ಎಸೆಸೆಲ್ಸಿ ಫಲಿತಾಂಶ: ಕಡಬ ತಾಲೂಕಿನ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳಿಗೆ ಪೂರ್ಣ ಅಂಕ
ಕಡಬ : ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯಾದ ಕಡಬ ತಾಲೂಕಿನ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು 625 ರಲ್ಲಿ 625 ಅಂಕಗಳನ್ನು ಪಡೆಯುವ ಮೂಲಕ ಸಾಧನೆ ತೋರಿದ್ದಾರೆ.ಅನನ್ಯ.ಎಂ.ಡಿ ಮತ್ತು ವೆನಿಸಾ ಶೆರಿನಾ ಡಿಸೋಜಾ ಈ ಸಾಧನೆ ತೋರಿದ ವಿದ್ಯಾರ್ಥಿನಿಯರಾಗಿದ್ದು, ಲಾಕ್ ಡೌನ್ ನಿಂದಾಗಿ ಶಾಲೆ ಮುಚ್ಚಿ ಸರಿಯಾದ ರೀತಿಯ ತರಗತಿ ನಡೆಯದ ಸಮಯದಲ್ಲೂ ತನ್ನ ಪರಿಶ್ರಮದಿಂದಾಗಿ ಈ ಸಾಧನೆ ತೋರಿದ್ದಾರೆ.

ಆನ್ ಲೈನ್ ಕ್ಲಾಸ್ ನ ವ್ಯವಸ್ಥೆಯಿದ್ದರೂ, ಗ್ರಾಮೀಣ ಪ್ರದೇಶವಾದ ಕಾರಣ ಸರಿಯಾದ ನೆಟ್ವರ್ಕ್ ಇಲ್ಲದ ಕಾರಣ ಶಾಲೆಯ ಅಧ್ಯಾಪಕರು ವಿಡಿಯೋ ಮಾಡಿ ಮೊಬೈಲ್ ಗಳಿಗೆ ಕಳುಹಿಸುತ್ತಿದ್ದರು.ಇದನ್ನೇ ನೋಡಿ ಕಲಿತಿದ್ದು, ತಮ್ಮ ಸಾಧನೆಯ ಹಿಂದೆ ಶಾಲೆಯ ಅಧ್ಯಾಪಕರ ಪರಿಶ್ರಮವೂ ಇದೆ ಎನ್ನುವುದು ಈ ವಿದ್ಯಾರ್ಥಿನಿಯರ ಅಭಿಪ್ರಾಯವಾಗಿದೆ. ಅಲ್ಲದೆ ಪೋಷಕರೂ ಎಲ್ಲಾ ರೀತಿಯ ಸಹಕಾರ ನೀಡಿದ ಕಾರಣ ಈ ಸಾಧನೆ ತೋರಲು ಸಾಧ್ಯವಾಗಿದೆ.
ಒಂದು ಸಮಯದಲ್ಲಿ ಗ್ರೇಸ್ ಮಾರ್ಕ್ ನೀಡಿ ಪರೀಕ್ಷೆ ಫಲಿತಾಂಶ ಹೊರಬರಲಿದೆ ಎಂದು ತಿಳಿದಾಗ ತುಂಬಾ ಬೇಸರವಾಗಿತ್ತು. ಆದರೆ ಕೊನೆಗೆ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬಂದ ಬಳಿಕ ತಮ್ಮ ಪರಿಶ್ರಮದಿಂದ ಕಲಿತು ಪಾಸಾಗಿದ್ದೇವೆ ಎನ್ನುವ ಆತ್ಮವಿಶ್ವಾಸ ಬಂದಿದೆ ಎನ್ನುತ್ತಾರೆ ಅನನ್ಯ ಮತ್ತು ವೆನಿಸಾ ಶರಿನಾ ವಿದ್ಯಾರ್ಥಿಗಳು.

















