ಪ್ರತ್ಯೇಕತೆ ಕೆರಳಿಸಿದ ಆಯವ್ಯಯ
ಚುನಾವಣಾ ಪೂರ್ವ ಮಧ್ಯಾವಧಿ ಆಯವ್ಯಯ ಮಂಡನೆ ಆಗಿದೆ. ಸಂಸದ ಶಶಿ ತರೂರ್ ಪ್ರಕಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಅಂಕಿ ಅಂಶಗಳಿಗಿಂತ ಹೆಚ್ಚಾಗಿ ಗಿಲೀಟಿನ ಮಾಮೂಲಿ ಶಬ್ದಗಳದ್ದಾಗಿದೆ. ಈ ಮಾತನ್ನು ನಿರ್ಮಲಾರ ಗಂಡ ಪರಕಾಲ ಪ್ರಭಾಕರ್ ಅವರು ಬಿಜೆಪಿ ಸರಕಾರದ ಒಟ್ಟಾರೆ ಶಬ್ದಗಳ ಕಸರತ್ತು ಗಮನಿಸಿ ಹಿಂದೆಯೇ ಟೀಕಿಸಿದ್ದಾರೆ. ಬಜೆಟ್ ಮಂಡನೆ ವೇಳೆ ಸಂಸದರ ಹಾಜರಾತಿ ಕಡಿಮೆ ಇತ್ತು. ಗ್ಯಾಲರಿಯಲ್ಲಿ ನಿರ್ಮಲಾರ ಮಗಳು ವಂಗಮಯಿ ಪರಕಾಲ ಕುಳಿತಿದ್ದರು. ಇವರು ಅಮ್ಮನ ಕಡೆಗೋ ಅಪ್ಪನ ಕಡೆಗೋ ಗೊತ್ತಾಗಿಲ್ಲ. ಮನಶಾಸ್ತ್ರಜ್ಞರ ಪ್ರಕಾರ ಹೆಣ್ಣು ಮಕ್ಕಳು ಅಪ್ಪನ ಬಾಲ ಹಿಡಿದರೆ, ಗಂಡು ಮಕ್ಕಳು ಅಮ್ಮನ ಸೆರಗು ಹಿಡಿದಿರುತ್ತವಂತೆ. ಈಗ ಸೆರಗಿನ ಬದಲು ವೇಲ್ ಹಿಡಿದಿರುತ್ತಾರೆ.
ಬಜೆಟ್ ಮಂಡನೆಯ ಬೆನ್ನಿಗೆ ಕರ್ನಾಟಕದ ಸಂಸದ ಡಿ. ಕೆ. ಸುರೇಶ್ ಅವರು ದಿಲ್ಲಿಯಲ್ಲಿ ಪತ್ರಕರ್ತರ ಜೊತೆಗೆ ಬಿರುಸಾಗಿ ಮಾತನಾಡಿದ್ದಾರೆ. ಒಕ್ಕೂಟ ಸರಕಾರವು ತೆಂಕಣ ರಾಜ್ಯಗಳಿಂದ ಸಂಗ್ರಹಿಸುವ ತೆರಿಗೆಯಲ್ಲಿ ಸರಿಯಾದ ಪಾಲನ್ನು ಹಿಂತಿರುಗಿಸದೆ ಗುಜರಾತ್ ಮೊದಲಾದ ರಾಜ್ಯಗಳಿಗೆ ಹಂಚುತ್ತಿದೆ. ಹೀಗಾದರೆ ದಕ್ಷಿಣ ಭಾರತೀಯರು ಪ್ರತ್ಯೇಕ ರಾಜ್ಯ ಕೇಳುವ ಅನಿವಾರ್ಯ ಪರಿಸ್ಥಿತಿ ಉಂಟಾಗಬಹುದು ಎಂದರು. ಡಿ. ಕೆ. ಸುರೇಶ್ ಪ್ರತ್ಯೇಕ ರಾಜ್ಯ ಕೇಳಿದರು ಎಂದೇ ಇದನ್ನು ಬಹುತೇಕರು ವರದಿ ಮಾಡಿದ್ದಾರೆ. ಸುರೇಶ್ ಆತಂಕಕ್ಕೆ ಕಾರಣವೂ ಇದೆ. ಅರ್ಧ ತಿಂಗಳ ಹಿಂದೆ ಪ್ರಧಾನಿಯವರು ಬೆಂಗಳೂರಿಗೆ ಬಂದಿದ್ದಾಗ ಮುಖ್ಯಮಂತ್ರಿಗಳು ಅವರಿಗೆ ಹಣಕಾಸು ತಾರಮ್ಮಯ್ಯದ ಬಗೆಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ನಿಮ್ಮ ಐಟಿ ಸೆಲ್ ಅಲ್ಲ, ನೀವೇ ಉತ್ತರಿಸಬೇಕು ಎಂದು ಪ್ರಧಾನಿಯವರನ್ನು ಕೇಳಿದ್ದರು. ಆದರೆ ಪ್ರಧಾನಿಯವರು ಬೆಂಗಳೂರು ರೋಡ್ ಶೋ ರದ್ದು ಮಾಡಿ ಚೆನ್ನೈನಲ್ಲಿ ರೋಡ್ ಶೋ ನಡೆಸಿದ್ದರು. ಇದಕ್ಕೆ ಏನು ಅರ್ಥ?
ಭಾರತದ ಎಲ್ಲ ಕಡೆ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಎದ್ದಿದೆ, ತಣ್ಣಗಾಗಿದೆ. ನಮ್ಮ ಸಂವಿಧಾನವು ಒಕ್ಕೂಟ ಸರಕಾರ ಎಂದರೂ ಅದನ್ನು ಎಲ್ಲ ಪಕ್ಷಗಳೂ ಕೇಂದ್ರೀಕೃತ ಮಾಡಿಕೊಂಡಿವೆ. ವಿಭಿನ್ನ ಸಂಸ್ಕೃತಿ, ವಿಭಿನ್ನ ಜನಾಂಗ, ಕೇಂದ್ರದಿಂದ ಅನ್ಯಾಯ ಇವೆಲ್ಲ ಪ್ರತ್ಯೇಕ ರಾಜ್ಯ ಎಂಬ ಕೂಗಿನಲ್ಲಿ ಇರುತ್ತವೆಯೇ ಹೊರತು ಅವು ಆ ಪ್ರದೇಶಗಳಲ್ಲಿ ಆಳವಾಗಿ ಕಂಡುಬಂದುದಿಲ್ಲ. ತೆಂಕಣ ಭಾರತದಲ್ಲಿ ದ್ರಾವಿಡ ದೇಶದ ಕೂಗು ಇತ್ತು. ಅದು ಸ್ವಾತಂತ್ರ್ಯ ಸಿಕ್ಕ ಮೇಲೂ ಕೆಲ ಕಾಲ ಇತ್ತು. ದ್ರಾವಿಡ ಪಕ್ಷಗಳೇ ಅಧಿಕಾರಕ್ಕೆ ಬರತೊಡಗಿದ ಮೇಲೆ ಪ್ರತ್ಯೇಕ ದೇಶದ ಕೂಗು ಬಿದ್ದು ಹೋಗಿದೆ. ನಕ್ಸಲ್ ಚಳವಳಿಗಾರರು ದೇಶದ ಬುಡಕಟ್ಟು ಜನಾಂಗದವರ ಪ್ರತ್ಯೇಕ ದೇಶ ಬೇಕು ಎಂದದ್ದಿದೆ. ಅದು ಸಹ ಕಷ್ಟ, ಏಕೆಂದರೆ ಬುಡಕಟ್ಟು ಜನರು ದೇಶದಲ್ಲಿ ಹರಿಹಂಚಿ ಹೋಗಿದ್ದಾರೆ. ಈಶಾನ್ಯ ಭಾರತ ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತೆಯ ಕೂಗು ತುಂಬ ಹಳೆಯದು. ಅವೂ ಈಗ ಅಡಗಿವೆ.
