ಬಂಟ್ವಾಳ: 2ನೇ ವರ್ಷದ ಚಿಣ್ಣರೋತ್ಸವಕ್ಕೆ ಸಿದ್ಧಗೊಂಡಿದೆ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಪ್ರೌಢಶಾಲೆ
ಬಂಟ್ವಾಳ: ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ, ಹಾಗೂ ಕ್ರೀಡಾ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯೊದಗಿಸುವ ನಿಟ್ಟಿನಲ್ಲಿ ಎರಡನೇ ವರ್ಷದ ದಡ್ಡಲಕಾಡು ಚಿಣ್ಣರೋತ್ಸವಕ್ಕೆ ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಗೊಳ್ಳುತ್ತಿದೆ.
ಕಳೆದ ವರ್ಷದ ಅತ್ಯದ್ಭುತ ಯಶಸ್ಸಿನಿಂದ ಪ್ರೇರಣೆ ಪಡೆದು ಈ ವರ್ಷವೂ ಹಲವಾರು ವಿಶಿಷ್ಠ, ವಿನೂತನ ಕಾರ್ಯಕ್ರಮ ನೀಡಲು ಶಾಲೆಯ ಸಾವಿರಾರು ವಿದ್ಯಾರ್ಥಿಗಳು ತಯಾರಾಗಿದ್ದು ಸರ್ಕಾರಿ ಶಾಲೆಯಲ್ಲಿ ಇಂತಹ ದೊಡ್ಡಮಟ್ಟದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯುತ್ತಿರುವುದು ಪ್ರಥಮ. ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ನೇತೃತ್ವದಲ್ಲಿ ಮಾದರಿ ಶಾಲೆಯಾಗಿ ಬೆಳೆದಿರುವುದು ಈಗ ಇತಿಹಾಸ. 28 ಮಕ್ಕಳಿದ್ದ ಶಾಲೆ ಈಗ ಸರಕಾರಿ ಆಂಗ್ಲಮಾಧ್ಯಮ ಶಾಲೆಯಾಗಿ ಪರಿವರ್ತನೆಗೊಂಡು 1200ಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಶಾಲಾ ವೇದಿಕೆ ಕಿರಿದಾದಾಗ ಅನೇಕ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನದಿಂದ ವಂಚಿತರಾಗುತ್ತಾರೆ. ಶಾಲೆಯ ಪ್ರತಿಯೊಬ್ಬ ಮಗುವಿಗೂ ತನ್ನ ಪ್ರತಿಭೆ ತೋರ್ಪಡಿಸಲು ವೇದಿಕೆ ಬೇಕು ಎನ್ನುವ ಪ್ರಕಾಶ್ ಅಂಚನ್ ಅವರ ಯೋಚನೆಯ ಫಲವಾಗಿ ಹುಟ್ಟಿಕೊಂಡ ಯೋಜನೆಯೇ ದಡ್ಡಲಕಾಡು ಚಿಣ್ಣರೋತ್ಸವ.
ಶಾಲೆಯ ವಿಶಾಲವಾದ ಮೈದಾನದಲ್ಲಿ ಬಣ್ಣ ಬಣ್ಣದ ವಸ್ತ್ರವನ್ನು ತೊಟ್ಟು ನೂರಾರು ಮಕ್ಕಳು ಏಕಕಾಲದಲ್ಲಿ ನೀಡುವ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಮನೆಸೂರೆಗೈಯ್ಯುತ್ತದೆ. ವಿದ್ಯಾರ್ಥಿಗಳಿಂದ ವಿವಿಧ ಆಕೃತಿಗಳ ರಚನೆ, ನೃತ್ಯ, ಕರಾಟೆ, ಯಕ್ಷಗಾನ, ಸಂಗೀತ, ನಾಟಕ, ಹುಲಿ ಕುಣಿತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಸ್ವತಃ ವಿದ್ಯಾರ್ಥಿಗಳೇ ಕಾರ್ಯಕ್ರಮವನ್ನು ನಿರ್ವಹಿಸುವುದು ಚಿಣ್ಣರೋತ್ಸವದ ವಿಶೇಷತೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಪ್ರೇಕ್ಷಕರು ಕುಳಿತು ಕಣ್ತುಂಬಿಕೊಳ್ಳಲು ಮೈದಾನದ ಸುತ್ತ ಗ್ಯಾಲರಿ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತದೆ. ಕಳೆದ ವರ್ಷ ಮೂರುವರೆ ಸಾವಿರ ಮಂದಿ ಗ್ಯಾಲರಿಯ ಮೂಲಕ ಚಿಣ್ಣರೋತ್ಸವವನ್ನು ವೀಕ್ಷಿಸಿದ್ದಾರೆ. ಈ ಬಾರಿ ಡಿ.10ರಂದು ಭಾನುವಾರ ಸಂಜೆ 4 ರಿಂದ ಚಿಣ್ಣರೋತ್ಸವ ನಡೆಯಲಿದ್ದು ಸಕಲ ಸಿದ್ದತೆಗಳು ನಡೆಯುತ್ತಿದೆ.
