ಗಂಟಾಲ್ ಕಟ್ಟೆಯಲ್ಲಿ ಅನಧಿಕೃತ ಕಸಾಯಿಖಾನೆ : ಪೊಲೀಸರಿಂದ ದಾಳಿ, 50 ಕೆ. ಜಿ ಮಾಂಸ, 2 ಕಾರು ವಶಕ್ಕೆ

ಮೂಡುಬಿದಿರೆ : ಗಂಟಾಲ್ ಕಟ್ಟೆಯಲ್ಲಿ ನಡೆಯುತ್ತಿದ್ದ ಅನಧಿಕೃತ ಕಸಾಯಿಖಾನೆಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ ನೇತೃತ್ವದ ತಂಡವು ದಾಳಿ ನಡೆಸಿ ಸುಮಾರು 50 ಕೆ.ಜಿ ದನದ ಮಾಂಸ, ಪರಿಕರಗಳು ಹಾಗೂ 2 ಕಾರುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ನಡೆದಿದೆ.

ಗಂಟಾಲ್ ಕಟ್ಟೆಯ ಜಲೀಲ್ ಎಂಬವನ ಮನೆಯ ಹಿಂಭಾಗದ ಗುಡ್ಡೆಯ ಕಾಡಿನಲ್ಲಿ ಹಸುವನ್ನು ಕಡಿದು ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಅಪರಾಧ ವಿಭಾಗದ ಸಿಬ್ಬಂಧಿಗಳಾದ ಪಿ.ಎಸ್.ಐ ಕೃಷ್ಣಪ್ಪ, ಅಖಿಲ್ ಅಹಮ್ಮದ್, ನಾಗರಾಜ್ ರವರು ದಾಳಿ ಮಾಡಿದಾಗ ಅಲ್ಲಿ ದನವನ್ನು ಕಡಿದು ಮಾಂಸವನ್ನು ಮಾಡುತ್ತಿದ್ದುದು ಗಮನಕ್ಕೆ ಬಂದಿರುತ್ತದೆ. ಅಲ್ಲದೆ ಸ್ಥಳದಲ್ಲಿದ್ದ ಕಡಿಯಲು ಕದ್ದು ತಂದಿದ್ದ 3 ದನಗಳನ್ನು ರಕ್ಷಿಸಿ ಗೋಶಾಲೆಗೆ ಬಿಡಲಾಗಿದೆ.
ಆರೋಪಿಗಳನ್ನು ಜಲೀಲ್ ಕಲ್ಲಬೆಟ್ಟು, ಸಾಹಿಲ್ ಮತ್ತು ಆತನ ಮಗ ಸೊಹೇಲ್ ಮತ್ತು ಕುದ್ರೋಳಿ ನಿವಾಸಿ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಿದ್ದು, ಆರೋಪಿಗಳು ಮನೆಯ ಹಿಂಬದಿ ಗುಡ್ಡೆಯಲ್ಲಿ ಪರಾರಿಯಾಗಿರುತ್ತಾರೆ. ಸ್ಥಳದಲ್ಲಿದ್ದ ಮಾಂಸ ಪಡೆಯಲು ಬಂದಿದ್ದ 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ವಿರುದ್ಧ ಮೂಡುಬಿದಿರೆ ಅಪರಾಧ ಕ್ರಮಾಂಕ 154/2025 ಕಲಂ 303(2) ಬಿ.ಎನ್.ಎಸ್. ಮತ್ತು 4, 12 ಗೋಹತ್ಯೆ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.