ಶ್ರದ್ಧೆ ಮತ್ತು ಆಸಕ್ತಿಯಿಂದ ನಿರಂತರವಾಗಿ ಅಭ್ಯಾಸ ಮಾಡಿ ಶಿಕ್ಷಣದಲ್ಲಿ ಸಾಧನೆ ಮಾಡಬೇಕು : ಪೂರಣ್ ವರ್ಮ
                                                ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀ ಪೂರಣ್ ವರ್ಮಾ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಬಿ.ಸೋಮಶೇಖರ ಶೆಟ್ಟಿ ಇವರು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಪೆರಾಜೆ ಮಾಣಿ ಬಂಟ್ವಾಳ ತಾಲೂಕು ಇದರ ವಿಸ್ತೃತ ನೂತನ ವಿದ್ಯಾಲಯಕ್ಕೆ ಶನಿವಾರ ಭೇಟಿ ನೀಡಿದರು.

ನೂತನ ಶಿಕ್ಷಣ ಸಂಸ್ಥೆಯ ವ್ಯವಸ್ಥೆಯಲ್ಲಿ ಆಧುನಿಕ ಸೌಲಭ್ಯದ ಬಗ್ಗೆ ಪರಿಶೀಲನೆ ನಡೆಸಿ ವಿವಿಧ ಮಾಹಿತಿಯನ್ನು ಪಡೆದುಕೊಂಡರು. ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಸಂಸ್ಥಾಪಕ ಆಡಳಿತ ಮಂಡಳಿಯ ಅಧ್ಯಕ್ಷ ಜೆ. ಪ್ರಹ್ಲಾದ ಶೆಟ್ಟಿ ಸ್ವಾಗತಿಸಿ ವಿವಿಧ ಸೌಕರ್ಯಗಳ ಬಗ್ಗೆ ಹೇಳಿದರು.
ಧರ್ಮಸ್ಥಳದ ಪೂರಣ್ ವರ್ಮ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶ್ರದ್ಧೆ ಮತ್ತು ಆಸಕ್ತಿಯಿಂದ ನಿರಂತರವಾಗಿ ಅಭ್ಯಾಸ ಮಾಡಿ ಶಿಕ್ಷಣದಲ್ಲಿ ಸಾಧನೆ ಮಾಡಬೇಕು ಎಂದು ಕಥೆಯ ಮೂಲಕ ಹಿತನುಡಿಗಳನ್ನಾಡಿದರು. ಶಾಲೆಯ ಪರಿಸರ, ಶಿಕ್ಷಣ ವ್ಯವಸ್ಥೆ , ವಿದ್ಯಾರ್ಥಿಗಳ ಶಿಸ್ತು ಹಾಗೂ ಆಡಳಿತ ಮಂಡಳಿಯವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಹೇಶ ಜೆ. ಶೆಟ್ಟಿಯವರು ತರಗತಿಗಳಲ್ಲಿ ಅಳವಡಿಸಿರುವ ಸ್ಮಾರ್ಟ್ ಕ್ಲಾಸಿನ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಎಲ್ಕೆಜಿ ಯಿಂದ ಆರಂಭಗೊಂಡು 10ನೇ ತರಗತಿ ವರೆಗೆ ವಿದ್ಯಾರ್ಥಿಗಳಿಗೆ ಆಟಿಕೆ , ವಿವಿಧ ಮಾದರಿಗಳ ಮೂಲಕ ಕಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಮಧ್ಯಾಹ್ನ ಬಿಸಿಯೂಟವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಶಾಲಾ ವ್ಯವಸ್ಥೆಗಳ ಬಗ್ಗೆ ವಿವರಿಸಿದರು. ವಿಶಾಲವಾದ ಕ್ರೀಡಾಂಗಣ , ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಸಭಾಂಗಣ, ಹಾಗೂ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿ ತರಗತಿ ಸೇರಿದಂತೆ 75 ಕ್ಕೂ ಹೆಚ್ಚು ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಆಶ್ರಯ ಅಜ್ರಿ, ಮುಖ್ಯ ಶಿಕ್ಷಕಿ ಹೇಮಲತಾ, ಶಿಕ್ಷಕಿ ಅಮಿತಾ, ಜಯಾನಂದ ಪೆರಾಜೆ ವೀಕ್ಷಣಾ ತಂಡದಲ್ಲಿದ್ದರು. ಬಾಲ ವಿಕಾಸ ಸಂಸ್ಥೆಯ ಶ್ರೀಮತಿ ನಮ್ರತಾ ರೈ, ಆಡಳಿತಾಧಿಕಾರಿ ರವೀಂದ್ರ ದರ್ಬೆ, ಮುಖ್ಯೋಪಾಧ್ಯಾಯಾಯಿನಿ ವಿಜಯಲಕ್ಷ್ಮೀ ಶೆಟ್ಟಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.


							
							
							














