ಮಂಗಳೂರು ಡೆಡ್ ಸಿಟಿಯಾಗಿದೆ-ಜಿಲ್ಲೆಯ ಅಭಿವೃದ್ಧಿಗೆ ಹೊಸ ಅಲೋಚನೆ ಇದೆ -ಡಿಸಿಎಂ ಡಿಕೆಶಿ
ಮಂಗಳೂರು ಸಂಜೆ ಏಳು ಗಂಟೆಯ ನಂತರ ಡೆಡ್ ಸಿಟಿ ಆಗಿದೆ. ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು. ಇಲ್ಲಿನ ಬ್ಯಾಂಕ್‌ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗುತ್ತಾ ಇವೆ. ಮಂಗಳೂರಿನಲ್ಲಿ ಧರ್ಮ ರಾಜಕೀಯ ಇದೆ, ಬಿಜೆಪಿ ಇಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ಈ ಜಿಲ್ಲೆಯ ಬಗ್ಗೆ ನಾವು ಹೊಸ ಆಲೋಚನೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಮಂಗಳೂರಿನ ಅಡ್ಯಾರ್‌ನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದ ಮೈದಾನದ ಬಳಿ ಮಾತನಾಡಿದರು. ಇಲ್ಲಿನ ಜನ ದೇವಸ್ಥಾನಗಳಲ್ಲಿ ಭಕ್ತಿಯಿಂದ ಇರುತ್ತಾರೆ. ಅದೇ ವ್ಯವಹಾರಗಳಲ್ಲೂ ಇರಬೇಕು. ರಾಜಕೀಯದಲ್ಲಿ ಯಾವುದೂ ಶಾಶ್ವತ ಹಾಗೂ ಅಸಾಧ್ಯ ಇಲ್ಲ. ರಾಜಕಾರಣ ಸಾಧ್ಯತೆಗಳ ಕಲೆ, ಹೀಗಾಗಿ ಇಲ್ಲಿ ಬದಲಾವಣೆ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸದ ಡಿಕೆ ಸುರೇಶ್ ವಿರುದ್ಧವೇ ಸ್ಪರ್ಧಿಸಿದರೆ ಬೇಸರವಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಕುಮಾರಸ್ವಾಮಿ ವಿರುದ್ಧವೇ ಸ್ಪರ್ಧಿಸಿದ್ದವನು ನಾನು. ನನ್ನ ಸಹೋದರನ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ಆತನೇ ಗೆದ್ದಿದ್ದಾನೆ. ಬಿಜೆಪಿ, ಜೆಡಿಎಸ್ ನನ್ನ ಸಹೋದರನ ವಿರುದ್ಧ ಸ್ಪರ್ಧಿಸಿದ್ದಾಗಲೂ ಗೆದ್ದಿದ್ದಾನೆ. ಸುರೇಶ್ ದಿಲ್ಲಿಯಲ್ಲಿ ಕೂರುವ ಎಂಪಿ ಅಲ್ಲ, ಹಳ್ಳಿಯ ಸಂಸದ ಎಂದು ಹೇಳಿದರು.
ಜೆರೋಸಾ ಶಾಲೆ ವಿಚಾರ ಸಂಬಂಧ ಕಾನೂನು ರೀತಿಯಲ್ಲಿ ಪ್ರಕ್ರಿಯೆಗಳು ನಡೆಯಲಿದೆ. ಯಾರೇ ರಾಜಕೀಯ ಮಾಡಿದ್ದರೂ ಕಾನೂನು ಅದರ ಕೆಲಸ ಮಾಡಲಿದೆ. ಅವರು ಹೋರಾಟ ಮಾಡುತ್ತಾ ಇರಲಿ, ಕಾನೂನು ಕೆಲಸ ಮಾಡುತ್ತದೆ. ನಾನು ಪೊಲೀಸ್ ಕೆಲಸ ಮಾಡಲು ಆಗಲ್ಲ, ಪೊಲೀಸರೇ ಅದನ್ನು ಮಾಡುತ್ತಾರೆ. ನಮ್ಮ ರಾಜ್ಯಕ್ಕೆ ಅನ್ಯಾಯ ಆದಾಗ ಬಿಜೆಪಿ ಮಾತನಾಡಿಲ್ಲ. ಬಜೆಟ್‌ನಲ್ಲಿ ದ.ಕ ಜಿಲ್ಲೆಗೂ ಕೊಟ್ಟಿದ್ದೇವೆ, ಮುಸ್ಲಿಮರಿಗೆ ಕೂಡಲೇ ಬಾರದಾ. ಬಿಜೆಪಿಯವರು ರಾಜಕಾರಣ ಮಾಡ್ತಾ ಇದ್ದಾರೆ ಎಂದು ಡಿ.ಕೆ ಶಿವಕುಮಾರ್ ಟೀಕಿಸಿದರು.