ಹಾಡುಗಳ ಮೂಲಕ ತುಳು ಅಭಿರುಚಿ ಮೂಡಿಸಲು ಸಾಧ್ಯ: ಭಾಸ್ಕರ್ ತೊಕ್ಕೊಟ್ಟು
ಮಂಗಳೂರು : ತುಳು ಭಾಷಾ ಕಲಿಕೆ ಮತ್ತು ಭಾಷಾಭಿಮಾನ ಮೂಡಿಸುವ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿ ಕೊಂಡಿರುವ “ಡೆನ್ನ ಡೆನ್ನಾನ-ಪದ ಪನ್ಕನ” ಅಭಿಯಾನವು ಮಹತ್ವಪೂರ್ಣವಾಗಿದೆಯೆಂದು ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ದೇಹಧಾರ್ಡ್ಯ ಪಟು ಭಾಸ್ಕರ ತೊಕ್ಕೊಟ್ಟು ಅಭಿಪ್ರಾಯಪಟ್ಟರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸರಕಾರಿ ಪ್ರೌಢಶಾಲೆ ಬಬ್ಬುಕಟ್ಟೆಯ ಜಂಟಿ ಆಶ್ರಯದಲ್ಲಿ ಬಬ್ಬುಕಟ್ಟೆ ಶಾಲೆಯಲ್ಲಿ ಗುರುವಾರದಂದು ವಿದ್ಯಾರ್ಥಿಗಳಿಗಾಗಿ ನಡೆದ ತುಳು ಹಾಡುಗಳ ಕಲಿಕಾ ಕಾರ್ಯಾಗಾರ ಮತ್ತು ಹಾಡುಗಳ ಪ್ರಸ್ತುತಿ”ಡೆನ್ನ ಡೆನ್ನಾನ – ಪದ ಪನ್ಕನ”ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಸಾಮಾಜಿಕ ಕಾರ್ಯಕರ್ತೆ ಸುಹಾಸಿನಿ ಬಬ್ಬುಕಟ್ಟೆ,ಉಳ್ಳಾಲ ನಗರಸಭಾ ಸದಸ್ಯರಾದ ಮುಶ್ತಾಕ್ ಪಟ್ಲ,ಬಬ್ಬುಕಟ್ಟೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಖೈರುನ್ನೀಸ , ಅಕಾಡೆಮಿಯ ಸದಸ್ಯರಾದ ಬೂಬ ಪೂಜಾರಿ ಮಳಲಿ, ಸಂಗೀತ ನಿರ್ದೇಶಕರಾದ ತೋನ್ಸೆ ಪುಷ್ಕಳ್ ಕುಮಾರ್ ಮತ್ತು ಗಾಯಕಿ ವಾಣಿ ಸಪ್ರೆ ಮೊದಲಾದವರು ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ನಾಯಕ್ ಸ್ವಾಗತಿಸಿದರು. ಶಿಕ್ಷಕಿ ದುರ್ಗಲತಾ ವಂದಿಸಿದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.


















