ಸುಳ್ಯದ ಕಲ್ಚರ್ಪೆಯಿಂದ ಮಳೆ ನೀರಿನೊಂದಿಗೆ ತೋಡಿನಲ್ಲಿ ಹರಿದುಬಂದ ತ್ಯಾಜ್ಯ: ಶ್ರೀ ವನದುರ್ಗಾ ದೈವಸ್ಥಾನ ಕಲ್ಚರ್ಪೆ ಸಮಿತಿಯಿಂದ ಶ್ರಮದಾನ

ಕಳೆದ ಎರಡು ವಾರದ ಹಿಂದೆ ಸುರಿದ ಮಳೆಯಿಂದಾಗಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನ ಕಲ್ಪರ್ಪೆ ತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿದ್ದ ತ್ಯಾಜ್ಯ ತುಂಬಿದ ಚೀಲಗಳು ತೋಡಿನ ಮೂಲಕ ಬಂದು ಪಯಶ್ವಿನಿ ನದಿಯನ್ನು ಸೇರಿತ್ತು. ಈ ಬಗ್ಗೆ ಅಲ್ಲಿಯ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದರು. ಈ ಬಗ್ಗೆ ನಗರ ಪಂಚಾಯತ್‌ಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಇದೀಗ ಶ್ರೀ ವನದುರ್ಗಾ ದೈವಸ್ಥಾನ ಕಲ್ಚರ್ಪೆ ಸಮಿತಿಯವರು ತೋಡಿನಲ್ಲಿ ಇದ್ದಂತಹ ತ್ಯಾಜ್ಯ ಚೀಲಗಳನ್ನು ಹೆಕ್ಕಿ ಸ್ವಚ್ಛಗೊಳಿಸುವ ಮೂಲಕ ಮಾದರಿ ಕೆಲಸವನ್ನು ಮಾಡಿದ್ದಾರೆ.

ಶ್ರೀ ವನದುರ್ಗಾ ದೈವಸ್ಥಾನ ಮತ್ತು ಪರಿವಾರ ದೈವಗಳ ಸಾನಿಧ್ಯ, ಸಿರಿ ಕುರಲ್ ನಗರ ಕಲ್ಚರ್ಪೆ ಸಮಿತಿ ವತಿಯಿಂದ ಪರಿಸರದಲ್ಲಿ ಹರಿದುಬರುತ್ತಿರುವ ತೋಡಿನ ಪರಿಸರ ಶ್ರಮದಾನದ ಮೂಲಕ ಸ್ವಚ್ಛತೆಯನ್ನು ಮಾಡಿದರು.

ಈ ಸಂದರ್ಭ ಮಾತನಾಡಿದ ನಗರ ಪಂಚಾಯತ್‌ನ ಮಾಜಿ ಸದಸ್ಯ ಗೋಕುಲ್ ದಾಸ್ ಅವರು ಮಾತನಾಡಿ, ಕಳೆದ ಹದಿನೈದು ದಿನಗಳ ಹಿಂದೆ ನಗರ ಪಂಚಾಯತ್ ವತಿಯಿಂದ ಕಲ್ಚರ್ಪೆ ತ್ಯಾಜ್ಯ ಸಂಗ್ರಹ ಕೇಂದ್ರದಲ್ಲಿ ನಡೆಸಿರುವ ಕೆಲಸ ಕಾರ್ಯದಿಂದ ಇಂದಿಗೂ ಸ್ಥಳೀಯ ನೀರಿನ ತೋಡಿನಲ್ಲಿ ಕಸಗಳು ಬರುತ್ತಿದ್ದು, ಇಂದು ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ಕಲ್ಚರ್ಪೆ ಪರಿಸರದಲ್ಲಿ ನೆಲ ಸಮತಟ್ಟು ಮಾಡಿ ಯಂತ್ರಗಳನ್ನು ಅಳವಡಿಸುವುದಾಗಿ ಹೇಳಿ ಸಂಬಂಧಪಟ್ಟವರು ಇದುವರೆಗೂ ಬಂದಿಲ್ಲ ಎಂದು ಅವರು ಹೇಳಿದರು.

Related Posts

Leave a Reply

Your email address will not be published.