ಮಂಗಳೂರು: ಜನಪ್ರಗತಿಯ ಪಂಜು ಪುಸ್ತಕ ಬಿಡುಗಡೆ: ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರಿನ ಬಲ್ಮಠದ ಸಹೋದಯ ಹಾಲ್‌ನಲ್ಲಿ ಕರ್ನಾಟಕ ಅಧ್ಯಯನ ಕೇಂದ್ರ ಮತ್ತು ಬಂಟಮಲೆ ಅಕಾಡೆಮಿ ಗುತ್ತಿಗಾರು, ಸುಳ್ಯ ಅವರ ವತಿಯಿಂದ ಜನಪ್ರಗತಿಯ ಪಂಜು ಎಂಬ ಪುಸ್ತಕ ಬಿಡುಗಡೆ ಮತ್ತು ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಸದ್ಯ 95ರ ಪ್ರಾಯದವರಾದ ಕನ್ನಡ ಪತ್ರಿಕೋದ್ಯಮದ ಹಿರಿಯರು ಮತ್ತು ಒಂದು ಕಾಲದಲ್ಲಿ ತಮ್ಮ ತೀಕ್ಷ್ಣ ಪತ್ರಿಕೋದ್ಯಮಕ್ಕೆ ಪ್ರಸಿದ್ಧರಾಗಿದ್ದ ಕಲ್ಲೆ ಶಿವೋತ್ತಮರಾವ್ ಅವರ ಬಗೆಗೆ ಹೊರ ಬಂದ ಕೃತಿಯಿದು. 60-70ರ ದಶಕದಲ್ಲಿ ಪತ್ರಿಕೋದ್ಯಮದಲ್ಲಿ ಒಂದು ಕ್ರಾಂತಿ ಕಿಡಿ ಹೊತ್ತಿಸಿ ಪ್ರಜಾವಾಣಿ ಮೊದಲಾದ ಪತ್ರಿಕೆಗಳಲ್ಲಿ ದುಡಿದು, ತನ್ನದೆ ಜನಪ್ರಗತಿ ಪತ್ರಿಕೆ ನಡೆಸಿ, ಕರ್ನಾಟಕದೆಲ್ಲೆಡೆ ಒಂದು ಯುವ ಪಡೆಯನ್ನು ತಯಾರಿಸಿದವರು ಕಲ್ಲೆಯವರು. ಕನ್ನಡಕ್ಕೆ ಪೆರಿಯಾರ್, ಕೋವೂರ್ ಮೊದಲಾದ ವಿಚಾರವಾದಿಗಳನ್ನು ಗಾಢವಾಗಿ ಪರಿಚಯಿಸಿದ ಕೀರ್ತಿ ಕಲ್ಲೆ ಶಿವೋತ್ತಮರಾವ್ ಅವರಿಗೆ ಸಲ್ಲುತ್ತದೆ.

ಬಿ. ಕೆ. ಹರಿಪ್ರಸಾದ್ ಅವರು ಮಾತನಾಡಿ, ಇದು ಸಾಹಿತ್ಯದ ಸಭೆ ಆದುದರಿಂದ ನನ್ನ ರಾಜಕೀಯ ಎಳೆಯುವುದು ಸರಿಯಲ್ಲ. ನಮ್ಮ ಶಾಲಾ ದಿನಗಳಲ್ಲಿ ನನ್ನ ಕಬಡ್ಡಿ, ಕುಸ್ತಿ ತಂಡಗಳು ಇದ್ದುದರಿಂದ ನಮ್ಮ ಕಾಲೇಜಿನ ಆರೆಸ್ಸೆಸ್ ವಾತಾವರಣದಲ್ಲೂ ನನ್ನತನ ಬೆಳೆಸಿಕೊಳ್ಳಲು ಸಾಧ್ಯವಾಯಿತು. ಕಲ್ಲೆ ಶಿವೋತ್ತಮರಾವ್ ಅವರು ಕ್ರಾಂತಿಕಾರಿ ಪತ್ರಕರ್ತರು. ದೇವರಾಜ ಅರಸು ಅವರ ಸಾಮಾಜಿಕ ನೀತಿ ನಿರೂಪಣೆಯ ಪ್ರಮುಖರು ಕಲ್ಲೆ ಶಿವೋತ್ತಮರಾವ್. ಕರ್ನಾಟಕಕ್ಕೆ ಒಂದು ರೂಪ ನೀಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು. ಆದರೆ ಅದೆಲ್ಲ ಈಗ ದೊಡ್ಡ ಕುಳಗಳ ಕೈ ಸೇರಿವೆ. ಎಲ್ಲ ಜನ ಸಮುದಾಯಗಳನ್ನು ಗೌರವಿಸುವ ಒಂದು ಗಟ್ಟಿ ವಾತಾವರಣವನ್ನು ನಿರ್ಮಿಸಿದ ಪ್ರಮುಖರು ಕಲ್ಲೆ ಶಿವೋತ್ತಮರಾವ್. ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ, ನಾರಾಯಣ ಗುರುಗಳು, ಪೆರಿಯಾರ್, ಅಂಬೇಡ್ಕರ್ ಮೊದಲಾದವರು ಸಮಾಜದಲ್ಲಿ ಕ್ರಾಂತಿ ಬೀಜ ಬಿತ್ತಿದವರು. ನೆಹರು ಅವರ ಅಲಿಫ್ತ ನೀತಿ ಈಗಿನ ಆಡಳಿತದಲ್ಲಿ ಎಕ್ಕುಟ್ಟಿ ಹೋಗಿದೆ. ಬೆಂಗಳೂರಿನಲ್ಲೇ ೧೦೮ ಭಾಷಿಕರಿದ್ದಾರೆ. ಇಂತಾ ವೈವಿಧ್ಯಮಯ ದೇಶವನ್ನು ಉಳಿಸಬೇಕಾಗಿದೆ ಎಂದು ಹರಿಪ್ರಸಾದ್ ಅವರು ಹೇಳಿದರು.

