ಕಳಪೆ ಕಾಮಗಾರಿಗೆ ಸಾಕ್ಷಿ ನುಡಿಯುತ್ತಿದೆ ಪಡುಬಿದ್ರಿ ಹೆದ್ದಾರಿ
ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿಯಲ್ಲಿ ಕಳೆದ ಸುಮಾರು ಹನ್ನೊಂದು ವರ್ಷಗಳಿಂದ ಕುಂಟುತ್ತಾ ಸಾಗಿದ ಚತುರ್ಷ್ಪಥ ಹೆದ್ದಾರಿ ಕಾಮಗಾರಿ ಇದೀಗ ಅಂತ್ಯ ಕಾಣುವ ಲಕ್ಷಣಗಳು ಗೊಚರಿಸುತ್ತಿದ್ದರೂ ಮಾಡಿದ ಕಾಮಗಾರಿ ಕೆಲವೇ ಗಂಟೆಗಳಲ್ಲಿ ಆಯುಷ್ಯ ಕಳೆದುಕೊಳ್ಳುತ್ತಿದ್ದರೂ ಪ್ರಶ್ನಿಸುವವರಿಲ್ಲದೆ, ಆನೆ ನಡೆದಿದ್ದೇ ದಾರಿ ಎಂಬಂತ್ತಾಗಿದೆ.
ಪಡುಬಿದ್ರಿ- ಎರ್ಮಾಳು ಗಡಿಭಾಗಲ್ಲಿ ಹೆದ್ದಾರಿಗೆ ಕಿರು ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿ ದಶಕಗಳೇ ಕಳೆದು ಇದೀಗ ಪೂರ್ಣಗೊಂಡು, ಸೇತುವೆಗೆ ಹೊಂದಿಕೊಂಡಿರುವ ಸಂಪರ್ಕ ರಸ್ತೆಗೆ ಗಾಳಿ ಮಳೆಯ ಮಧ್ಯದಲ್ಲೇ ಡಾಮಾರೀಕರಣ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆದರೆ ಒಂದೇ ದಿನದಲ್ಲಿ ಕಾಮಗಾರಿ ತನ್ನ ಮೌಲ್ಯವನ್ನು ಅನಾವರಣಗೊಳಿಸಿದ್ದು, ಮಾಡಿದ ಡಾಮಾರೀಕರಣ ಕಿತ್ತು ಹೋಗಿ ರಸ್ತೆಯ ಒಂದು ಹಂಚಿನಲ್ಲಿ ರಾಶಿ ಬಿದ್ದಿದೆ. ಇದರಿಂದಾಗಿ ದ್ವಿಚಕ್ರ ವಾಹನಗಳು ಉರುಳಲಾರಂಭಿಸುತ್ತಿದಂತೆ ಮತ್ತೆ ಹೆದ್ದಾರಿ ಒಂದು ಪಾಶ್ವವನ್ನು ಮುಚ್ಚಲಾಯಿತು. ಬಳಿಕ ಮತ್ತೆ ಕಿತ್ತು ಹೋದ ರಸ್ತೆಯನ್ನು ತೆರವುಗೊಳಿಸಿ , ಮರು ಡಾಮಾರೀಕರಣ ನಡೆಸಲಾಯಿತಾದರೂ ಅದೇ ರಾಗ..ಅದೇ ಹಾಡು ಎಂಬಂತ್ತೆ ರಾಷ್ಟ್ರೀಯ ಹೆದ್ದಾರಿ ಛಿಂದಿಯಾಗಿ ವಾಹನ ಸಂಚಾರ ಅಸಾಧ್ಯ ಎಂಬಂತ್ತಾಗಿದೆ. ಈ ಅವ್ಯವಸ್ಥೆಯನ್ನು ನೋಡುವ ಕಣ್ಣುಗಳಿದೆಯೇ ವಿನಃ ಪ್ರಶ್ನಿಸುವವರ ಕೊರತೆಯಿಂದ ಇಂದಿಗೂ ಅಪಾಯಕಾರಿ ಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಮಾಯಕರ ಪ್ರಾಣ ಬಲಿಗಾಗಿ ಕಾಯುವಂತ್ತಿದೆ.