ಚೀನಾದಲ್ಲಿ ಧಾರಕಾರ ಮಳೆ: 12 ಮಂದಿ ಸಾವು, ಒಂದು ಲಕ್ಷಕ್ಕೂ ಹೆಚ್ಚು ಮಂದಿಯ ಸ್ಥಳಾಂತರ
ಚೀನಾದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ಇದುವರೆಗೂ 12 ಮಂದಿ ಸಾವನ್ನಪ್ಪಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಹೆನ್ನಾನ್ ಪ್ರಾಂತ್ಯದ ಝೆಂಗ್ಜು ಪ್ರದೇಶದಲ್ಲಿ ಕೇವಲ ಒಂದು ಗಂಟೆಯ ಅವಧಿಯಲ್ಲಿ 201.9 ಮಿ,ಮೀ ಮಳೆಯಾಗಿದೆ.
ಝೆಂಗ್ಜು ಪ್ರದೇಶದ ತಗ್ಗುಪ್ರದೇಶಗಳಿಗೆ ನೀರು ಹರಿಯುತ್ತಿದ್ದು, ನೂರಾರು ಮನೆ ಮಠಗಳು ನಾಶವಾಗಿವೆ. ಇದುವರೆಗೂ 12 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಮುಂಜಾಗೃತಾ ಕ್ರಮವಾಗಿ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಚೀನಾ ಮಾಧ್ಯಮ ವರದಿ ಮಾಡಿದೆ.
ಧಾರಾಕಾರ ಮಳೆಯಿಂದ ಪ್ರವಾಹ ಪರಿಸ್ಥಿತಿ ಬೀಕರಗೊಂಡಿದ್ದು, ಪ್ರವಾಹದ ಹೊಡೆತಕ್ಕೆ ಶಾವೋಲಿನ್ ದೇವಸ್ಥಾನ ಸೇರಿದಂತೆ ಹಲವಾರು ಕಟ್ಟಡಗಳಿಗೆ ಹಾನಿಯಾಗಿದ್ದರೆ, ಸುತ್ತಮುತ್ತಲಿನ ಸಾವಿರಾರು ಎಕರೆಯಲ್ಲಿ ರೈತರು ಬೆಳೆದಿದ್ದ ಬೆಳೆ ನಾಶವಾಗಿದೆ. ರೈಲು ಹಳಿಗಳು ಹಾಗೂ ಸುರಂಗ ಮಾರ್ಗಗಳಿಗೆ ನೀರು ನುಗ್ಗಿರುವುದರಿಂದ 160 ಕ್ಕೂ ಹೆಚ್ಚು ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ.