ಕಡಬ ಸರಸ್ವತೀ ವಿದ್ಯಾಲಯದಲ್ಲಿ ಆಂಗ್ಲ ಮಾಧ್ಯಮ ತರಗತಿಗಳ ಉದ್ಘಾಟನೆ
ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಕೊಟ್ಟು ಬದುಕುವುದು ಹೇಗೆ ಎಂದು ಅವರಿಗೆ ಕಲಿಸಿಕೊಟ್ಟಾಗ ಆ ಮಕ್ಕಳು ಮುಂದೆ ಜೀವನದಲ್ಲಿ ಜಯಗಳಿಸುತ್ತಾರೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|ಪ್ರಭಾಕರ ಭಟ್ ಹೇಳಿದರು.
ಅವರು ಕಡಬದ ಕೇವಳ ಹನುಮಾನ್ ನಗರದಲ್ಲಿರುವ ಸರಸ್ವತೀ ವಿದ್ಯಾಲಯದಲ್ಲಿ ಪ್ರಾರಂಭವಾದ ಆಂಗ್ಲ ಮಾಧ್ಯಮ ವಿಭಾಗದ ತರಗತಿಗಳ ಉದ್ಘಾಟನೆ ಹಾಗೂ ಶಾಲಾ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಂಗ್ಲ ಮಾಧ್ಯಮ ತರಗತಿಗಳನ್ನು ಉದ್ಘಾಟಿಸಿದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ವ್ಯಕ್ತಿತ್ವ ನಿರ್ಮಾಣ ಮಾಡುವುದರೊಂದಿಗೆ ರಾಷ್ಟನಿರ್ಮಾಣಕ್ಕೆ ಪ್ರೇರಣೆ ನೀಡುವ ಶಿಕ್ಷಣವನ್ನು ನೀಡಿದಾಗ ಸದೃಢ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ ಎಂದರು.
ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಮಾತನಾಡಿ ಈ ಭಾಗದ ವಿದ್ಯಾಭಿಮಾನಿಗಳ ಆಶಯದಂತೆ ನಾವು ಇಲ್ಲಿ ಆಂಗ್ಲ ಮಾಧ್ಯಮ ತರಗತಿಯನ್ನು ಪ್ರಾರಂಭಿಸಿದ್ದೇವೆ, ಈಗ ಆರು, ಏಳು ಹಾಗೂ ಎಂಟನೇ ತರಗತಿಯ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಿದ್ದೇವೆ ಮುಂದೆ ರಾಷ್ಟಿಯ ಶಿಕ್ಷಣ ನೀತಿಯನ್ವಯ ಹೈಸ್ಕೂಲು ವಿಭಾಗ ಮತ್ತು ಪಿಯುಸಿಯನ್ನು ಮುಂದುವರಿಸಲಾಗುವುದು ಎಂದರು.
ಸoಸ್ಥೆಯ ಅಧ್ಯಕ್ಷ ರವಿರಾಜ್ ಶೆಟ್ಟಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೆಶಕ ಕೃಷ್ಣ ಶೆಟ್ಟಿ ಕಡಬ, ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯಶಿಕ್ಷಕ ರಾಜೇಶ್ ಎನ್ ಅತಿಥಿಗಳಾಗಿ ಭಾಗವಹಿಸಿದ್ದರು. ಸರಸ್ವತೀ ವಿದ್ಯಾಲಯದ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶೈಲಶ್ರೀ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.