ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅಕ್ಕಿ ಮುಹೂರ್ತ : 2024 ರ ಪರ್ಯಾಯಕ್ಕೆ ಸಜ್ಜು
ದಿನ ಕಳೆದಂತೆ ಹತ್ತಿರವಾಗುತ್ತಿದೆ ಉಡುಪಿಯ ಭವ್ಯ ಆಚರಣೆ. ಇಡೀ ಜಗತ್ತಿನಲ್ಲೇ ವಿಶಿಷ್ಟವಾದ ಸಂಪ್ರದಾಯಗಳಲ್ಲಿ ಒಂದು, ಶತಮಾನಗಳಿಂದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಚಾಚೂ ತಪ್ಪದೇ ಆಚರಿಸಿಕೊಂಡು ಬರುತ್ತಿರುವ “ಪರ್ಯಾಯ”ಮಹೋತ್ಸವ. ಉಡುಪಿಯ 8 ಮಠಗಳ ನಡುವೆ ಶ್ರೀ ಕೃಷ್ಣ ದೇವಾಲಯದ ಜವಾಬ್ದಾರಿಗಳ ಹಸ್ತಾಂತರವನ್ನೇ ಪರ್ಯಾಯ ಮಹೋತ್ಸವ ಎನ್ನುತ್ತಾರೆ. ಪ್ರಸ್ತುತ ಕೃಷ್ಣಪುರ ಮಠದ ವಿದ್ಯಾಸಾಗರ ತೀರ್ಥರು ಶ್ರೀ ಕೃಷ್ಣನ ಆರಾಧನೆಯಲ್ಲಿ ತೊಡಗಿದ್ದರೆ, ಮುಂದಿನ ಸರದಿಯಲ್ಲಿ ಪರ್ಯಾಯ ಪೀಠವನ್ನೇರಲಿರುವ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಶಿಷ್ಯರಾದ ಶ್ರೀ ಸುಶೀಂದ್ರತೀರ್ಥ ಶ್ರೀಪಾದರೊಡನೆ ಕೂಡಿ ಹಲವು ಸಿದ್ಧತೆಗಳಲ್ಲಿ ತೊಡಗಿಕೊಂಡಿದ್ದಾರೆ.
ಈ ಕ್ರಮವಾಗಿ ಡಿಸೆಂಬರ್ 02, 2022 ರಂದು ಪರ್ಯಾಯ ತಯಾರಿಯ ಆರಂಭವಾಗಿರುವ ಬಾಳೆ ಮುಹೂರ್ತವು ಶ್ರೀ ಕೃಷ್ಣ ಮಠದಲ್ಲಿ ನಡೆಯಿತು. ಅಂತೆಯೇ ದ್ವಿತೀಯ ಮುಹೂರ್ತವಾದ “ಅಕ್ಕಿ ಮುಹೂರ್ತ”ವು ಮೇ 25, 2023 ರ ಗುರುವಾರದಂದು ಶ್ರೀ ಪುತ್ತಿಗೆ ಮಠದಲ್ಲಿ ನೆರವೇರಿತು. ಮುಂಜಾನೆ ದೇವತಾ ಪ್ರಾರ್ಥನೆ, ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ದರ್ಶನ ನೆರವೇರಿತು. ನಂತರ ಕ್ರಮವಾಗಿ ಚಿನ್ನದ ಪಾಲಕಿಯಲ್ಲಿ ಶ್ರೀಮುಡಿ ಮೆರವಣಿಗೆ, ತಂಡಲು ಸಂಗ್ರಹ, ವಿವಿಧ ಸಂಘ ಸಂಸ್ಥೆಗಳಿಂದ ಅಕ್ಕಿ ಸಂಗ್ರಹ ಸಂಕಲ್ಪ, ಪುತ್ತಿಗೆ ಶ್ರೀಗಳಿಂದ ಆಶೀರ್ವಚನ ಮತ್ತು ಫಲಮಂತ್ರಾಕ್ಷತೆ ಜರುಗಿತು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಭಗವಂತನ ಸೇವೆ ಮಾಡುವ ಭಾಗ್ಯ, ಆತ ಬಯಸಿದರೆ ಮಾತ್ರ ಲಭ್ಯವಾಗುವುದು. ಭಗವಂತ ಕೊಟ್ಟ “ಪರ್ಯಾಯ”ದಂತ ಸುಯೋಗವನ್ನು ನಾವೊಬ್ಬರೇ ಅನುಭವಿಸದೇ, ಎಲ್ಲರಿಗೂ ಆ ಪುಣ್ಯ ಪ್ರಾಪ್ತಿಯಾಗಬೇಕು ಎಂಬುವುದು ಪುತ್ತಿಗೆ ಪರ್ಯಾಯದ ಆಶಯ. ಉಡುಪಿ ಕೃಷ್ಣನನ್ನು ಅನ್ನಬ್ರಹ್ಮನಾಗಿ ಆರಾಧಿಸಬೇಕು. ಯಾಕೆಂದರೆ ಶ್ರೀ ಕೃಷ್ಣನ ಸಾಕ್ಷಾತ್ಕಾರವಾಗಿದ್ದು ತಿನ್ನುವ ಮುಖಾಂತರ. ಬೆಣ್ಣೆ ಕದ್ದು ತಿನ್ನುವ ಬಾಲಕೃಷ್ಣನನ್ನು ವಿಶ್ವಕರ್ಮ ರೂಪಿಸಿರುವುದು ಇಲ್ಲಿನ ಇತಿಹಾಸವಾಗಿದೆ. ತಿನ್ನುವ ಕೃಷ್ಣ ಇಲ್ಲಿ ಇದ್ದರಿಂದ, ಅನ್ನಬ್ರಹ್ಮನಾಗಿ ಇಲ್ಲಿ ನೆಲೆಸಿದ್ದಾನೆ ಎಂದು ಆಚಾರ್ಯರು ತೋರಿಸಿಕೊಟ್ಟಿದ್ದಾರೆ. ನಮ್ಮ ಜೀವನದಲ್ಲಿ ಸಮೃದ್ಧಿ ಹಾಗೂ ಮೃಷ್ಟಾನ್ನ ಭೋಜನ ಸಿಗಬೇಕಾದರೆ, ಭಗವಂತನನ್ನು ಅನ್ನಬ್ರಹ್ಮನಾಗಿ ಉಪಾಸನೆ ಮಾಡಬೇಕು. ಇದರಿಂದ ಜನ್ಮಜನ್ಮಾಂತರವರೆಗೂ ಮೃಷ್ಟಾನ್ನ ಪ್ರಾಪ್ತಿಯಾಗಲು ಸಾಧ್ಯವಿದೆ. ಜಗತ್ತಿನಲ್ಲಿ ಅನ್ನಧಾನಕ್ಕೆ ವಿಶೇಷವಾದ ಮಹತ್ವವಿದೆ. ಉಡುಪಿಯು, ಜಗತ್ತಿನಲ್ಲಿ ಅನ್ನಧಾನಕ್ಕೆ ವಿಶೇಷವಾದ ಮಹತ್ವ ಕೊಟ್ಟ ಕ್ಷೇತ್ರವಾಗಿದೆ. ಇಲ್ಲಿ ಸತತ 800 ವರ್ಷಗಳಿಂದ ಅನ್ನಧಾನ ನಡೆಯುತ್ತಿದೆ ಎಂದು ಅನ್ನಧಾನದ ಮಹತ್ವ ತಿಳಿಸಿದರು. ಇದರೊಂದಿಗೆ, ಈ ಬಾರಿಯ ಪುತ್ತಿಗೆ ಪರ್ಯಾಯದ ವೈಶಿಷ್ಠವೆಂದರೆ ಮುಡಿಗಳನ್ನು ಮಠದಲ್ಲಿ ಸಿದ್ದ ಮಾಡದೇ ಊರಿನ ಎಲ್ಲಾ ಸಂಘ-ಸಂಸ್ಥೆಗಳಿಂದ ಸಿದ್ದ ಮಾಡಲಾಗಿದೆ ಎಂದರು.
