ಚೊಕ್ಕಬೆಟ್ಟು ಮಾಹಿತಿ ಮತ್ತು ನಾಗರಿಕ ಕೇಂದ್ರದ 15 ನೇ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಸನ್ಮಾನ

ಸುರತ್ಕಲ್‌: ಸುರತ್ಕಲ್: ಚೊಕ್ಕಬೆಟ್ಟು ಮಾಹಿತಿ ಮತ್ತು ನಾಗರಿಕ ಕೇಂದ್ರದ 15 ನೇ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆದಿತ್ಯವಾರ ಸಂಜೆ ಕಚೇರಿ ಮುಂಭಾಗದಲ್ಲಿ ಜರುಗಿತು.

ಉದ್ಘಾಟನೆ ನೆರವೇರಿಸಿ ಮಾತಾಡಿದ ಅಬ್ದುಲ್ ಅಝೀಝ್ ದಾರಿಮಿ ಅವರು, “ಮಾದಕ ದ್ರವ್ಯ ಮುಕ್ತ ಸ್ವಸ್ಥ ಸಮಾಜದ ನಿರ್ಮಾಣವಾಗಬೇಕು. ಇದಕ್ಕಾಗಿ ಜಾತಿ ಪಂಗಡ ಮರೆತು ಒಗ್ಗೂಡಬೇಕು. ಮಾದಕ ದ್ರವ್ಯ, ಮದ್ಯಪಾನದಂತಹ ದುಷ್ಚಟಗಳಿಂದ ನಾವು ನಮ್ಮ ಮನೆಯ ಮಕ್ಕಳನ್ನು ದೂರವಿಡಬೇಕು. ನಾವು ಹೊರಗಿನ ಆಹಾರವನ್ನು ಸೇವಿಸುವ ಮೂಲಕ ರೋಗಿಗಳಾಗುತ್ತಿದ್ದೇವೆ. ನಾವು ಸಾಧ್ಯವಿದ್ದಷ್ಟು ಮನೆಯಲ್ಲೇ ಆಹಾರ ಪದಾರ್ಥ ತಯಾರಿಸಿ ತಿನ್ನಬೇಕು. ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಐಷಾರಾಮಿ ಜೀವನ ಸಾಗಿಸುವ ಬದಲು ದುಡಿದು ಕಷ್ಟಪಟ್ಟು ತಿನ್ನಬೇಕು. ಆಗ ಮಾತ್ರ ಸಮಾಜಕ್ಕೆ ಒಳಿತಾಗುತ್ತದೆ. ಹರೇಕಳ ಹಾಜಬ್ಬರಂತೆ ಎಲ್ಲರಿಗೂ ಸಾಧನೆ ಮಾಡಲು ಸಾಧ್ಯವಿದೆ. ಅಕ್ಷರ ಜ್ಞಾನವಿಲ್ಲದಿದ್ದರೂ ತನ್ನ ಸುತ್ತಲಿನ ಸಮಾಜಕ್ಕೆ ಅಕ್ಷರವನ್ನು ಕಲಿಸಿದ ಹಾಜಬ್ಬರು ನಮಗೆ ಮಾದರಿಯಾಗಬೇಕು. ದುಂಧುವೆಚ್ಚ, ಮಾದಕ ದ್ರವ್ಯ ವ್ಯಸನದಿಂದ ಮುಕ್ತರಾಗಿ ಯುವಜನತೆ ಶಿಕ್ಷಣ ಪಡೆದು ಇಲ್ಲಿಯೇ ದುಡಿಯುವತ್ತ ಯೋಚಿಸಬೇಕಿದೆ“ ಎಂದರು.


ಬಳಿಕ ಮಾತಾಡಿದ ಎಸ್ ಡಿಪಿಐ ರಾಜ್ಯಸಮಿತಿ ಸದಸ್ಯ ಅಥಾವುಲ್ಲ ಜೋಕಟ್ಟೆ “ಮಾಹಿತಿ ಕೇಂದ್ರ ಕರ್ನಾಟಕದಲ್ಲೇ ಮೊದಲ ಬಾರಿ ಇಲ್ಲಿ ಪ್ರಾರಂಭವಾಗಿ ಕಳೆದ 15 ವರ್ಷಗಳಲ್ಲಿ ಸಮಾಜಕ್ಕೆ ಬೇಕಾದ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಸಾರ್ಥಕ 15 ವರ್ಷಗಳ ಸೇವೆಯನ್ನು ಸಮಾಜಕ್ಕೆ ನೀಡಿದೆ. ವಿದ್ಯಾರ್ಥಿಗಳಿಗೆ, ಸಮಾಜದ ಹಿರಿಯರಿಗೆ, ಉದ್ಯೋಗಿಗಳಿಗೆ, ಮಹಿಳೆಯರಿಗೆ ಅನೇಕ ಮಾಹಿತಿಯನ್ನು ನೀಡಿದೆ. ಉಸ್ತಾದ್ ಅವರು ಹೇಳಿದಂತೆ ಅಮಲು ಪದಾರ್ಥ ಇಂದು ನಮ್ಮ ಸಮಾಜಕ್ಕೆ ಬಹುದೊಡ್ಡ ಶತ್ರುವಾಗಿದೆ. ಇದನ್ನು ಈಗಿಂದೀಗಲೇ ತಡೆಯಲು ಪ್ರತೀ ಮನೆಯಲ್ಲೂ ಪೋಷಕರು ಮುಂದಾಗಬೇಕು. ಮಕ್ಕಳ ಚಲನವಲನ ಕುರಿತು ನಿಗಾ ಇರಿಸಬೇಕು. ಪ್ರತೀ ಮನೆಯಲ್ಲಿ ಒಬ್ಬ ಸರಕಾರಿ ನೌಕರ ಇರಬೇಕು ಎನ್ನುವ ನಿಟ್ಟಿನಲ್ಲಿ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪೀಸಬೇಕು. ನಮ್ಮ ಮಕ್ಕಳನ್ನು ಆಡಳಿತ ಯಂತ್ರದಲ್ಲಿ ಸೇರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು“ ಎಂದರು.

ಮಾಹಿತಿ ಹಾಗೂ ನಾಗರೀಕ ಸೇವಾ ಕೇಂದ್ರದ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟ ಅಧ್ಯಕ್ಷತೆ ವಹಿಸಿದ್ದರು.
ಚೊಕ್ಕಬೆಟ್ಟು ಚರ್ಚ್ ಧರ್ಮಗುರು ಎಸ್.ಪಾಲನ್, ಶಂಶಾದ್ ಅಬೂಬಕರ್, ತಣ್ಣೀರುಬಾವಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್, ಮುಹಮ್ಮದ್ ಅಲಿ ರೂಮಿ, ಮುಸ್ಲಿಂ ಜಮಾಅತ್ ಪಣಂಬೂರು ಇದರ ಅಧ್ಯಕ್ಷ ಎಸ್.ಎ.‌ರಹ್ಮತುಲ್ಲಾ, ಮುಹಮ್ಮದ್ ಕಾನ, ಜುಮಾ‌ ಮಸೀದಿ ಸುರತ್ಕಲ್ ಇದರ ಅಧ್ಯಕ್ಷ ಎಸ್.ಕೆ. ಮುಸ್ತಫಾ, ಝಾಕಿರ್, ಇಬ್ರಾಹಿಂ, ತೌಸೀಫ್ ಕಕ್ಕಿಂಜೆ, ಜಾಫರ್ ಫೈಝಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ, ಪಬ್ಲಿಕ್ ಅಡ್ವೈಸರ್ ಎಂ.ಜಿ.‌ ತಲ್ಹತ್,‌ ವಿಶ್ವಕಪ್ ವಿಜೇತೆ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮಿ, ಸಿಎ ಫಾಯಿಜ್, ಬೆನಝಿರ್, ಕುಸ್ತಿ ಕ್ರೀಡಾಪಟು ಫಾಹಿಮ್, ಹಿಷಾಮ್ ಅವರನ್ನು ಸನ್ಮಾನಿಸಲಾಯಿತು.

Related Posts

Leave a Reply

Your email address will not be published.