ಉಳ್ಳಾಲ: ‘ಕವಿಯಲ್ಲ-ನಾನೊಬ್ಬ ಹಾಡುಗಾರ’ ಕವನ ಸಂಕಲನ ಬಿಡುಗಡೆ

ಉಳ್ಳಾಲ: ಮೇಲ್ತೆನೆ’ ಸಂಘಟನೆ ಪ್ರಕಟಿಸಿದ ಕವಿ ಬಶೀರ್ ಅಹ್ಮದ್ ಕಿನ್ಯಾ ರಚಿಸಿರುವ ‘ಕವಿಯಲ್ಲ-ನಾನೊಬ್ಬ ಹಾಡುಗಾರ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.

ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಸ್ಥಾಪಕಾಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್
ಬಶೀರ್ ಅಹ್ಮದ್ ಕಿನ್ಯಾ ರಚಿಸಿರುವ ‘ಕವಿಯಲ್ಲ-ನಾನೊಬ್ಬ ಹಾಡುಗಾರ’ ಕವನ ಸಂಕಲನ ಬಿಡುಗಡೆಗೊಸಿದರು.

ಬಳಿಕ ಮಾತನಾಡಿದ ಅವರು, ಪ್ರಸಕ್ತ ದಿನಗಳಲ್ಲಿ ಅಧಿಕ ಸಂಖ್ಯೆಯ ಬ್ಯಾರಿ ಲೇಖಕ-ಲೇಖಕಿಯರು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕನ್ನಡ ಸಾರಸ್ವತ ಲೋಕದಲ್ಲಿ ಈ ಬ್ಯಾರಿ ಬರಹಗಾರರು ಯಾಕೆ ಕಾಣಿಸುತ್ತಿಲ್ಲ, ಗುರುತಿಸಿಕೊಂಡಿಲ್ಲ? ಬ್ಯಾರಿ ಸಮುದಾಯದಲ್ಲೇ ಹುಟ್ಟಿ ಬೆಳೆದ ಸಾಹಿತಿಗಳಾದ ಬೊಳುವಾರು ಮುಹಮ್ಮದ್ ಕುಂಞಿ, ಫಕೀರ್ ಮುಹಮ್ಮದ್ ಕಟ್ಪಾಡಿ ಕನ್ನಡ ಸಾರಸ್ವತ ಲೋಕದಲ್ಲಿ ನಿರೀಕ್ಷೆಗೂ ಮೀರಿ ಸಾಧಿಸಿದ್ದಾರೆ. ಆದರೆ ಆ ಮಟ್ಟಕ್ಕೆ ಇತರ ಬ್ಯಾರಿ ಲೇಖಕ-ಲೇಖಕಿಯರು ಇನ್ನೂ ಯಾಕೆ ಬೆಳೆದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಮಾತನಾಡಿ ‘ಕಲುಷಿತ ಸಮಾಜದಲ್ಲಿ ಮನಸುಗಳನ್ನು ಬೆಸೆಯಲು ಬಶೀರ್ ಅಹ್ಮದ್ ಕಿನ್ಯಾರಂತಹ ಬರಹಗಾರರ ಅಗತ್ಯವಿದೆ’ ಎಂದರು.

ಸಾಮಾಜಿಕ ಮುಖಂಡ ಫಾರೂಕ್ ಉಳ್ಳಾಲ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಸಾಮಾಜಿಕ ಮುಖಂಡ ನಝೀರ್ ಉಳ್ಳಾಲ್, ಪತ್ರಕರ್ತ ಎ.ಕೆ. ಕುಕ್ಕಿಲ, ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಕೊಣಾಜೆ ಭಾಗವಹಿಸಿ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಇಸ್ಮಾಯೀಲ್ ಮಾಸ್ಟರ್ ಕೃತಿ ಪರಿಚಯಿಸಿದರು. ಬಶೀರ್ ಅಹ್ಮದ್ ಕಿನ್ಯ ಅನಿಸಿಕೆ ವ್ಯಕ್ತಪಡಿಸಿದರು. ಮೇಲ್ತೆನೆಯ ಮಾಜಿ ಅಧ್ಯಕ್ಷರಾದ ಮನ್ಸೂರ್ ಅಹ್ಮದ್ ಸಾಮಣಿಗೆ ಮತ್ತು ಮುಹಮ್ಮದ್ ಬಾಷಾ ನಾಟೆಕಲ್, ಕೋಶಾಧಿಕಾರಿ ಇಬ್ರಾಹೀಂ ಹಾಜಿ ನಡುಪದವು, ಸದಸ್ಯ ಮಂಗಳೂರು ರಿಯಾಝ್ ,ಮೇಲ್ತೆನೆಯ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ . ಮಾಜಿ ಅಧ್ಯಕ್ಷ ಬಶೀರ್ ಕಲ್ಕಟ್ಟ . ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.