸ ಸರೋವರ ಮಾರ್ಗ ತೆರಯುವುದು ಇತ್ಯಾದಿ ಬೇಡಿಕೆಗಳನ್ನು ಲಡಾಖ್ ಜನರು ಮುಂದಿಟ್ಟಿದ್ದರು. ಲಡಾಖ್ ಬೇರ್ಪಡಿಸಿದಾಗ ನಿಮ್ಮೆಲ್ಲ ಬೇಡಿಕೆಗಳನ್ನು ಪೂರೈಸುವುದಾಗಿ ಒಕ್ಕೂಟ ಸರಕಾರದ ಗೃಹ ಸಚಿವಾಲಯ ಹೇಳಿತ್ತು. ಆದರೆ ಯಾವುದೂ ಆಗಿಲ್ಲ. ಆಗುವ ಸೂಚನೆಯೂ ಇಲ್ಲ. ಸೋನಮ್ ವಾಂಗ್‍ಚುಕ್ ಪ್ರಕಾರ ಬಿಜೆಪಿಯ ಚುನಾವಣಾ ಆಶ್ವಾಸನೆಗಳನ್ನು ದೂರದಿಂದಲೆ ಆನಂದಿಸಬಹುದು.
ಹೇಳುವುದು ಒಂದು, ಮಾಡುವುದು ಒಂದು, ಹೇಳಿಯೂ ಮಾಡದಿರುವುದು ಇವರದಿನ್ನೊಂದು ಹೇ ತಿರುಪತಿ ವೆಂಕಟಾಚಲಪತಿ ಎಂದು ಕನ್ನಡದಲ್ಲಿ ರಾಜಕುಮಾರ್ ಅವರು ಒಂದು ಯುಗಳ ಹಾಡನ್ನು ಹಾಡಿದ್ದಾರೆ. ತಿರುಪತಿ ಗೋವಿಂದ ಎಂದರೆ ಕನ್ನಡದವರು ಅದು ಗೋ ಎಂದ ನಾಮ ಎಂಬ ಅರ್ಥದಲ್ಲಿ ಕೂಡ ಬಳಸುತ್ತಾರೆ. ಹಾಗಾಗಿ ಬಿಜೆಪಿ ಸರಕಾರದ ಆಶ್ವಾಸನೆಗಳನ್ನು ಗೋವಿಂದ ಎಂದು ತಿಳಿಯಬೇಕೆ? ಈಗಂತೂ ಕರ್ನಾಟಕದಲ್ಲಿ ಚೊಂಬು ಕೊಟ್ಟರು ಕೈಗೆ ಚೊಂಬು ಕೊಟ್ಟರು ಎಂಬ ಬೀದಿ ಗೀತೆ ಹೆಚ್ಚು ಜನಪ್ರಿಯವಾಗಿದೆ
ಚೊಂಬಲ್ಲ ಅಕ್ಷಯ ಪಾತ್ರೆ ಎಂದಿದ್ದಾರೆ ಮಾಜೀ ಪ್ರಧಾನಿ ದೇವೇಗೌಡರು. ಮತ್ತೆ ಆ ಅಕ್ಷಯ ಪಾತ್ರೆಯಿಂದ ಕರ್ನಾಟಕಕ್ಕೆ ಯಾಕೆ ಬರ ಪರಿಹಾರ ಬರಲಿಲ್ಲ ಎನ್ನುವುದು ಕಾಂಗ್ರೆಸ್ಸಿಗರ ಪ್ರಶ್ನೆ. ಅದು ಬಂದರೆ ಬರಬರ ಬರುತ್ತದೆ ಕಾಯುತ್ತಿರಿ ಎನ್ನುವುದು ಕಿಡಿಗೇಡಿಗಳ ಮಾತು. ವಾಂಗ್‍ಚುಕ್ ಹೇಳುತ್ತಾರೆ 2020ರ ಅಕ್ಟೋಬರ್ 13ರಂದು ಬಿಜೆಪಿಯು ಲಡಾಖ್ ಲೇಹ್ ಚುನಾವಣೆಗೆ ಒಂದು ಪ್ರಣಾಳಿಕೆ ಬಿಡುಗಡೆ ಮಾಡಿತು. ನಾನಾ ಆಶ್ವಾಸನೆಗಳ ಜೊತೆಗೆ 6ನೇ ಶೆಡ್ಯೂಲಿನಡಿ ಲಡಾಖ್ ಜನರನ್ನು ಕಾಪಾಡಲಾಗುವುದು ಎಂದು ಅದರಲ್ಲಿ ಹೇಳಲಾಗಿತ್ತು. ಆದರೆ ಯಾವುದನ್ನೂ ಕೇಂದ್ರದ ಬಿಜೆಪಿ ಸರಕಾರ ಪಾಲಿಸಿಲ್ಲ.
