ತುಳು ಭಾಷೆಗೆ ಶೀಘ್ರ ಅಧಿಕೃತ ಸ್ಥಾನಮಾನ ಲಭಿಸಲಿ : ಚಂದ್ರಕಲಾ ನಂದಾವರ

ಮಂಗಳೂರು: ತುಳು ಭಾಷೆ ಪಂಚದ್ರಾವಿಡ ಭಾಷೆಗಳಲ್ಲಿ ಹಳೆಯ ಭಾಷೆಯಾಗಿದ್ದರೂ ರಾಜ್ಯದ ಅಧಿಕೃತ ಸ್ಥಾನಮಾನ ಇನ್ನೂ ದೊರಕದಿರುವುದು ವಿಷಾದನೀಯ, ಶೀಘ್ರವಾಗಿ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ಲಭಿಸಲಿ ಎಂದು ಹಿರಿಯ ಲೇಖಕಿ ಹಾಗೂ ವಿಶ್ರಾಂತ ಪ್ರಾಂಶುಪಾಲರಾದ ಚಂದ್ರಕಲಾ ನಂದಾವರ ಅವರು ಹೇಳಿದರು.


ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಸಹಯೋಗದಲ್ಲಿ ಶನಿವಾರ ಉರ್ವ ತುಳು ಭವನದಲ್ಲಿ ಆಯೋಜಿಸಿದ ‘ಅಕಾಡೆಮಿಡ್ ಒಂಜಿ ದಿನ : ಬಲೆ ತುಳು ಓದುಗ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ವ್ಯವಹಾರಿಕವಾಗಿ ತುಳು ಮಾತಾಡಬೇಕು, ಸರಕಾರಿ ಕಚೇರಿಗಳಲ್ಲೂ ತುಳು ಬಳಸಬೇಕು ಯಾವ ಭಾಷೆಯೂ ಮೇಲಲ್ಲ ಕೀಳಲ್ಲ ಎನ್ನುವ ಭಾವನೆ ರೂಪಿಸಿಕೊಳ್ಳಬೇಕು ಹಾಗೇಯೆ ಭಾಷೆಗಳು ಇರುವುದು ಸಾಮರಸ್ಯಕ್ಕಾಗಿ ದ್ವೇಷಕ್ಕಾಗಿ ಅಲ್ಲ ಎಂದು ಅವರು ಹೇಳಿದರು.
ತುಳು ಭಾಷೆಯಲ್ಲಿ ಅಗಾಧವಾದ ಪಾಂಡಿತ್ಯಪೂರ್ಣ ಸಾಹಿತ್ಯ ಕೃತಿಗಳಿವೆ, ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ತುಳು ಸಾಹಿತ್ಯದ ಪರಿಚಯವಾಗಲಿ ಎಂದು ಚಂದ್ರಕಲಾ ನಂದಾವರ ಅವರು ಆಶಯ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾ ರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳುವಿನಲ್ಲಿ ಹಾಗೂ ಅನ್ಯ ಭಾಷೆಗಳಲ್ಲಿ ತುಳುವಿನ ಬಗ್ಗೆ ಸಾವಿರಾರು ಪುಸ್ತಕಗಳಿವೆ, ಹೊಸ ತಲೆಮಾರಿನ ಯವರಿಗೆ ತುಳುನಾಡು ಹಾಗೂ ತುಳು ಸಾಹಿತ್ಯದ ಆಳ, ವಿಸ್ತಾರ ತಿಳಿಯಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು .
ರೋಶನಿ ನಿಲಯದ ಕನ್ನಡ ವಿಭಾಗ ಮುಖ್ಯಸ್ಥರಾದ ಓಬನಾಥ್, ವಿದ್ಯಾರ್ಥಿ ಸಂಚಾಲಕಿ ಪೂಜಾ, ರಂಗಕರ್ಮಿ ಜಗನ್ ಪವಾರ್ ಬೇಕಲ್ , ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣಮೂರ್ತಿ , ಪತ್ರಕರ್ತ ರಮೇಶ್ ಮಂಜೇಶ್ವರ, ಸಾಮಾಜಿಕ ಕಾರ್ಯಕರ್ತ
ಬಾಬು ಪಿಲಾರ್ ಮೊದಲಾದವರು ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಸಂಚಾಲಕ ಪಾಂಗಳ ಬಾಬು ಕೊರಗ ಸ್ವಾಗತಿಸಿ, ನಿರೂಪಿಸಿದರು.
