ಪರಿಸರ ಉಳಿವಿಗಾಗಿ ಬಂಡವಾಳ ಶಾಹಿ ಪದ್ಧತಿ ನಾಶವಾಗುವುದು ತುರ್ತಿನ ಅವಶ್ಯಕತೆ : ಡಾ.ರಾಜೇಂದ್ರ ಉಡುಪ

ಜಾಗತಿಕ ಮಟ್ಟದಲ್ಲಿ ಪರಿಸರ ಸಮಸ್ಯೆ ತೀರಾ ಉಲ್ಬಣಗೊಂಡಿದೆ.ಪರಿಸರ ನಾಶಕ್ಕೆ ಬಂಡವಾಳಶಾಹಿ ವ್ಯವಸ್ಥೆ ದೊಡ್ಡ ಕೊಡುಗೆ ನೀಡಿದೆ.ಜಗತ್ತಿಗೆ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೆರಿಕ ಯುದ್ದ ಇಲ್ಲದೆ ಒಂದು ಕ್ಷಣವೂ ಬದುಕುವುದಿಲ್ಲ. ಅಮೆರಿಕದ ಮಿಲಿಟರಿ ವರ್ಷಕ್ಕೆ 2.5 ಬಿಲಿಯನ್ ಟನ್ ತೈಲ ಉಪಯೋಗಿಸುತ್ತಿದೆ.ಒಂದು ಯುದ್ದ ನೌಕೆ ಗಂಟೆಗೆ ಒಂದೂವರೆ ಲಕ್ಷ ಲೀಟರ್ ತೈಲ ಉಪಯೋಗಿಸಿದರೆ, ಯುದ್ದ ವಿಮಾನ ಗಂಟೆಗೆ ಅರ್ಧ ಲಕ್ಷ ಲೀಟರ್ ತೈಲ ಉಪಯೋಗಿಸುತ್ತದೆ. ಇವೆಲ್ಲಾವೂ ಅಸಂಖ್ಯಾತ ಮಟ್ಟದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಅಮೆರಿಕದ ರಕ್ಷಣಾ ವಿಭಾಗ ವರ್ಷಕ್ಕೆ 5 ಲಕ್ಷ ಟನ್ ವಿಷ ತ್ಯಾಜ್ಯಗಳನ್ನು ಉತ್ಪಾದಿಸುತ್ತದೆ.ಒಟ್ಟಿನಲ್ಲಿ ಅಮೆರಿಕನ್ ಸಾಮ್ರಾಜ್ಯ ಶಾಹಿಗಳಾಗಲೀ, ಬಂಡವಾಳಶಾಹಿ ವ್ಯವಸ್ಥೆಯಾಗಲೀ ನಾಶವಾಗದೆ ಪರಿಸರ ಉಳಿಸಲು ಸಾಧ್ಯವಿಲ್ಲ ಎಂದು ಹಿರಿಯ ಮಾರ್ಕ್ಸ್ ವಾದಿ ಚಿಂತಕರಾದ ಡಾ. ಕೆ.ರಾಜೇಂದ್ರ ಉಡುಪರವರು ಅಭಿಪ್ರಾಯಪಟ್ಟರು.

ಇಂದು ಮಂಗಳೂರಿನ ಬೋಳಾರದ AKG ಭವನದಲ್ಲಿ ಜರುಗಿದ CPIM ದ. ಕ.ಜಿಲ್ಲಾ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸುತ್ತಾ ಅವರು ಈ ಮಾತುಗಳನ್ನು ಹೇಳಿದರು.

