ಬೀಚ್ ಬಳಿ ಅಪಾಯದ ಸೆಲ್ಫಿಯಾಟ: ಮೈಮರೆತವರಿಗೆ ಪಿಎಸ್ಐ ಪಾಠ!

ಕುಂದಾಪುರ: ಅರಶಿನಗುಂಡಿ ಜಲಪಾತ ವೀಕ್ಷಿಸುತ್ತಿದ್ದ ವೇಳೆ ಯುವಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾದ ಬೆನ್ನಲ್ಲೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ವಿಶ್ವಪ್ರಸಿದ್ದ ತ್ರಾಸಿ-ಮರವಂತೆ ಬೀಚ್ ಗೆ ಪ್ರವಾಸಿಗರು ಇಳಿಯದಂತೆ ಮುಂಜಾಗ್ರತ ಕ್ರಮವಾಗಿ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳು ಕೆಂಪು ಬಣ್ಣದ ರಿಬ್ಬನ್ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ. ಅಲ್ಲದೇ ಬೀಚ್ ಬಳಿ ಬಂದು ಸೆಲ್ಫಿ ಕ್ಲಿಕ್ಕಿಸುತ್ತಿರುವ ಪ್ರವಾಸಿಗರನ್ನು ಕರೆದು ಎಚ್ಚರಿಕೆ ನೀಡಿದ್ದಲ್ಲದೇ ವಾರದ ಹಿಂದೆ ನಡೆದ ದುರಂತವನ್ನು ವಿವರಿಸಿ ಯಾವುದೇ ಕಾರಣಕ್ಕೂ ರಿಬ್ಬನ್ ದಾಟಿ ಮುಂದೆ ಹೋಗದೆ ಎಚ್ಚರ ವಹಿಸುವಂತೆ ಖಡತ್ ಮಾತುಗಳನ್ನಾಡಿದ್ದಾರೆ.
ಒಂದೆಡೆ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಈ ನಡುವೆ ಪ್ರವಾಸಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಅಪಾಯದ ಅರಿವಾಗದೇ ನಿಷೇಧಿತ ಪ್ರದೇಶಗಳಲ್ಲಿ ಸಮುದ್ರಕ್ಕೆ ಇಳಿದು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಗದಗದ ಯುವಕನೋರ್ವ ಸೆಲ್ಫೀ ತೆಗೆಯುವುದಕ್ಕಾಗಿ ತೆರಳಿ ತ್ರಾಸಿ ಬೀಚ್ ನಲ್ಲಿ ಬಂಡೆಗಳ ಮೇಲೆ ಅಲೆಗಳು ಅಪ್ಪಳಿಸಿದ ಪರಿಣಾಮ ಜಾರಿ ಬಿದ್ದು ಮೃತಪಟ್ಟಿದ್ದರು.
ಅರಶಿನಗುಂಡಿ ದುರಂತದ ಬಳಿಕ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಸಾರ್ವಜನಿಕರು ಮತ್ತು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು, ಬೀಚ್, ನದಿ ಹಾಗು ಜಲಪಾತಗಳ ಬಳಿ ತೆರಳದಂತೆ ಮತ್ತು ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
