ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮೀಗಳ ಶೋಭಯಾತ್ರೆ : 11ನೇ ದಿನ ಅತಿರುದ್ರ ಮಹಾಯಾಗದ ಮುನ್ನೋಟ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ‘ಅತಿರುದ್ರ ಮಹಾಯಾಗ’ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹತ್ತು ದಿನಗಳನ್ನು ಪೂರೈಸಿದೆ. ಈಗಾಗಲೇ ಹಲವು ಗಣ್ಯಾತಿ ಗಣ್ಯರು ಅತಿರುದ್ರ ಮಹಾಯಾಗಕ್ಕೆ ಆಗಮಿಸಿದ್ದಾರೆ ಮತ್ತು ಯಾಗದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅತಿರುದ್ರ ಮಹಾಯಾಗದಲ್ಲಿ ಭಾಗಿಯಾಗಲೆಂದೇ ದೂರದೂರಿನಿಂದ ಭಕ್ತಾದಿಗಳು ಆಗಮಿಸುತ್ತಿರುವುದು, ಯಾಗದ ಕಳೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದರೊಂದಿಗೆ ಭಕ್ತಿಯ ಸ್ವರೂಪವಾಗಿ ನಾನಾ ರೀತಿಯ ಸೇವೆಗಳನ್ನು ಭಕ್ತರು ಶ್ರೀ ರುದ್ರನಿಗೆ ನೀಡುತ್ತಿರುವುದು ವಿಶೇಷವಾಗಿದೆ. ಪರಶಿವನಿಗೆ ಭಕ್ತಿ ಮತ್ತು ಪ್ರೀತಿಯಿಂದ ಏನನ್ನೂ ನೀಡಬಹುದು ಎಂಬುದಕ್ಕೆ ಶಿವಪಾಡಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಸಾಕ್ಷಿಯಾಗಿದೆ.


ಅತಿರುದ್ರ ಮಹಾಯಾಗದ ಹನ್ನೊಂದನೇ ದಿನವಾದ ಮಾರ್ಚ್ 04, 2023 ರ ಶನಿವಾರದಂದು, ಅತಿರುದ್ರ ಯಾಗಮಂಟಪದಲ್ಲಿ ಬೆಳಗ್ಗೆ 07:30 ರಿಂದ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ, ಸಾಯಂಕಾಲ 6 ರಿಂದ ಶ್ರೀ ರುದ್ರಕ್ರಮಪಾಠ, ಮಹಾಪೂಜೆ, ಅಷ್ಟಾವಧಾನ ಸೇವೆ ನಡೆಯಲಿವೆ. ಸಾಯಂಕಾಲ 5:15 ರಿಂದ ಶ್ರೀ ಕ್ಷೇತ್ರ ಶಿವಪಾಡಿಗೆ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಆಗಮನ ಮತ್ತು ಸಭಾಮಂಟಪದಲ್ಲಿ ಸಾಯಂಕಾಲ 05:30 ರಿಂದ ಧೂಳಿಪಾದ ಪೂಜೆ, ಸಭಾಕಾರ್ಯಕ್ರಮ, ಜಗದ್ಗುರುಗಳ ಅನುಗ್ರಹ ಭಾಷಣ, ಶ್ರೀ ರಾಮಾನಂದ ಸ್ಮೃತಿ ಮಂಟಪದಲ್ಲಿ ಜಗದ್ಗುರುಗಳಿಂದ ಶ್ರೀ ಚಂದ್ರಮೌಳೀಶ್ವರಸ್ವಾಮಿಗೆ ಪೂಜೆ ನೆರವೇರಲಿವೆ.
ಇದರೊಂದಿಗೆ ಸಂಜೆ 3:30 ರಿಂದ, ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮೀಗಳವರ ಬೃಹತ್ ಶೋಭಾಯಾತ್ರೆ, ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶೀರ್ವಚನ ಮತ್ತು ಸಂಜೆ 7:00 ರಿಂದ ಪ್ರಸಿದ್ಧ ಟಿವಿ ರಿಯಾಲಿಟಿ ಶೋ ‘ಜೀ ಸರಿಗಮಪ’ ಖ್ಯಾತಿಯ ಮಕ್ಕಳಿಂದ ಸಂಗೀತ ವೈವಿಧ್ಯ ಕಾರ್ಯಕ್ರಮ ಜರುಗಲಿದೆ.

ವಿಶೇಷ ಹಾಗೂ ಬಲು ಅಪರೂಪವೆಂಬಂತೆ ಸಂಜೆ 7 ಗಂಟೆಯಿಂದ, ವಾರಣಾಸಿಯಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ವಾರಣಾಸಿಯ ಪಂಡಿತರಿಂದ “ಶಿವಾರತಿ” ನಡೆಯಲಿದೆ. ಈ ವಿಶೇಷ ಆರಾಧನೆ ಮಾರ್ಚ್ 02 ರಂದು ಪ್ರಾರಂಭವಾಗಿದ್ದು, ಮಾರ್ಚ್ 4 ರವರೆಗೆ ಸಂಜೆ 7 ಗಂಟೆಗೆ ನಡೆಯಲಿದೆ. ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಫೆಬ್ರವರಿ 22, 2023 ರಂದು ಪ್ರಾರಂಭಗೊಂಡ ಅತಿರುದ್ರ ಮಹಾಯಾಗ ಮಾರ್ಚ್ 05, 2023 ರವರೆಗೆ ನಡೆಯಲಿದೆ. 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ ನಿರಂತರವಾಗಿ ಯಾಗ ನಡೆಯಲಿವೆ.