ಎರಡು ಚುನಾವಣೆಗಳಲ್ಲಿ ಹೇಳಿದ್ದಾಗಲಿಲ್ಲ. ಈಗ ಲೋಕ ಸಭಾ ಚುನಾವಣೆ ಕಾಲದಲ್ಲಿ ಕೇಂದ್ರ ಸರಕಾರಕ್ಕೆ ನಮಗೆ ನೀಡಿದ ವಾಗ್ದಾನಗಳು ನೆನಪಾಗಲಿ, ಅವೆಲ್ಲ ನೆರವೇರುವ ಆಶಯ ನಮ್ಮದು ಎನ್ನುತ್ತಾರೆ ವಾಂಗ್‍ಚುಕ್. ಒಂದೇ ಸಲ ಚುಕ್ತಾ ಮಾಡಿದರೆ ಜನ ಬೇಗ ಮರೆಯುತ್ತಾರೆ. ಸಿದ್ದರಾಮಯ್ಯನವರ ಸರಕಾರ ಐದು ಆಶ್ವಾಸನೆ ನೀಡಿ ಐದನ್ನೂ ನೆರವೇರಿಸಿತು, ಜನರು ಅದನ್ನು ಆರಾಮವಾಗಿ ಮರೆಯುತ್ತಾರೆ. ಆದರೆ ಮೋದಿಯವರ ಸರಕಾರ ಕೆಲಸ ಕೊಡಲಿಲ್ಲ, ಸ್ವಿಸ್ ಹಣ ತರಲಿಲ್ಲ ಎನ್ನುವುದನ್ನೆಲ್ಲ ಜನರು ಈಗಲೂ ನೆನಪಿಟ್ಟಿದ್ದಾರೆ.
ಮೋದಿ ಭಕ್ತರಂತೂ ನಮ್ಮ ಪ್ರಧಾನಿಯವರಿಂದಾಗಿ ಸ್ವಿಸ್ ಬ್ಯಾಂಕುಗಳಲ್ಲಿ ನಮ್ಮ ಹಣ ಭದ್ರವಾಗಿದೆ. ಇನ್ನೂ ಎರಡ್ಮೂರು ಬಾರಿ ಮೋದಿಯವರನ್ನು ಪ್ರಧಾನಿಯಾಗಿ ಆರಿಸಿ. ಆಗ ಸ್ವಿಸ್ ಬ್ಯಾಂಕುಗಳಲ್ಲಿ ಬಡ್ಡಿ ಸಮೇತ ಹೆಚ್ಚಾಗಿರುವ ಎಲ್ಲ ಹಣವನ್ನೂ ತಂದು ಎಲ್ಲರ ಎಕೌಂಟಿಗೆ ಒಂದೊಂದು ಕೋಟಿ ಹಾಕುತ್ತಾರೆ ಎನ್ನುತ್ತಾರೆ. ಒಬ್ಬ ಕಿಲಾಡಿ ಮುದುಕ ಅಷ್ಟು ಹೊತ್ತಿಗೆ ನಾನು ಸಾಯುತ್ತೇನೆ ಎಂದ. ತೊಂದರೆ ಇಲ್ಲ ನಿನ್ನ ಮೊಮ್ಮಗಳ ಎಕೌಂಟಿಗೆ ಬರುತ್ತದೆ. ಮುದುಕರು ಅತಿ ಆಸೆ ಮಾಡಬಾರದು. ಅದು ಏನಿದ್ದರೂ ರಾಜಕಾರಣಿಗಳು ಪೂರೈಸಿಕೊಳ್ಳಬೇಕಾದ ಪ್ರಾಯದ ವಿಷಯ ಎಂದು ಬಿಟ್ಟ ಮೋಭಕ್ತ ಕಿಲಾಡಿ.
