ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ : 10ನೇ ದಿನ ಅತಿರುದ್ರ ಮಹಾಯಾಗದ ಸಭಾ ಕಾರ್ಯಕ್ರಮ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾರ್ಚ್ 03, 2023 ರ ಶುಕ್ರವಾರದಂದು ನಡೆದ ಅತಿರುದ್ರ ಮಹಾಯಾಗದ ಹತ್ತನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೈರಂಗಳ ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲ್ಲಿ ಋತ್ವಿಜರಿಂದ ನಡೆದ, ಪಾರಾಯಣ, ಯಾಗ-ಯಜ್ಞಗಳು, ಅನ್ನಧಾನ ಉತ್ತಮವಾಗಿ ನಡೆದಿದೆ. ಇವೆಲ್ಲವೂ ಭಗವಂತನ ಪ್ರೇರಣೆಯಿಂದ ನಡೆದಂತಹ ಪವಾಡ. ಈ ಜಾಗದಲ್ಲಿ ಸಕಾರಾತ್ಮಕ ಶಕ್ತಿ ತುಂಬಿಕೊಂಡಿದೆ. ಇಂತಹ ಯಾಗ ನಮ್ಮ ಜಿಲ್ಲೆಯಲ್ಲಿ ಪ್ರಥಮ ಬಾರಿ ನಡೆಯುತ್ತಿರುವುದು. ಈ ಯಾಗವು ಶಿವಪಾಡಿಯಲ್ಲಿ ನಡೆದರೂ, ಇದರ ಫಲ ಇಡೀ ಉಡುಪಿಯ ಪರಿಸರಕ್ಕೆ ಸಿಗಲಿದೆ. ಶ್ರೀ ಶೃಂಗೇರಿ ಪೀಠದ ಗುರುಗಳು ಬಂದು ಯಾಗದ ಪೂರ್ಣಾಹುತಿಯನ್ನು ಮಾಡಿ, ಆಶೀರ್ವಚನ ನೀಡುತ್ತಾರೆ ಎಂಬುದೇ ದೊಡ್ಡ ಸೌಭಾಗ್ಯ. ಯಾಗದಲ್ಲಿ ಭಾಗಿಯಾದವರಿಗೆ ದೇವರು ಹರಸಲಿ ಎಂದು ಶುಭ ನುಡಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಸುವರ್ಣ ನ್ಯೂಸ್ ಚಾನೆಲ್ ನ ಸುದ್ದಿ ವಿಭಾಗದ ಮುಖ್ಯಸ್ಥರಾದ ಅಜಿತ್ ಹನುಮಕ್ಕನವರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ದಯಾನಂದ ರೆಡ್ಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರಿಕಾ ಫೆಡರೇಶನ್ ನ ಅಧ್ಯಕ್ಷರಾದ ಯಶಪಾಲ್ ಸುವರ್ಣ, ಮಣಿಪಾಲದ ಉದ್ಯಮಿ ಬಾಲಕೃಷ್ಣ ಶೆಣೈ, ಸಾಲಿಗ್ರಾಮ ಮೇಳದ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಮಹೇಶ್ ಠಾಕೂರ್, ಉಡುಪಿ ನಗರಸಭಾ ಸದಸ್ಯರು, ಯಾಗ ಸಮಿತಿಯ ಪದಾಧಿಕಾರಿಗಳು, ದೇವಸ್ಥಾನದ ಮೊಕ್ತೇಸರರು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.
ನಂತರ ಅಜಿತ್ ಹನುಮಕ್ಕನವರಿಂದ ದಿಕ್ಸೂಚಿ ಭಾಷಣ ಮತ್ತು ಪ್ರಸಿದ್ಧ ಶಾಸ್ತ್ರೀಯ ಗಾಯಕರಾದ ಶ್ರೀ ಜಯತೀರ್ಥ ಮೇವುಂಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಇಂದು ಕೂಡ ವಾರಣಾಸಿ ಪಂಡಿತರ ತಂಡದಿಂದ ಶಿವಾರತಿ ನಡೆದಿದ್ದು, ಹತ್ತನೇ ದಿನದ ಅತಿರುದ್ರ ಮಹಾಯಾಗದ ಸೊಬಗನ್ನು ಇನ್ನಷ್ಟು ಹೆಚ್ಚಿಸಿತು.