ತುಳುನಾಡು, ಕೊಡವನಾಡು, ವಿದರ್ಭ, ಪೂರ್ವಾಂಚಲ, ಹರಿತ್ ರಾಜ್ಯ ಮೊದಲಾದ ರಾಜ್ಯಗಳ ಬೇಡಿಕೆಗಳು ದೇಶದಲ್ಲಿ ಇವೆ. ಇವು ಕೆಲವರ ಬಾಯಲ್ಲಿ ಪ್ರತ್ಯೇಕ ರಾಜ್ಯ ಆಗದಿದ್ದರೆ ಪ್ರತ್ಯೇಕ ದೇಶ ಎಂದು ಹೇಳಿಸಿದ್ದೂ ಇದೆ. ಕೊಡವರು ದಿಲ್ಲಿಯಲ್ಲೂ ಈ ಬಗೆಗೆ ಹಕ್ಕೊತ್ತಾಯ ಮಾಡಿದ್ದಿದೆ. ಕಾಶ್ಮೀರ ಪ್ರತ್ಯೇಕ ರಾಜ್ಯದ ಬೇಡಿಕೆ ಈಗ ಘನೀಕರಿಸಲ್ಪಟ್ಟಿದೆ. ಅಲ್ಲಿನ ಮುಖ್ಯ ಸಮಸ್ಯೆ ಕಾಶ್ಮೀರದ ಒಂದು ಭಾಗ ಭಾರತದಲ್ಲಿ ಇನ್ನೊಂದು ಭಾಗ ಪಾಕಿಸ್ತಾನದಲ್ಲಿ ಇರುವುದು. ಒಪ್ಪಂದದ ಪ್ರಕಾರ ಕಾಶ್ಮೀರ ಭಾರತದ ಒಕ್ಕೂಟ ಸೇರಿದಾಗ ಶೇಖ್ ಅಬ್ದುಲ್ಲಾರನ್ನು ಪ್ರಧಾನಿ ಎಂದೇ ಕರೆಯುತ್ತಿದ್ದರು. ಇಂದಿರಾ ಗಾಂಧಿಯವರು ಆ ಪರಿಸ್ಥಿತಿ ಬದಲಿಸಿ ಅವರನ್ನು ಮುಖ್ಯಮಂತ್ರಿ ಮಾಡಿದ್ದರು. ಈಗ ಅಲ್ಲಿ ಸರಕಾರವೇ ಇಲ್ಲದ ಸ್ಥಿತಿ, ಚುನಾವಣೆ ನಡೆಯಬೇಕು.
ಲೋಕ ಸಭೆ ಚುನಾವಣೆ ಜೊತೆಗೆ ಜಮ್ಮು ಕಾಶ್ಮೀರದ ಚುನಾವಣೆ ನಡೆಯುತ್ತದೆ. ಆದರೆ ವಿಧಾನ ಸಭೆ ಚುನಾವಣೆ ನಡೆಯುವುದು ಇನ್ನೂ ಅನುಮಾನ. ಈಶಾನ್ಯ ಭಾರತದ ಏಳೂ ರಾಜ್ಯಗಳಲ್ಲಿ ಪ್ರತ್ಯೇಕತೆಯ ಕೂಗು ಇತ್ತು. ಅದು ವ್ಯಾಪಕವಾಗಿರಲಿಲ್ಲ. ಈಗ ತಣ್ಣಗಾಗಿದೆ. ಅವುಗಳಲ್ಲಿ ಪ್ರತ್ಯೇಕತೆ ಬಯಸಿದ್ದ ನಾಗಾಲ್ಯಾಂಡು ವಿಧಾನ ಸಭೆಯಲ್ಲೂ ಹಲವು ಬಾರಿ ನಾಗಾಲಿಮ್ ವಿಸ್ತೃತ ನಾಡು ಎಂದಿತ್ತು. ಈಗ ರಾಜ್ಯ ಎಂದು ನಿಂತಿದೆ. ನಾಗಾಲಿಮ್ ಎಂಬುದು ಅಸ್ಸಾಂ, ಮಣಿಪುರ ಮಾತ್ರವಲ್ಲ ಮ್ಯಾನ್ಮಾರ್ ದೇಶದ ಕೆಲವು ಭಾಗಗಳನ್ನೂ ಒಳಗೊಂಡುದಾಗಿದೆ. ಮಣಿಪುರ, ಅರುಣಾಚಲ ಪ್ರದೇಶಗಳಲ್ಲೂ ಪ್ರತ್ಯೇಕತೆಯ ಕೂಗು ಈಗ ತಣ್ಣಗಾಗಿದೆ. ದೇಶದ ಅತಿ ದೊಡ್ಡ ಬುಡಕಟ್ಟು ನಮ್ಮ ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಂತಾಲ ಬುಡಕಟ್ಟು. ಅಸ್ಸಾಂನಿಂದ ಒಡಿಶಾವರೆಗೆ ಹರಡಿರುವ ಸಂತಾಲರು ಪ್ರತ್ಯೇಕ ನಾಡು, ರಾಜ್ಯ ಎಂದು ಕೊನೆಗೆ ಹೋರಾಟ ಕೈಚೆಲ್ಲಿದರು. ಬೋಡೋಲ್ಯಾಂಡ್, ಗೂರ್ಖಾಲ್ಯಾಂಡ್ ಈ ಎಲ್ಲ ಹೋರಾಟಗಳು ಈಗ ಸಂಘಗಳ ಮಟ್ಟಿನದಾಗಿವೆ ಹೊರತು ಸಂಘಟನೆಯ ಮಟ್ಟದ್ದಲ್ಲ. ಬಜೆಟ್ ಇವರಿಗೆಲ್ಲ ನ್ಯಾಯ ಸಲ್ಲಿಸಿಲ್ಲ ಎಂಬುದು ಡಿ. ಕೆ. ಸುರೇಶ್ ಮಾತಿನ ತಾತ್ಪರ್ಯ.
ಬಜೆಟ್ ಹಲವು ನಾಮಗಳನ್ನು ಒಳಗೊಂಡ 11,11,111 ಕೋಟಿ ರೂಪಾಯಿಯದು. ಇದರಲ್ಲಿ ರೂಪಾಯಿಗೆ 20 ಪೈಸೆ ಎಂದರೆ 3 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯುವ ಹೇಳಿಕೆಯ ಬಜೆಟ್ ಇದು. ಅಷ್ಟೇ ಅಲ್ಲ ಭಾರತದ ಸದ್ಯದ ವಿದೇಶೀ ಸ್ವದೇಶಿ ಸಾಲ ಬೆಟ್ಟದಷ್ಟಿದೆ. ನಮ್ಮ ಆದಾಯದಲ್ಲಿ ರೂಪಾಯಿಗೆ 20 ಪೈಸೆ ಬಡ್ಡಿ ಕಟ್ಟುವುದಕ್ಕೇ ಆಗುತ್ತಿದೆ. ಅದು ಸಹ 3 ಲಕ್ಷ ಕೋಟಿ ರೂಪಾಯಿಯಷ್ಟು ಆಗುತ್ತದೆ. ಕಳೆದ ಬಾರಿ ಮಂಡಿಸಿದ ಬಜೆಟ್‍ನಂತೆ ಕೊರತೆ ಬಜೆಟ್‍ನ 5.9 ಶೇಕಡಾ ಇತ್ತು, ಅದನ್ನು 5.1 ಶೇಕಡಾಕ್ಕೆ ಇಳಿಸುವುದಾಗಿ ಹೇಳಲಾಗಿದೆ. ಕಳೆದ ಬಜೆಟ್ ಅವಧಿಯ ಕೊನೆಯ ಹೊತ್ತಿಗೂ ಭರ್ತಿಯಾಗದ ಕೊರತೆ ಇನ್ನು ಭರ್ತಿ ಆಗುತ್ತದೆಯೇ? ಬಡವರು, ಮಹಿಳೆಯರು, ಯುವ ಜನಾಂಗ, ರೈತರು ಕಂಬಗಳು ಎಂದು ಹೇಳಲಾಗಿದೆ. ಆದರೆ ತಜ್ಞರ ಪ್ರಕಾರ ಇದು ಉದ್ಯಮ ಪರ ಬಜೆಟ್. ರೈತರಿಗೆ ವಾರ್ಷಿಕ ನೀಡಿಕೆಯಲ್ಲಿ 65 ಕೋಟಿ ರೂಪಾಯಿ ಕತ್ತರಿಸಲಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಹಣ 6.10 ಲಕ್ಷ ಕೋಟಿ ತೆಗೆದಿಡಲಾಗಿದೆ. ಬಜೆಟ್‍ನಲ್ಲಿ ತೆಗೆದಿಡುವುದು ಎಂದರೆ ಬರೆದಿಡುವುದು ಅಷ್ಟೆ.
