ಉಳ್ಳಾಲ: ಹರಕೆಯ ಕೋಲ ನೀಡಿದ ‘ಕೊರಗಜ್ಜ’ ಚಿತ್ರ ತಂಡ

ಉಳ್ಳಾಲ: ಕಲ್ಲಾಪು ಬುರ್ದುಗೋಳಿ ಶ್ರೀ ಗುಳಿಗ ಕೊರಗಜ್ಜ ಉದ್ಭವಶಿಲೆ ಆದಿಸ್ಥಳಕ್ಕೆ ಕ್ಷೇತ್ರಕ್ಕೆ ‘ಕೊರಗಜ್ಜ ’ ಚಿತ್ರ ತಂಡ ಚಿತ್ರ ಯಶಸ್ಸಿಗೆ ತಾವು ನೀಡಿದ ಹರಕೆಯ ಕೋಲದಲ್ಲಿ ಭಾಗವಹಿಸಿತು. ಈ ಸಂದರ್ಭ ಹಿರಿಯ ಸ್ಯಾಂಡಲ್ ವುಡ್ ನಟಿಯರಾದ ಶೃತಿ ಮತ್ತು ಭವ್ಯ ಕೂಡಾ ಭಾಗಿಯಾಗಿ ಅಜ್ಜನ ಕೋಲ ವೀಕ್ಷಿಸಿದರು.

ನಟಿ ಭವ್ಯ ಮಾತನಾಡಿ, ಕಳೆದ ಹುಟ್ಟುಹಬ್ಬದ ಸಂದರ್ಭದಲ್ಲೂ ಕ್ಷೇತ್ರಕ್ಕೆ ಭೇಟಿ ನೀಡಿರುವೆ. ಈ ಬಾರಿಯೂ ದೈವ ಇಚ್ಛೆಯಂತೆ ಅದೇ ದಿನ ಭೇಟಿ ನೀಡಿದ್ದೇನೆ. ಕೊರಗಜ್ಜನ ಆಶೀರ್ವಾದ ಮತ್ತು ಪವಾಡದಿಂದ ಇದು ಸಾಧ್ಯವಾಗಿದೆ, ಕೊರಗಜ್ಜ ಚಿತ್ರದಲ್ಲಿ ಪಂಜಂದಾಯ ಪಾತ್ರ ನಿರ್ವಹಿಸಿರುವೆ . ಅದ್ಭುತ ಕಲಾವಿದರುಗಳನ್ನು ಒಳಗೊಂಡ ಯಶಸ್ಸಿನ ಚಿತ್ರವಾಗಿ ಹೊರಹೊಮ್ಮಲಿದೆ. ಚಿತ್ರದ ಪ್ರತಿ ಕೆಲಸಕಾರ್ಯಗಳು ಪವಾಡ ರೀತಿಯಲ್ಲಿ ಕೊರಗಜ್ಜನ ದಯೆಯಿಂದ ನಡೆದುಬಂದಿದೆ ಎಂದರು.

ನಟಿ ಶೃತಿ ಮಾತನಾಡಿ , ಹಣ ಇದ್ದವರು ಸಿನೆಮಾ ಮಾಡಲು ಸಾಧ್ಯವಿಲ್ಲ. ದೇವರ ಅನುಗ್ರಹದಿಂದಷ್ಟೇ ಕೊರಗಜ್ಜ ಸಿನಿಮಾ ಮಾಡಿರುವುದು ಅನುಭವದಿಂದ ಕಂಡುಬಂದ ಸತ್ಯ. ಚಿತ್ರದ ಶೂಟಿಂಗ್ ಉದ್ದಕ್ಕೂ ಒಳ್ಳೆ ವಿಚಾರಗಳೇ ತುಂಬಿರುವುದು ದೈವದ ಅನುಗ್ರಹ. ತೆರೆಮರೆಯಲ್ಲಿದ್ದ ಕಲಾವಿದರನ್ನು ಕೂಡ ಸೂಕ್ತವಾಗಿ ಸಿನೆಮಾ ತೆಗೆದುಕೊಂಡು ಹೋಯಿತು. ೨೦೨೩ ರಲ್ಲಿ ತುಂಬಾ ನಿರೀಕ್ಷೆಯಲ್ಲಿರುವ ಸಿನೆಮಾಗಳಲ್ಲಿ ಕೊರಗಜ್ಜನ ಚಿತ್ರ ವೂ ಸೇರಿದೆ ಎಂದರು.

ನಿರ್ದೇಶಕ ಸುಧಿರ್ ರಾಜ್ ಅತ್ತಾವರ ಮಾತನಾಡಿ, ನಂಬಿಕೆಗಳಿಗೆ ಧಕ್ಕೆಯಾಗದಂತೆ ವೇಷಭೂಷಣಗಳನ್ನು ಅಭಾಸ ರೀತಿಯಲ್ಲಿ ಮಾಡುವುದು ತಪ್ಪು. ಚಿತ್ರದ ಶೂಟಿಂಗ್ ಸಂದರ್ಭ ತೊಂದರೆಗಳಾಗದಂತೆ ಗುಳಿಗ, ಕಲ್ಲುರ್ಟಿಗೆ ಗುಡಿ ಕಟ್ಟಿಯೇ ಮುಂದುವರಿದಿದ್ದೇವೆ. ವಿದ್ಯೆ ತಿಳಿದವರಲ್ಲಿ ಕೇಳಿಕೊಂಡು ಶೂಟಿಂಗ್ ನಡೆಸಲಾಗಿದೆ. ಮಾರ್ಚ್ ಕೊನೆಗೆ ಚಿತ್ರ ತೆರೆಕಾಣಲಿದೆ.
ಪ್ಯಾನ್ ಇಂಡಿಯಾ ರೀತಿಯಲ್ಲಿ ಸಿನೆಮಾ ತಯಾರಾಗುತ್ತಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ತುಳು ಭಾಷೆಯಲ್ಲಿಯೂ ಚಿತ್ರ ತೆರೆಕಾಣಲಿದೆ.

ಈ ಸಂದರ್ಭದಲ್ಲಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ವಿದ್ಯಾಧರ್ ಶೆಟ್ಟಿ ಸಹ ನಿರ್ಮಾಪಕ , ನಟಿ ಭವ್ಯ ಪುತ್ರಿ ಅದಿತಿ, ನಟಿ ಶ್ರುತಿ ಮಗಳು ಗೌರಿ, ನಾಯಕ ನಟ ಭರತ್ ಸೂರ್ಯ, ನಾಯಕ ನಟಿ ರಿತಿಕ, ಬಾಲ ನಟರುಗಳಾದ ಸುಧಾ, ನವನೀತ, ಶ್ರೀಹರಿ, ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ್ ನಾಯಕ್ , ಉಪಾಧ್ಯಕ್ಷ ದೇವದಾಸ್ ಗಟ್ಟಿ ಕಾಯಂಗಳ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ವಕೀಲ ಗಂಗಾಧರ್ ಉಳ್ಳಾಲ್, ಪುರುಷೋತ್ತಮ್ ಕಲ್ಲಾಪು ಉಪಸ್ಥಿತರಿದ್ದರು.

Related Posts

Leave a Reply

Your email address will not be published.