ನ್ಯಾಯಾಲಯಕ್ಕೆ ತಲೆಬಾಗಿ ಆಗಮಿಸಿದ್ದೇನೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ನಾನು ಇಂಧನ ಸಚಿವನಾಗಿದ್ದ ಸಂದರ್ಭ ವ್ಯಕ್ತಿಯೋರ್ವ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನಂತರ ಅಧಿಕಾರಿಗಳು ದೂರು ದಾಖಲಿಸಿದ್ದರು. ಆತ ಅಧಿಕಾರಿಗಳನ್ನೂ ನಿಂದನೆ ಮಾಡಿದ್ದ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಬರಬೇಕು ಎಂದು ನ್ಯಾಯಾಲಯ ಸೂಚಿಸಿದ್ದು, ಹೀಗಾಗಿ ನ್ಯಾಯಾಲಯಕ್ಕೆ ತಲೆಬಾಗಿ ಈಗ ಆಗಮಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ, ಪ್ರತಿಭಟನೆ ನಮ್ಮ ಹಕ್ಕು. ಅಹಿಂಸೆ ಮಾರ್ಗದಲ್ಲಿ ಹೋರಾಟ ಮಾಡುವುದು ಗಾಂಧೀಜಿ ಅವರು ನಮಗೆ ಹೇಳಿಕೊಟ್ಟ ಪಾಠ. ರೈತರು ಕಳೆದ 10 ತಿಂಗಳಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದು, ಪ್ರಧಾನಮಂತ್ರಿ ಸೇರಿ ಇತರ ಅಧಿಕಾರಿಗಳು ರೈತರನ್ನು ಭೇಟಿ ಮಾಡಿ ಮಾತನಾಡಿಲ್ಲ. ಕೇಂದ್ರ ಸಚಿವರ ಮಗ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿ 4 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನ ದಾಳಿ ಮಾಡಿದ್ದಾರೆ. ಇದು ಕೂಡ ನಡೆಯಬಾರದ ಘಟನೆ. ಆದರೆ ಇದಕ್ಕೆ ಕಾರಣರಾದವರನ್ನು ಬಂಧಿಸಿಲ್ಲ, ಮಂತ್ರಿ ರಾಜೀನಾಮೆ ನೀಡಿಲ್ಲ, ಇದು ಒಂದು ಸರ್ಕಾರನಾ ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭ ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್. ಲೋಬೊ, ಮೊಯ್ದಿನ್ ಬಾವ, ಐವನ್ ಡಿಸೋಜಾ, ಹರೀಶ್ ಕುಮಾರ್, ಪಿ.ವಿ. ಮೋಹನ್ ಮತ್ತಿತರರು ಇದ್ದರು.