ಸುರತ್ಕಲ್ : ಕ್ಷುಲ್ಲಕ ಕಾರಣಕ್ಕೆ ಯುವಕನಿಂದ ಚೂರಿ ಇರಿತ
ಸುರತ್ಕಲ್‍ನ ಜನತಾ ಕಾಲನಿಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಗುರುವಾರ ರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.
ಇಲ್ಲಿನ ಕಾನ ಕಾಲನಿ ನಿವಾಸಿ ಮುಹಮ್ಮದ್ ಶಾಫಿ(35) ಚೂರಿ ಇರಿತಕ್ಕೊಳಗಾದವರು. ಅದೇ ಪರಿಸರದ ಯುವಕ ತ್ವಾಹಿರ್ (24) ಚೂರಿಯಿಂದ ಇರಿದ ಆರೋಪಿ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಕಾನಕಾಲನಿ ಮಸೀದಿಯ ಬಳಿ ಇಬ್ಬರ ನಡುವೆ ಜಗಳವಾಗಿದ್ದು, ತಾಹಿರ್ ಚೂರಿಯಲ್ಲಿ ಇರಿದು ಪರಾರಿಯಾಗಿದ್ದಾನೆ. ಮಸೀದಿಯಲ್ಲಿನ ದೀಪಗಳನ್ನು ಸ್ವಿಚ್ ಆಫ್ ಮಾಡುವ ಬಗ್ಗೆ ಭಿನ್ನಾಭಿಪ್ರಾಯದಿಂದ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.
ಘಟನೆಯ ನಂತರ ಮೊಹಮ್ಮದ್ ಶಾಫಿ ಬೆನ್ನು ಮತ್ತು ಕೈಗೆ ಚೂರಿ ಇರಿತದ ಗಂಭೀರ ಗಾಯಗಳಾಗಿದ್ದು, ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.