2023-24ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟ – ಉಡುಪಿ ಪ್ರಥಮ, ದ.ಕ. ದ್ವಿತೀಯ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ. 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿತು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಹಾಗೂ ನಿರ್ದೇಶಕ ಗೋಪಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಮಾಹಿತಿ ನೀಡಿದರು.
ಈ ಬಾರಿಯ ಫಲಿತಾಂಶ ಪ್ರಮಾಣ ಶೇ 73.4 ಆಗಿದ್ದು, ಕಳೆದ ಬಾರಿಗಿಂತ ಶೇ 10ರಷ್ಟು ಕಡಿಮೆ ಆಗಿದೆ. ಕಳೆದ ವರ್ಷ ಶೇ 83.89ರಷ್ಟು ಫಲಿತಾಂಶ ದಾಖಲಾಗಿತ್ತು.
ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 8,59,967 ಲಕ್ಷ ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 6,31,204ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರದ್ದೇ ಮೈಲುಗೈಯಾಗಿದೆ.

ಈ ಬಾರಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ದೊರೆತಿದ್ದರೆ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ದೊರೆತಿದೆ. ಉಡುಪಿ ಜಿಲ್ಲೆಯಲ್ಲಿ ಶೇ 94ರ ಫಲಿತಾಂಶ ದಾಖಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ತೇರ್ಗಡೆ ಪ್ರಮಾಣ ಶೇ 50.59 ದಾಖಲಾಗಿದೆ.
ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು 625ಕ್ಕೆ 625 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿಯವರಾಗಿದ್ದಾರೆ. ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ.\