ನಂತರ ಆಶೀರ್ವಚನ ನೀಡಿದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಶಿಷ್ಯರಾದ ಶ್ರೀ ಸುಶೀಂದ್ರತೀರ್ಥ ಶ್ರೀಪಾದರು, ಉಡುಪಿ ಪರ್ಯಾಯದ ಇತಿಹಾಸವನ್ನು ಸಂಕ್ಷಿಪ್ತವಾಗಿ ಪರಿಚಯಿಸಿ, ಉಡುಪಿಯ ಶ್ರೀ ಕೃಷ್ಣ ಅನ್ನಬ್ರಹ್ಮನಾಗಿ ಪ್ರಸಿದ್ಧನಾದವನು. ಅದಕ್ಕೆ ದ್ಯೋತಕವಾಗಿ ಅಕ್ಷಯಪಾತ್ರೆ ಇಲ್ಲಿದೆ. ಇಲ್ಲಿಗೆ ಬಂದವರ್ಯಾರೂ ಹಸಿದು ಹಿಂದಕ್ಕೆ ಹೋಗಬಾರದೆಂಬ ಉದ್ದೇಶ ಅಕ್ಕಿ ಮುಹೂರ್ತದ್ದಾಗಿದೆ ಎಂದು ಸೇರಿರುವರಿಗೆ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿಗಳು, ಸಂಘ-ಸಂಸ್ಥೆಗಳು ಮತ್ತು ಊರ ಪರವೂರ ಭಕ್ತರು ಉಪಸ್ಥಿತರಿದ್ದರು.
‘ವಿಶ್ವ ಗೀತ ಪರ್ಯಾಯ’ ಮುಂಬರುವ ಪುತ್ತಿಗೆ ಮಠದ ಪರ್ಯಾಯ ಸಂಕಲ್ಪವಾಗಿದೆ. ಎಲ್ಲರನ್ನೂ ಸೇರಿಸಿಕೊಂಡು ಒಟ್ಟಾಗಿ ಮಾಡುವಂತಹ ಸಂಕಲ್ಪ ಇದಾಗಿದೆ. ಇದರೊಂದಿಗೆ 5 ಯೋಜನೆಗಳನ್ನು ಚಿಂತಿಸಲಾಗಿದೆ. ಈ ಯೋಜನೆಗಳು ಶ್ರೀ ಕೃಷ್ಣ ಮಠದ ಸಂಪೂರ್ಣ ಅಭಿವೃದ್ಧಿಗೆ ಪೂರಕವಾಗಿದೆ.
ನಾಲ್ಕನೇ ಬಾರಿ ಸರ್ವಜ್ಞ ಪೀಠಾರೋಹಣಕ್ಕೆ ಸಿದ್ಧರಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯನ ಜತೆಯಾಗಿ ಪರ್ಯಾಯದ ಸರ್ವ ಸಿದ್ದತೆಯಲ್ಲಿ ತೊಡಗಿಕೊಂಡಿದ್ದಾರೆ. ಬಾಳೆ ಮುಹೂರ್ತ ಮತ್ತು ಅಕ್ಕಿ ಮುಹೂರ್ತವನ್ನು ನೆರವೇರಿಸಿದ ಪುತ್ತಿಗೆ ಮಠದ ಶ್ರೀಪಾದರು, ಮುಂದಿನ ದಿನಗಳಲ್ಲಿ ಕಟ್ಟಿಗೆ ಮುಹೂರ್ತ ಮತ್ತು ಭತ್ತ ಮುಹೂರ್ತವನ್ನು ನೆರವೇರಿಸಲಿದ್ದಾರೆ. 16 ವರ್ಷಗಳ ಬಳಿಕ ಸರ್ವಜ್ಞ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು, 1 ವರ್ಷದಿಂದ ವಿದೇಶಗಳ ನೂರಾರು ಊರುಗಳಿಗೆ ಭೇಟಿ ನೀಡಿ, ಎಲ್ಲರನ್ನೂ ಪರ್ಯಾಯಕ್ಕೆ ಆಹ್ವಾನಿಸಿ ಪರ್ಯಾಯ ಸಂಚಾರವನ್ನು ಮುಗಿಸಿದ್ದಾರೆ. ಇಂದಿನನಿಂದ ಭಾರತ ಸಂಚಾರವನ್ನು ಕೈಗೊಳ್ಳಲಿದ್ದಾರೆ. ಭಾರತದಾದ್ಯಂತ ತೀರ್ಥ ಸ್ಥಳಗಳನ್ನು ಭೇಟಿ ನೀಡಿದ ನಂತರ ರಾಜ್ಯ ಸಂಚಾರವನ್ನು ಕೈಗೊಳ್ಳಲಿದ್ದಾರೆ.

















