ಬಿಜೆಪಿ ಆಡಳಿತಾವಧಿಯಲ್ಲಿ ಯಾವುದೇ ಕೋಮು ಗಲಭೆಗಳು ನಡೆಯದೆ ಜನ ನೆಮ್ಮದಿಯಲ್ಲಿದ್ದಾರೆ : ಅಣ್ಣಾಮಲೈ
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜಿಲ್ಲೆಯಲ್ಲಿ ಕೋಮುಗಲಭೆಗಳಾಗಿವೆ. ಆದರೆ ಬಿಜೆಪಿ ಆಡಳಿತಾವಧಿಯಲ್ಲಿ ಯಾವುದೇ ಕೋಮು ಗಲಭೆಗಳು ನಡೆಯದೆ ಜನ ನೆಮ್ಮದಿಯಲ್ಲಿದ್ದಾರೆ. ಜನತೆ ಮತ್ತೆ ಕೋಮುಗಲಭೆಯ ಪರಿಸ್ಥಿತಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ದ.ಕ.ಜಿಲ್ಲೆಯಲ್ಲಿ ಒಂದು ಸ್ಥಾನವನ್ನೂ ಬಿಟ್ಟು ಕೊಡದಿದ್ದರೆ ಕೋಮುಗಲಭೆ ಆಗಲ್ಲ ಎಂದು ತಮಿಳುನಾಡು ರಾಜ್ಯದ ಬಿಜೆಪಿ ಅಧ್ಯಕ್ಷ, ರಾಜ್ಯದ ಚುನಾವಣಾ ಸಹ ಪ್ರಭಾರಿಯಾಗಿರುವ ಅಣ್ಣಾಮಲೈ ಅವರು ಹೇಳಿದರು.
ಮಾಡ್ನೂರು ಗ್ರಾಮದ ಕಾವು-ನನ್ಯದ ನೆಲಮಂಗಲ ಸಭಾಭವನದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿದೆ. ರೂ.90 ಸಾವಿರ ಕೋಟಿಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಅಭಿವೃದ್ಧಿ ಮಾಡಿದೆ. ನಾವು ಅಭಿವೃದ್ಧಿ ಕೆಲಸಗಳನ್ನು ಮಾಡಿ ಮತ ಕೇಳುತ್ತಿದ್ದೇವೆ. ಬಿಜೆಪಿ ಸರ್ಕಾರ ಮಾಡಿರುವ ಕೆಲಸವನ್ನು ನೋಡಿ, ಅರ್ಥಮಾಡಿಕೊಂಡು ಜನತೆ ಮತ ನೀಡಬೇಕು ಎಂದರು.
ಬಿಜೆಪಿ ದೇಶದಲ್ಲಿ 18 ಕೋಟಿ ಸದಸ್ಯರನ್ನು ಹೊಂದಿರುವ ಪಕ್ಷ. ಪುತ್ತೂರು ಸಂಘಟನೆ ಗಟ್ಟಿ ಇರುವ ಕ್ಷೇತ್ರ. ಈ ಚುನಾವಣೆ ಈಗ ನಮಗೊಂದು ಪರೀಕ್ಷೆ. ಇಲ್ಲಿ ನಾಯಕರು ಮುಖ್ಯವಲ್ಲ, ಕಾರ್ಯಕರ್ತರೇ ಮುಖ್ಯ. ಹಾಗಾಗಿ ಯಾರೂ ವ್ಯಕ್ತಿಯ ಮೇಲೆ ನಂಬಿಕೆ ಇಡಬೇಡಿ, ಪಕ್ಷದ ಮೇಲೆ ನಂಬಿಕೆ ಇಟ್ಟು ಪಕ್ಷವನ್ನು ಡೊಡ್ಡ ಅಂತರದಲ್ಲಿ ಗೆಲ್ಲಿಸಿಕೊಡಿ ಎಂದು ಅವರು ಮನವಿ ಮಾಡಿದರು.
ವೇದಿಕೆಯಲ್ಲಿ ಶಾಸಕ ಸಂಜೀವ ಮಠಂದೂರು, ಕ್ಷೇತ್ರ ಚುನಾವಣಾ ಉಸ್ತುವಾರಿ ರಾಜೇಶ್ ಕಾವೇರಿ,ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಬಿಂದು ಸುರೇಶ್,ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ರೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಮಂಡಲ ಸಮಿತಿಯ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ, ಬಿಜೆಪಿ ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ, ಬಿಜೆಪಿ ಯುವಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಬಳೆಜ್ಜ, ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತೀಶ್‍ಕುಮಾರ್ ಶಾಂತಿವನ, ಸುಳ್ಯ ತಮಿಳು ಸೇವಾ ಸಂಘದ ಪೆರುವಾಳ್, ಬಿಜೆಪಿ ಮಹಾ ಶಕ್ತಿ ಕೇಂದ್ರದ ವಿಜಯಕುಮಾರ್ ರೈ ಕೋರಂಗ ಮತ್ತಿತರರು ಉಪಸ್ಥಿತರಿದ್ದರು.



