ಬಾಯಿ ಆಶ್ವಾಸನೆಗೂ ಪ್ರಣಾಳಿಕೆಗೂ ವ್ಯತ್ಯಾಸವಿದೆ. ಪ್ರಣಾಳಿಕೆಗಳು ಮುದ್ರಿತ ಕಿರು ಹೊತ್ತಗೆಗಳು. ಆದರೂ ಎಲ್ಲವನ್ನೂ ಮರೆತು ಈ ಜನ ಆರಾಮವಾಗಿ ತಿರುಗುತ್ತಾರೆ. ಲಡಾಖ್‍ನಲ್ಲಿ ಈಗ ಐದು ವರುಷಗಳಿಂದ ಸ್ವರ್ಗ ನಿರ್ಮಾಣವಾಗಿದೆ ಎಂದು ಬೋಂಗು ಬಿಡುತ್ತಾರೆ. ಲೇಹ್ ನುಬ್ರಾ ಕಾರ್ಗಿಲ್, ಲೇಹ್ ನೋಬಾ ಹಾಗೂ ಡುರ್ಬುಕ್ ಟ್ರಾನ್ಸ್‍ಮಿಶನ್ ಲೈನ್, ಶಾಯೊಕ್, ಜನ್ಸ್ಕರ್, ತೆರಿಸ್ಕಾ ನೀರ್ಮಿಂಚುರಿ ಹೈಡಲ್ ಯೋಜನೆ, 50 ಮೆಗಾವಾಟ್ ಸೂರ್ಯಶಕ್ತಿ ಕೇಂದ್ರ ಎಲ್ಲವೂ ಆಶ್ವಾಸನೆಯಾಗಿಯೇ ಉಳಿದಿದೆ. ಪ್ರವಾಸಿ ಕೇಂದ್ರವಾಗಿ ಲಡಾಕ್ ಬೆಳೆಸುವುದು. ಅದಕ್ಕೆ ರಸ್ತೆ ಸಂಪರ್ಕ ಮತ್ತು ಹೆಚ್ಚಿನ ಹೋಟೆಲು ಸವಲತ್ತು, ಮೂಲಭೂತ ಸವಲತ್ತುಗಳ ಒಂದು ಪಟ್ಟಿ ಇದೆ. ಕೇಂದ್ರ ಒಪ್ಪಿದ ಪಟ್ಟಿ ಹಾಗೇ ಉಳಿದಿದೆ ಎನ್ನುತ್ತಾರೆ ಸೋನಮ್ ವಾಂಗ್‍ಚುಕ್.
