ಮೂಡುಬಿದಿರೆ : ಮಧುಮೇಹ ಚಿಕಿತ್ಸಾ ತಜ್ಞ ಡಾ. ಎಂ.ವಿದ್ಯಾಧರ ಶೆಟ್ಟಿ ನಿಧನ
ಮೂಡು ಬಿದಿರೆ : ಮಧುಮೇಹ ಚಿಕಿತ್ಸಾ ತಜ್ಞ, ವೈದ್ಯರಾಗಿ ಐದು ದಶಕಗಳ ಸೇವೆ ಸಲ್ಲಿಸಿದ್ದ ಮೂಡುಬಿದಿರೆ ಮೂಲದ ಡಾ. ಎಂ. ವಿದ್ಯಾಧರ ಶೆಟ್ಟಿ (76 ವ) ಶನಿವಾರ ಮುಂಜಾವ ಮಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ಧಾರೆ.
ಮಂಗಳೂರಿನ ವಿಜಯಾ ಕ್ಲೀನಿಕ್ ಬಳಿಕ ಮೂಡುಬಿದಿರೆಯ ಜಿ.ವಿ.ಪೈ ಆಸ್ಪತ್ರೆಯಲ್ಲಿ ಮುಖ್ಯ ಅಧೀಕ್ಷಕ ವೈದ್ಯರಾಗಿದ್ದ ಅವರು ಮಂಗಳೂರ ಬಳಿಕ ಮೂಡುಬಿದಿರೆಯಲ್ಲೂ ರೋಟರಿ ಕ್ಲಬ್ ವಿವಿಧ ಹುದ್ದೆಗಳಲ್ಲಿದ್ದು ಬಳಿ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದರು.
ದ.ಕ ಜಿಲ್ಲಾ ಮಂಗಳೂರಿನ ಗೃಹರಕ್ಷಕ ದಳದ ಕಮಾಂಡೆಂಟ್ ಆಗಿದ್ದ ವಿದ್ಯಾಧರ ಶೆಟ್ಟಿ ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯರಾಗಿದ್ದರು. ಉತ್ತಮ ಛಾಯಾಚಿತ್ರಕಾರರಾಗಿ ದೇಶ ವಿದೇಶಗಳ ಐತಿಹಾಸಿಕ ಕ್ಷೇತ್ರಾಧ್ಯಯನ ನಡೆಸಿದ್ದರು.
ಮಂಗಳೂರು ಜೈನ್ ಮಿಲನ್ ನ ಅಧ್ಯಕ್ಷ ರಾಗಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಜೈನ ಧರ್ಮದ ಶಾಸ್ತ್ರ ಕೃತಿಗಳ ಮರು ಮುದ್ರಣವನ್ನು ಪ್ರೋತ್ಸಾಹಿಸಿ ಶಾಸ್ತ್ರದಾನ, ಬೆಳ್ತಂಗಡಿ ಬೈಪಾಡಿ ಜಿನಮಂದಿರದ ಅನುವಂಶೀಯ ಮೊಕ್ತೇಸರರಾಗಿ ಜೀರ್ಣೋದ್ಧಾರ ನಡೆಸಿದ್ದ ಅವರು ದ.ಕ ಜಿಲ್ಲಾ ಜೈನ ಮತ ಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಳೆದ 15 ವರ್ಷಗಳಿಂದ ಕರಾವಳಿಯ ಜಿನ ಮಂದಿರಗಳ ಸರ್ವೇಕ್ಷಣೆ ನಡೆಸಿದ್ದರು.
ಶ್ರವಣಬೆಳಗೊಳ, ಹೊಂಬುಜ , ನರಸಿಂಹರಾಜಪುರ, ಕಂಬದ ಹಳ್ಳಿ, ಮೂಡುಬಿದಿರೆ, ಕಾರ್ಕಳದ ಭಟ್ಟಾರಕರುಗಳ ನಿಕಟವರ್ತಿಯಾಗಿಯೂ ಧರ್ಮಕಾರ್ಯದಲ್ಲಿ ಅವರು ಗುರುತಿಸಿಕೊಂಡಿದ್ದರು.
ಡಾ. ವಿದ್ಯಾಧರ ಶೆಟ್ಟಿ ಅವರ ನಿಧನಕ್ಕೆ ಮೂಡುಬಿದಿರೆಯ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ , ಕಾರ್ಕಳ, ಕಂಬದ ಹಳ್ಳಿ ,ಹೊಂಬುಜ ಮಠದ ಭಟ್ಟಾರಕರುಗಳು, ಮಾಜಿ ಸಚಿವ , ಮೂಡುಬಿದಿರೆ ಜಿ.ವಿ. ಪೈ ಸ್ಮಾರಕ ಆಸ್ಪತ್ರೆ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ. ಅಭಯಚಂದ್ರ , ಕಾರ್ಯದರ್ಶಿ ಡಾ. ಹರೀಶ್ ನಾಯಕ್ , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಸಹಿತ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.