ಉಳ್ಳಾಲದ ಮನೆಯೊಂದಕ್ಕೆ 7 ಲಕ್ಷ ರೂ. ವಿದ್ಯುತ್ ಬಿಲ್ : ಬಿಲ್ ರೀಡರ್ ನ ಎಡವಟ್ಟು

ಕೆಇಆರ್‍ಸಿ ಆದೇಶದಂತೆ ಈ ತಿಂಗಳು ವಿದ್ಯುತ್ ದರ ಏರಿಕೆಯಾಗಿದ್ದು ಉಳ್ಳಾಲ ಬೈಲ್‍ನ ಮನೆಯೊಂದಕ್ಕೆ ಬರೋಬರಿ 7 ಲಕ್ಷ ವಿದ್ಯುತ್ ಬಿಲ್ ಬಂದದನ್ನ ಕಂಡು ಮನೆ ಮಾಲೀಕ ಶಾಕ್ ಆಗಿದ್ದಾರೆ.

ಉಳ್ಳಾಲ ಬೈಲ್‍ನ ಸದಾಶಿವ ಆಚಾರ್ಯ ಅವರ ಮನೆಗೆ ನಿನ್ನೆ ಬಂದ ಬಿಲ್ ರೀಡರ್ ಬರೋಬರಿ 7,71,072 ಬಿಲ್ಲನ್ನ ನೀಡಿ ತೆರಳಿದ್ದಾನೆ. ಮನೆ ಮಂದಿ 7 ಲಕ್ಷ ಬಿಲ್ ನೋಡಿ ಹೌಹಾರಿದ್ದು ಬಿಲ್ ರೀಡಿಂಗ್ ಮಾಡಿದ ವ್ಯಕ್ತಿಯಲ್ಲಿ ವಿಚಾರಿಸಿದಾಗ ಅದೆಲ್ಲ ನನಗೆ ಗೊತ್ತಿಲ್ಲ ಮೆಸ್ಕಾಂ ಕಛೇರಿಗೆ ಹೋಗಿ ವಿಚಾರಿಸಿ ಎಂದು ಉಡಾಫೆಯ ಉತ್ತರ ನೀಡಿ ತೆರಳಿದ್ದಾನೆ.

ವಿದ್ಯುತ್ ಬಿಲ್ ರಿಸಿಪ್ಟಲ್ಲಿ 99,338 ಯೂನಿಟ್ ಖರ್ಚಾಗಿದ್ದು 7,71,072 ರೂಪಾಯಿ ಬಿಲ್ ನಮೂದಿಸಲಾಗಿದೆ. ತಮಗೆ ಈ ಮೊದಲು 3,000 ದಷ್ಟು ಮಾಸಿಕ ವಿದ್ಯುತ್ ಬಿಲ್ ಬರುತ್ತಿತ್ತು. ನಾವು ಪ್ರತಿ ತಿಂಗಳು ಬಿಲ್ಲನ್ನ ಕಟ್ಟುತ್ತೇವೆ. ಈ ತಿಂಗಳು ಬಂದ ಬಿಲ್ಲನ್ನ ನೋಡಿ ಮನೆ ಮಂದಿ ಎಲ್ಲ ನಿಜಕ್ಕೂ ಶಾಕ್ ಆದೆವು ಎಂದು ಮನೆ ಮಾಲೀಕ ಸದಾಶಿವ ಆಚಾರ್ಯ ಹೇಳಿದ್ದಾರೆ.

ಉಳ್ಳಾಲ ಉಪವಿಭಾಗ ಮೆಸ್ಕಾಂ ಕಛೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ಅವರಲ್ಲಿ ವಿಚಾರಿಸಿದಾಗ ಏಜೆನ್ಸಿಗಳ ಮುಖಾಂತರ ಬಿಲ್ ಕಲೆಕ್ಷನ್ ಮಾಡಲಾಗುತ್ತದೆ. ಬಿಲ್ ರೀಡರ್ನ ಎಡವಟ್ಟಿನಿಂದ ತಪ್ಪಾಗಿ ವಿದ್ಯುತ್ ಬಿಲ್ ಮುದ್ರಣ ಆಗಿದೆ. ಬಿಲ್ಲಲ್ಲಿ ಲೋಪ ಕಂಡು ಬಂದರೆ ಅದನ್ನ ಗ್ರಾಹಕರಿಗೆ ಕೊಡುವಂತಿಲ್ಲ. ತಕ್ಷಣವೇ ಸದಾಶಿವ ಆಚಾರ್ಯ ಅವರ ಮನೆ ಬಾಗಿಲಿಗೆ ಪರಿಷ್ಕೃತ ಬಿಲ್ ತಲುಪಿಸುವುದಾಗಿ ಹೇಳಿದ್ದು ಪರಿಷ್ಕೃತ 2,833 ರೂಪಾಯಿಗಳ ಬಿಲ್ ಆಚಾರ್ಯ ಅವರ ಮನೆ ತಲುಪಿದೆ ಎಂದಿದ್ದಾರೆ.

Related Posts

Leave a Reply

Your email address will not be published.