ಭಾಷಾ ತಜ್ಞರು ಮತ್ತು ಶಿಕ್ಷಣ ತಜ್ಞ ಡಾ. ಸುಕುಮಾರ ಗೌಡ ಅವರು ಕುವೆಂಪು ಬಂಟಮಲೆ ಪ್ರಶಸ್ತಿ ಸ್ಥಾಪಿಸಿದ್ದು, ಅದನ್ನು ಕಲ್ಲೆ ಶಿವೋತ್ತಮರಾವ್ ಅವರ ಅನುಪಸ್ಥಿತಿಯಲ್ಲಿ ಪ್ರದಾನ ಮಾಡಿದರು.

ಪುರುಷೋತ್ತಮ ಬಿಳಿಮಲೆ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ ಕಲ್ಲೆಯವರು ಪ್ರಸ್ತುತಕ್ಕೂ ಸಲ್ಲುವ ಪತ್ರಕರ್ತರು ಎಂದರು.

ಕಲ್ಲೆ ಶಿವೋತ್ತಮರಾವ್ ಮಕ್ಕಳಾದ ಅಜಿತ್ ಮತ್ತು ಸ್ವರೂಪ ರಾಣಿ ಪ್ರಶಸ್ತಿ ಸ್ವೀಕಾರ ಮಾಡಿದರು.

ಸುಕುಮಾರ ಗೌಡ ಅವರು ಮಾತನಾಡಿ, ಕಲ್ಲೆ ಶಿವೋತ್ತಮರಾವ್ ಅವರು ಲೋಕ ಬೆಳಗಿದ ಪಂಜು. ಅವರಿಗೆ ಸಂದು ಕುವೆಂಪು ಬಂಟಮಲೆ ಪ್ರಶಸ್ತಿಯು ಸಾರ್ಥಕ್ಯ ಕಂಡಿದೆ ಎಂದರು.

ವೇದಿಕೆಯಲ್ಲಿ ಕಲ್ಲೆಯವರ ಮಕ್ಕಳಾದ ಸ್ವರೂಪ ರಾಣಿ, ಮಗ ಅಜಿತ್ ಅಶುತೋಷ್, ಮಾಜೀ ಮಂತ್ರಿ ಬಿ. ಕೆ. ಹರಿಪ್ರಸಾದ್, ಪುರುಷೋತ್ತಮ ಬಿಳಿಮಲೆ ಮತ್ತು ಪಾರ್ವತೀಶ ಬಿಳಿಮಲೆ ಉಪಸ್ಥಿತರಿದ್ದರು. ಪಾರ್ವತೀಶ ಬಿಳಿದಾಳೆ ಪ್ರಾಸ್ತಾವಿಕ ಮಾತು ಆಡಿದರು. ಎ. ಕೆ. ಹಿಮಕರ ನಿರೂಪಣೆ ಮಾಡಿದರು.

Related Posts

Leave a Reply

Your email address will not be published.