ಮಕ್ಕಳ ಸಂತೆ ಮೇಳ:
ಚಿಣ್ಣರೋತ್ಸವ ಇನ್ನೊಂದು ಆಕರ್ಷಣೆ ಮಕ್ಕಳ ಸಂತೆ ಮೇಳ. ಕಾರ್ಯಕ್ರಮದ ದಿನದಂದು ಇಲ್ಲಿ ಸಂತೆ ವ್ಯಾಪಾರವನ್ನು ಮಕ್ಕಳೆ ಮಾಡುತ್ತಾರೆ. ಬೇಲ್‍ಪುರಿ, ಪಾನಿಪುರಿ, ಪಾಪ್‍ಕಾರ್ನ್, ಸ್ವೀಟ್‍ಕಾರ್ನ್, ಜ್ಯೂಸ್, ಚುರುಮುರಿಯ ವ್ಯಾಪಾರ ಭರ್ಜರಿಯಾಗಿಯೇ ನಡೆಯುತ್ತದೆ. ಕಳೆದ ವರ್ಷ ಸಂತೆ ವ್ಯಾಪಾರದಲ್ಲಿ ಬಂದ ರೂ. 1 ಲಕ್ಷ ಲಾಭವನ್ನು ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಶಾಲೆಗೆ ಸುಮಾರು 1 ಕೋಟಿಯ ನೂತನ ಕಟ್ಟಡವೂ ನಿರ್ಮಾಣಗೊಳ್ಳುತ್ತಿದ್ದು ಶಾಸಕ ರಾಜೇಶ್ ನಾಕ್ ಅವರ ಮುತವರ್ಜಿಯಿಂದ ಸರ್ಕಾರದ ವಿವೇಕ ಯೋಜನೆಯಡಿ ರೂ. 49 ಲಕ್ಷ ಅನುದಾನ, ಎಂಆರ್‍ಪಿಎಲ್‍ನಿಂದ ರೂ. 30 ಲಕ್ಷ ಆರ್ಥಿಕ ನೆರವು ಬಂದಿದ್ದು ಉಳಿದ ಮೊತ್ತವನ್ನು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಭರಿಸಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಪೆÇೀಷಕರಿಗೆ ಕ್ರೀಡಾಕೂಟ:
ದಡ್ಡಲಕಾಡು ಶಾಲೆಯಲ್ಲಿ ಚಿಣ್ಣರೋತ್ಸವದ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಗಳ ಪೆÇೀಷಕರಿಗೂ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕಳೆದ ಭಾನುವಾರ ಈ ಕ್ರೀಡಾಕೂಟ ನಡೆದಿದ್ದು 600ಕ್ಕಿಂತಲೂ ಅಧಿಕ ಮಂದಿ ಪೆÇೀಷಕರು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ. ಇಂತಹ ಅವಕಾಶ ಯಾವ ಶಾಲೆಯಲ್ಲೂ ಸಿಕ್ಕಿಲ್ಲ ಎನ್ನುವ ಅನುಭವವನ್ನು ಅನೇಕ ಪೆÇೀಷಕರು ಹಂಚಿಕೊಂಡಿದ್ದಾರೆ.