ಮಂಗಳೂರು: ತುಳು ರಂಗಭೂಮಿಯಲ್ಲಿ ಸದಭಿರುಚಿಯ ಬದಲಾವಣೆ: ರಂಗಕರ್ಮಿ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್

ಮಂಗಳೂರು : ತುಳು ನಾಟಕ ಹಾಗೂ ಸಿನಿಮಾ ರಂಗದಲ್ಲಿ ನಿರಂತರ ಕಾಮಿಡಿ ನೋಡಿ ಜನತೆಗೆ ಸಾಕಾಗಿ ಹೋಗಿದೆ. ಹಾಗಾಗಿ ಪ್ರೇಕ್ಷಕರು ಬದಲಾವಣೆ ಬಯಸಿದ್ದಾರೆ. ಗಂಭೀರ, ತಿಳಿ ಹಾಸ್ಯದ ತುಳು ನಾಟಕಗಳನ್ನು ಇಷ್ಟಪಡುತ್ತಾರೆ. ಪ್ರೇಕ್ಷಕರ ಮನೋಧರ್ಮ ಅರಿತು ತುಳು ನಾಟಕ, ಸಿನಿಮಾಗಳಲ್ಲಿ ಸದಭಿರುಚಿಯ ಬದಲಾವಣೆ ತರಬೇಕಾಗಿದೆ ಎಂದು ರಂಗಕರ್ಮಿ, ನಟ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ನಡೆದ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು ತನ್ನ ರಂಗಭೂಮಿ ಹಾಗೂ ಸಿನಿಮಾ ಪಯಣದ ಅನುಭವವನ್ನು ಹಂಚಿಕೊಂಡರು.

ರಂಗಭೂಮಿಯಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ಆದರೆ ಎಂದಿಗೂ ಏಕತಾನತೆಗೆ ಶರಣಾಗಿಲ್ಲ. ನಾಟಕ ರಂಗವಾಗಲೀ,
ಸಿನೆಮಾ ಆಗಿರಲಿ ವಿಭಿನ್ನ ಪ್ರಯೋಗವೇ ನನ್ನ ಆಯ್ಕೆ. ಹಾಗಾಗಿ ಶಿವದೂತೆ ಗುಳಿಗೆ ನಾಟಕ ದೇಶ ವಿದೇಶಗಳಲ್ಲಿ ರಂಗಭೂಮಿಯ ಹೊಸ ಮಗ್ಗಲನ್ನು ಪ್ರದರ್ಶಿಸಲು ಅವಕಾಶ ನೀಡಿತು. ಮತ್ತೆ ಪೌರಾಣಿಕ ನಾಟಕ ಮಾಡುವ ಇರಾದೆ ಇಲ್ಲ ಎಂದು ಅವರು ಹೇಳಿದರು.

ತುಳು ಸಿನಿಮಾ ರಂಗ ಈಗ ಅತಂತ್ರ ಪರಿಸ್ಥಿತಿಯಲ್ಲಿ ಇದೆ. ಈ ಸಿನಿಮಾಗಳ ಕಾಮಿಡಿ ಪಾತ್ರಗಳಲ್ಲಿ ಅದೇ ಮಾತು, ಅಭಿನಯ ನೋಡಿ ಪ್ರೇಕ್ಷಕಕರು ಬೇಸತ್ತಿದ್ದಾರೆ. ಇಲ್ಲಿಯೂ ಬದಲಾವಣೆ ನೀಡಿದರೆ ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರೆ. ನಾಟಕ ಕಲಾವಿದರು ಸಿನಿಮಾ ರಂಗ ಪ್ರವೇಶಿಸಿರುವುದರಿಂದ ನಾಟಕಕ್ಕೆ ಕಲಾವಿದರ ಕೊರತೆ ಆಗುವುದಿಲ್ಲ. ಹೊಸ ಕಲಾವಿದರಿಗೆ ಅವಕಾಶ ಸಿಗುತ್ತದೆ. ಎಲ್ಲಿವರೆಗೆ ದೇವಸ್ಥಾನ,
ಜಾತ್ರೆ, ಉತ್ಸವ, ವಾರ್ಷಿಕೋತ್ಸವಗಳು ನಡೆಯುತ್ತವೋ ಅಲ್ಲಿವರೆಗೆ ನಾಟಕಗಳಿಗೆ ತೊಂದರೆ ಇಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಸದ್ಯ ‘ಮೈತಿದಿ ‘ನಾಟಕ ಮೂರು ಯಶಸ್ವಿ ಪ್ರದರ್ಶನ ಕಂಡಿದೆ. ಮುಂಬೈಯಲ್ಲಿ ಮುಂದಿನ ಪ್ರದರ್ಶನಕ್ಕೆ ತಂಡ ಸಿದ್ಧವಾಗಿದೆ. ತುಳು ಸಿನಿಮಾ ನಾಟಕದ ಹಾಗಿದೆ ಎನ್ನುವ ಕಲ್ಪನೆ ಇರುವ ಸಮಯದಲ್ಲೇ ಮೈತಿದಿ ನಾಟಕ ಅಲ್ಲ, ಸಿನೆಮಾದ ಹಾಗಿದೆ ಎನ್ನುವ ಪ್ರಶಂಸೆ ಗಳಿಸುತ್ತಿದೆ. ಕಂಬಳ ಸಿನೆಮಾ ಬಹುತೇಕ ಪೂರ್ಣಗೊಂಡಿದೆ. ತುಳು ಭಾಷೆಯ ಹಿರಿಮೆ ಸಾರುವ ‘ತುಳುವೆ ‘ಹಾಗೂ ಭೂಗತ ಜಗತ್ತಿನ ಸುತ್ತ ಹೆಣೆದ ‘ಕೊಡಿಯಾಲ್‌ಬೈಲ್‌‘ ಮುಂದಿನ ಯೋಜನೆಗಳಾಗಿದ್ದು ಚಿತ್ರಕಥೆ ಸಿದ್ಧವಾಗುತ್ತಿದೆ ಎಂದು ವಿಜಯ ಕುಮಾರ್ ಕೊಡಿಯಾಲ್ ಬೈಲ್ ತಿಳಿಸಿದರು.

ನಮ್ಮ ಕುಡ್ಲ ಚಾನೆಲ್ ನಿರ್ದೇಶಕ ಲೀಲಾಕ್ಷ ಕರ್ಕೇರ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯಕ್ರಮದ ಸಂಯೋಜಕ ಪುಷ್ಪರಾಜ್ ಬಿ.ಎನ್., ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮುಹಮ್ಮದ್ ಆರಿಫ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು. ಜಿತೇಂದ್ರ ಕುಂದೇಶ್ವರ ವಂದಿಸಿದರು. ವಿಜಯ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.