ನೆಲ್ಯಾಡಿ: ಪರವಾನಗಿ ಇಲ್ಲದೆ ಅಕ್ರಮ ಮರ ಸಾಗಾಟ ಪತ್ತೆ: ಲಾರಿ, ಮರ ಹಾಗೂ ಚಾಲಕ ವಶಕ್ಕೆ

ನೆಲ್ಯಾಡಿ: ಉಪ್ಪಿನಂಗಡಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಅಕ್ರಮ ಮರ ಸಾಗಾಟದ ವಿರುದ್ಧ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಮುಂದುವರಿಸಿದ್ದು, ಮಂಗಳವಾರ ರಾತ್ರಿ ನಡೆಸಿದ ವಿಶೇಷ ಗಸ್ತು ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ–75ರ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಪ್ರದೇಶದಲ್ಲಿ ಅಕ್ರಮವಾಗಿ ವಿವಿಧ ಕಾಡು ಜಾತಿಯ ಮರಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದೆ.

ಉಪ್ಪಿನಂಗಡಿ ಅರಣ್ಯ ವಲಯದ ಅಧಿಕಾರಿಗಳ ತಂಡ ರಾತ್ರಿ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಹಾಸನದ ಕಡೆಯಿಂದ ಬಂಟ್ವಾಳದತ್ತ ಸಾಗುತ್ತಿದ್ದ ಶಂಕಾಸ್ಪದ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದೆ. ಪರಿಶೀಲನೆಯ ಸಂದರ್ಭದಲ್ಲಿ ಲಾರಿಯಲ್ಲಿ ಯಾವುದೇ ಮಾನ್ಯ ಪರವಾನಗಿ ಇಲ್ಲದೆ ವಿವಿಧ ಕಾಡು ಜಾತಿಗೆ ಸೇರಿದ ಮರದ ದಿಮ್ಮಿಗಳನ್ನು ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಲಾರಿಯನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಲಾಗಿದೆ.

ಬಂಧಿತ ಚಾಲಕನನ್ನು ಸಕಲೇಶಪುರ ನಿವಾಸಿ ಕಾಂತ ಎಚ್.ಎಸ್.(48) ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ ವಿವಿಧ ಕಾಡು ಜಾತಿಯ ಮರದ ದಿಮ್ಮಿಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಯತೀಂದ್ರ ಅವರ ನೇತೃತ್ವದಲ್ಲಿ ಗಸ್ತು ವನಪಾಲಕರಾದ ವಿನಯ ಚಂದ್ರ, ಶಿವಾನಂದ ಕುದ್ರಿ, ವಾಹನ ಚಾಲಕ ಕಿಶೋರ್ ಹಾಗೂ ದಿನ ಕೂಲಿ ನೌಕರ ದಿನೇಶ್ ಭಾಗವಹಿಸಿದ್ದರು.

ಅರಣ್ಯ ಸಂಪತ್ತಿನ ರಕ್ಷಣೆಗೆ ಇಲಾಖೆ ಸದಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಅಕ್ರಮ ಮರ ಸಾಗಾಟ ಮತ್ತು ಅರಣ್ಯ ಅಪರಾಧಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ, ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಯುವ ಮರ ಕಳ್ಳತನ ಹಾಗೂ ಸಾಗಾಟವನ್ನು ತಡೆಯಲು ರಾತ್ರಿ–ಹಗಲು ಗಸ್ತು ತೀವ್ರಗೊಳಿಸಲಾಗಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ ಮನವಿ ಮಾಡಿದ್ದಾರೆ.

Related Posts

Leave a Reply

Your email address will not be published.