ಹಾಗಾದರೆ ಮೋದಿಯವರ ಸರಕಾರವು ಕರ್ನಾಟಕಕ್ಕೆ ಮಾತ್ರವಲ್ಲ ಲಡಾಕ್ ಮೊದಲಾದ ಕಡೆಯೂ ಚೊಂಬು ಕೊಟ್ಟಿದೆ ಎಂದು ಕೆಲವು ಕನ್ನಡಿಗರು ಸಮಾಧಾನ ಮಾಡಿಕೊಂಡರು. ಈಗ ಸೋನಮ್ ವಾಂಗ್‍ಚುಕ್‍ರಿಗೆ ಒಂದು ಅನಾಮಧೇಯ ಕಾಗದ ಬಂದಿದೆ. ಕೇಜ್ರೀವಾಲ್ ಪ್ರಕರಣದಲ್ಲಿ ಆದಂತೆಯೇ ನಿಮ್ಮ ಸಂಸ್ಥೆಯಲ್ಲೂ ಅಕ್ರಮ ಹಣ ವರ್ಗಾವಣೆ ಆಗಿರುವುದು ತಿಳಿದು ಬಂದಿದೆ; ಹುಶಾರ್ ಎಂಬ ಮಾದರಿಯ ಪತ್ರ. ಆಶ್ವಾಸನೆ ಮರೆತು ಬಿಡಿ, ಲಡಾಖ್ ನಮಗೆ ಕೊಡಿ, ನಿಮ್ಮ ಪಾಡಿಗೆ ಇರಿ, ಇಲ್ಲದಿದ್ದರೆ ಜೈಲು ಎಂಬ ಮಾದರಿಯ ಪತ್ರ ವಾಂಗ್‍ಚುಕ್‍ರಿಗೆ ಲೋಕಸಭಾ ಚುನಾವಣಾ ಕಾಲದಲ್ಲಿ ಯಾರಿಂದ ಬಂದಿರಬಹುದು ಎಂದು ತಿಳಿಯುವ ಬುದ್ಧಿ ಭಾರತೀಯರಲ್ಲಿ ಇದ್ದೇ ಇರುತ್ತದೆ ಬಿಡಿ.
ಕೇಂದ್ರದ ತನಿಖಾ ಸಂಸ್ಥೆಗಳು ಸರಿಯಾದ ತನಿಖೆ ನಡೆಸಿದರೆ ನನಗೂ ಸಮಾಧಾನ ಎಂದು ವಾಂಗ್‍ಚುಕ್ ಹೇಳಿದ್ದಾರೆ. ಲಡಾಖ್‍ನಲ್ಲಿ ಆದಾಯ ತೆರಿಗೆ ವಿನಾಯತಿ ಎಂದರೂ ನನ್ನ ಸಂಸ್ಥೆಯು ಆದಾಯ ತೆರಿಗೆ ಕಟ್ಟುತ್ತಿದೆ ಎಂದೂ ವಾಂಗ್‍ಚುಕ್ ಹೇಳಿದ್ದಾರೆ. ಅಲ್ಲದೆ ಕೇಂದ್ರೀಯ ತನಿಖಾ ಸಂಸ್ಥೆಯ ಒಬ್ಬರು ಬಂದು ಅದಿದು ಮಾತಾಡಿದ ಬಳಿಕ, ನಿಮ್ಮ ಆರೋಗ್ಯ ಮತ್ತು ಜೀವದ ಬಗೆಗೆ ಹುಶಾರಾಗಿರಿ ಎಂದು ಎಚ್ಚರಿಸಿ ಹೋಗಿದ್ದಾರೆ. ನನ್ನ ಬಲಿದಾನದಿಂದಲಾದರೂ ಲಡಾಖ್‍ಗೆ ಒಳಿತಾಗಲಿ ಎಂದಿದ್ದಾರೆ ಸೋನಮ್. ಒಟ್ಟಾರೆ ವಿರುದ್ಧ ಧ್ವನಿ ಎಲ್ಲಿಂದಾದರೂ ಬಂದರೆ ಅವರನ್ನು ಬೆದರಿಸುವ ಆಶ್ವಾಸನೆಯೇ ಈಗ ಒಕ್ಕೂಟ ಸರಕಾರದ ಇಂದಿನ ಬೀಜ ಮಂತ್ರ ಆಗಿರಬಹುದೇ ಎಂಬ ಅನುಮಾನ ಲಡಾಖ್‍ನ ಹಲವರದು.