3 ಲಕ್ಷ ಲಕ್‍ಪತಿ ಅಕ್ಕಂದಿರನ್ನು ತಯಾರಿಸುವ, ಈಗಾಗಲೇ 1 ಲಕ್ಷ ಲಕ್‍ಪತಿ ದೀದಿಯರನ್ನು ತಯಾರು ಮಾಡಿರುವುದಾಗಿ ಹೇಳಲಾಗಿದೆ. ತಮಗೇನಾದರೂ ಲಕ್ ಇದೆಯೇ ಎಂಬುದು ತಂಗಿಯರ ಕೇಳ್ಕೆ. ಹಳ್ಳಿ ಪ್ರದೇಶದ ಮಹಿಳಾ ಸಣ್ಣ ಉದ್ಯಮಿಗಳಿಗೆ ಪೆÇ್ರೀತ್ಸಾಹದ ಮಾತು ಇದೆ. ಎಪ್‍ಡಿಐ- ವಿದೇಶೀ ಬಂಡವಾಳ ಹೂಡಿಕೆ ಹಿಂತೆಗೆತ ನಡೆದಿದೆ. ಆದ್ದರಿಂದ ಬಜೆಟ್‍ನಲ್ಲಿ ಎಫ್‍ಡಿಐಗೆ ಮೊದಲು ಭಾರತದ ಅಭಿವೃದ್ಧಿ ಎಂದು ಹೊಸ ಅರ್ಥ ನೀಡಲಾಗಿದೆ. ಜಿಡಿಪಿ ಹೇಳಿಕೆ ಮೀರಿ ಏರದ್ದರಿಂದ ಅದಕ್ಕೂ ಹೊಸದಾಗಿ ಆಡಳಿತ, ಅಭಿವೃದ್ಧಿ, ಕಾರ್ಯ ಸಾಧನೆ ಎಂದೆಲ್ಲ ಅರ್ಥ ಕೊಡಲಾಗಿದೆ. ಉತ್ತರ ಪ್ರದೇಶದ ಮಾಜೀ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್, ಮಹಾರಾಷ್ಟ್ರದ ಮಾಜೀ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಇದು ಮೋದಿ ಸರಕಾರದ ಅಂತಿಮ ಬಜೆಟ್ ಎಂದು ವರ್ಣಿಸಿದ್ದಾರೆ. ನಿರ್ಮಲಾರು 59 ನಿಮಿಷಗಳ ಅತಿ ಕಡಿಮೆ ಅವಧಿಯ ಬಜೆಟ್ ಓದಿ ಮುಗಿಸುತ್ತಲೇ ಮೋದಿಯವರು ತಾನೇ ಎದ್ದು ಹೋಗಿ ಅಭಿನಂದಿಸಿದ್ದಾರೆ. ಬಿಜೆಪಿ ನಾಯಕರುಗಳು ಇದು ನಮ್ಮನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಬಜೆಟ್ ಎಂದಿದ್ದಾರೆ.
ಬರಹ: ಪೇರೂರು ಜಾರು