ನಿಡ್ಲೆ ಶೀರೂರು ಪರ್ಯಾಯ ಸ್ವಾಗತ ಸಮಿತಿಯಿಂದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಭವ್ಯ ಹುಟ್ಟೂರ ಗೌರವಾರ್ಪಣೆ
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಪರ್ಯಾಯ ಮಹೋತ್ಸವಕ್ಕೆ ಶೀರೂರು ಮಠದ ಪೀಠಾಧಿಪತಿ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದು, ಮುಂದಿನ ಎರಡು ವರ್ಷಗಳ ಕಾಲ ಶ್ರೀ ಕೃಷ್ಣ ದೇವರ ಪೂಜಾ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ. ಈ ಮಹತ್ತರ ಜವಾಬ್ದಾರಿಯ ಅಂಗವಾಗಿ ಶ್ರೀಪಾದರು ಕೈಗೊಂಡಿರುವ ದೇಶ–ಗ್ರಾಮ ಪರ್ಯಟನೆಯ ಭಾಗವಾಗಿ ಜ.1ರಂದು ತಮ್ಮ ಪೂರ್ವಾಶ್ರಮದ ಹುಟ್ಟೂರಾದ ನಿಡ್ಲೆ ಗ್ರಾಮಕ್ಕೆ ಆಗಮಿಸಿದರು.
ಶ್ರೀಪಾದರ ಪೂರ್ವಾಶ್ರಮ ನಿಡ್ಲೆ ಗ್ರಾಮದ ಮಚ್ಚಳೆ ಮನೆತನಕ್ಕೆ ಸೇರಿದ್ದು, ಹುಟ್ಟೂರಿನ ಶ್ರೀಪಾದರು ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಅಪರೂಪದ ಗೌರವಕ್ಕೆ ನಿಡ್ಲೆ ಗ್ರಾಮ ಸಾಕ್ಷಿಯಾಯಿತು. ನಿಡ್ಲೆ ಶೀರೂರು ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ಶ್ರೀಪಾದರಿಗೆ ಭವ್ಯ ಸ್ವಾಗತ ಏರ್ಪಡಿಸಲಾಯಿತು.
ನಿಡ್ಲೆ ಎಸ್ಎಲ್‌ವಿ ಪೆಟ್ರೋಲ್ ಪಂಪ್ ಸಮೀಪದಿಂದ ಚೆಂಡೆ ವಾದ್ಯ, ಪೂರ್ಣಕುಂಭ ಕಲಶ, ಭಕ್ತರ ಘೋಷಣೆಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆ ಕುದ್ರಾಯ ಆದಿತ್ಯ ವ್ಯೂ ಹೋಟೆಲ್‌ನ ಪಂಚವಟಿ ಸಭಾಂಗಣದವರೆಗೆ ಸಾಗಿತು.
ಸಭಾಂಗಣದಲ್ಲಿ ಶೀರೂರು ಪರ್ಯಾಯ ಸ್ವಾಗತ ಸಮಿತಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಶ್ರೀಪಾದರಿಗೆ ಹುಟ್ಟೂರ ಗೌರವಾರ್ಪಣೆ, ಪಾದಪೂಜೆ, ಪಾದಕಾಣಿಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಪಾದರಿಂದ ದೇವರಿಗೆ ವಿಶೇಷ ಪೂಜೆ ನೆರವೇರಿತು. ಬಳಿಕ ಶ್ರೀಪಾದರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ದಿವಾನ ಉದಯ ಕುಮಾರ್ ಅವರು ಶೀರೂರು ಪರ್ಯಾಯದ ಮಹತ್ವ ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರು ಮತ್ತು ಪ್ರವೀಣ್ ಹೆಬ್ಬಾರ್ ಸಹಕಾರ ನೀಡಿದರು.
ಭಕ್ತಿಭಾವದ ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಪಾಲ್ಗೊಂಡಿದ್ದು, ಡೀಕಯ್ಯ ಬರೆಂಗಾಯರ ಕೋಣಗಳು ವಿಶೇಷ ಆಕರ್ಷಣೆಯಾಗಿದ್ದವು.
ಕಾರ್ಯಕ್ರಮದಲ್ಲಿ ಶೀರೂರು ಪರ್ಯಾಯ ಸ್ವಾಗತ ಸಮಿತಿ ನಿಡ್ಲೆಯ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಮಚ್ಚಳೆ ಮನೆಯವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಭವ್ಯತೆ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಚಂದ್ರಶೇಖರ್ ಕಜೆ ಅವರು ವಹಿಸಿದ್ದರು.


