ಮುಂದುವರಿಸುತ್ತಾ ಅವರು, ಜಾಗತಿಕ ಬಂಡವಾಳಶಾಹಿಯ ಯಜಮಾನಿಕೆ ವಹಿಸಿದ ಅಮೆರಿಕದ ಸಾಮ್ರಾಜ್ಯಶಾಹಿಯು ದಿನದಿಂದ ದಿನಕ್ಕೆ ಕ್ರೂರಿಯೂ ಅಮಾನುಷವಾಗಿ ವರ್ತಿಸುತ್ತಿದೆ. ಸೋವಿಯತ್ ಒಕ್ಕೂಟ ಮತ್ತು ಸಮಾಜವಾದಿ ದೇಶಗಳನ್ನು ಸದೆಬಡಿಯಲೆಂದೇ ಹುಟ್ಟಿಕೊಂಡ ನ್ಯಾಟೋ ಕೂಟ ಜಗತ್ತಿನಲ್ಲೇ ಅತ್ಯಂತ ದೊಡ್ಡ ಭಯೋತ್ಪಾದಕ ಸಂಘವಾಗಿದೆ.ಇಂತಹ ಸಾಮ್ರಾಜ್ಯಶಾಹಿಗಳು ಜಗತ್ತಿನಲ್ಲಿ ಕಮ್ಯುನಿಷ್ಟರನ್ನು ಕಂಡು ಹೆದರುವಂತಾಗಿದೆ. ಅಮೆರಿಕದ ಕಾಲಬುಡದಲ್ಲಿರುವ ಅನೇಕ ದೇಶಗಳಲ್ಲಿ ಎಡಪಂಥೀಯ ಪಕ್ಷಗಳು ಅಧಿಕಾರಕ್ಕೇರಿದೆ. ಭಾರತದ ರಾಜಕಾರಣದಲ್ಲೂ ಕಮ್ಯುನಿಸ್ಟರು ಚಾರಿತ್ರಿಕ ಪಾತ್ರವನ್ನು ವಹಿಸಿದ್ದಾರೆ. ಅಂತಹ ಕಮ್ಯುನಿಸ್ಟರಿಗಿರುವ ವೈಜ್ಞಾನಿಕ ತತ್ವಜ್ಞಾನದ ತಳಹದಿ ಯಾವ ರಾಜಕೀಯ ಪಕ್ಷಕ್ಕೂ ಇಲ್ಲ.ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ದೇಶದೆಲ್ಲೆಡೆ ನಡೆಯುತ್ತಿರುವ ಜನಚಳುವಳಿ ಜನಸಮುದಾಯಕ್ಕೆ ಆಶಾಕಿರಣವಾಗಿ ಹೊರಹೊಮ್ಮುತಿದ್ದು,ದ ಕ ಜಿಲ್ಲೆಯಲ್ಲೂ ಬಲಿಷ್ಠ ಕಮ್ಯೂನಿಸ್ಟ್ ಚಳುವಳಿಯನ್ನು ಬೆಳೆಸಲು ಈ ಅಧ್ಯಯನ ಶಿಬಿರವು ಮುನ್ನುಡಿಯಾಗಬೇಕೆಂದು ಎಂದು ಆಶಯ ವ್ಯಕ್ತಪಡಿಸಿದರು.

ಪ್ರಾರಂಭದಲ್ಲಿ CPIM ಹಿರಿಯ ನಾಯಕರಾದ ಸುಂದರ ಶೆಟ್ಟಿ ಮೂಡಬಿದ್ರಿಯವರು ಕೆಂಬಾವುಟವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು. ಮಾತ್ರವಲ್ಲದೆ ಪಕ್ಷಕ್ಕೆ ಅಪಾರ ಕೊಡುಗೆ ನೀಡಿದ ಸುಂದರ ಶೆಟ್ಟಿ ಮೂಡಬಿದ್ರಿಯವರನ್ನು ಕಾರ್ಯಕ್ರಮದಲ್ಲಿ ಹೃದಯಪೂರ್ವಕವಾಗಿ ಗೌರವಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು CPIM ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿಯವರು ವಹಿಸಿದ್ದರು. ವೇದಿಕೆಯಲ್ಲಿ CPIM ರಾಜ್ಯ ಸಮಿತಿ ಸದಸ್ಯರಾದ ವಸಂತ ಆಚಾರಿ,ಮುನೀರ್ ಕಾಟಿಪಳ್ಳರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ನಿರ್ವಹಿಸಿದರು.

Related Posts

Leave a Reply

Your email address will not be published.